ಸಿದ್ದರಾಮಯ್ಯ ಪುತ್ರ ರಾಕೇಶ್​ ಸಾವಿನ ಕುರಿತು ಸ್ಫೋಟಕ ಸತ್ಯ ತಿಳಿಸಿದ ಎಂಟಿಬಿ ನಾಗರಾಜ್​

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್​ ಸಿದ್ದರಾಮಯ್ಯ 2016ರಲ್ಲಿ ಬೆಲ್ಜಿಯಂ ಪ್ರವಾಸದ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಅವರ ಸಾವಿಗೆ ಕಾರಣರಾದವರು ಯಾರು ಎಂಬ ಸತ್ಯವನ್ನು ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಈಗ ಬಯಲು ಮಾಡಿದ್ದಾರೆ.

ಹೊಸಕೋಟೆಯಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ಸಿದ್ದರಾಮಯ್ಯ ತಮ್ಮ ವಿರುದ್ಧ ಮಾಡಿದ್ದ ಅರೋಪಗಳಿಗೆ ಎಂಟಿಬಿ ನಾಗರಾಜ್​ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನನ್ನ ಮೇಲೆ ಹೊರಿಸಿರುವ ಆರೋಪಗಳು ಶುದ್ಧ ಸುಳ್ಳು. ಸಿದ್ದರಾಮಯ್ಯಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ. ಎಸ್​.ಎಂ. ಕೃಷ್ಣ ನನಗೆ ಟಿಕೆಟ್​ ನೀಡಿದ್ದು, ಸಿದ್ದರಾಮಯ್ಯ ಅಲ್ಲ. ರಮೇಶ್​ ಕುಮಾರ್​, ಕೃಷ್ಣ ಬೈರೇಗೌಡ ಯಾವ ಪಕ್ಷದಿಂದ ಬಂದಿದ್ದಾರೆ. ಅವರೂ ಕೂಡಾ ಬೇರೆ ಕಡೆ ಮದುವೆಯಾಗಿ ಕಾಂಗ್ರೆಸ್​ಗೆ ಬಂದು ಸಂಸಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇನ್ನು ರಾಕೇಶ್​ ಸಿದ್ದರಾಮಯ್ಯ ಸಾವಿನ ಕುರಿತು ಮಾತನಾಡಿದ ಎಂಟಿಬಿ ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಭೈರತಿ ಸುರೇಶ್​ ಹಾಳು ಮಾಡಿದ. ರಾಕೇಶ್​ ಸಿದ್ದರಾಮಯ್ಯ ಮೃತಪಡಲು ಬೈರತಿ ಸುರೇಶ್​ ನೇರ ಕಾರಣ. ಬೈರತಿ ಸುರೇಶ್​ ರಾಜಕೀಯದಲ್ಲಿ ಇನ್ನು ಬಚ್ಚಾ, ಅವನ ಬಂಡವಾಳ ನನಗೆ ಗೊತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಿನೇಶ್​ ಗುಂಡೂರಾವ್​ ದುರ್ಬಲ ಅಧ್ಯಕ್ಷ

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಓರ್ವ ದುರ್ಬಲ ಅಧ್ಯಕ್ಷ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್​ಗೆ ಒಂದೇ ಸೀಟು ಗೆಲ್ಲಿಸಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯದಲ್ಲಿ ಕಾಂಗ್ರೆಸ್​ ಒಂದು ಸೀಟು ಗೆದ್ದ ಇತಿಹಾಸ ಇರಲಿಲ್ಲ. ಮುಂಚೂಣಿ ನಾಯಕರಿಂದಲೇ ಕಾಂಗ್ರೆಸ್​ ಸೋತು ಸುಣ್ಣವಾಗಿದೆ. ದಿನೇಶ್​ ಗುಂಡೂರಾವ್​ರಿಂದ ಕಾಂಗ್ರೆಸ್​ಗೆ ಇಂತಹ ದುರ್ಗತಿ ಬಂದಿದೆ. ದೇಶದಲ್ಲೂ ಕಾಂಗ್ರೆಸ್ ಇಲ್ಲ, ರಾಜ್ಯದಲ್ಲೂ ಕಾಂಗ್ರೆಸ್​ ಇಲ್ಲ. ಹೊಸಕೋಟೆಯಲ್ಲಿ ಯಾರೇ ಎದುರಾಳಿ ಬಂದರೂ ನಾವು ಹೆದರುವುದಿಲ್ಲ ಎಂದು ಎಂಟಿಬಿ ತಿಳಿಸಿದರು.

Leave a Reply

Your email address will not be published. Required fields are marked *