Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ತ್ಯಾಗ-ಬಲಿದಾನಗಳ ಸ್ಮರಣೆಯ ಮುಹರಂ ಆಚರಣೆ ಇಂದು

Friday, 21.09.2018, 3:03 AM       No Comments

| ನೂರಲಿ ಜೈನೋದ್ದಿನ್ ಜೈನೇಖಾನ್ ಜಮಖಂಡಿ

ಇಸ್ಲಾಂಧರ್ಮದ ಕುರಿತು ಕೊನೆಯ ಪ್ರವಾದಿ ಮುಹಮ್ಮದ(ಸ)ರು 40ನೇ ವಯಸ್ಸಿನಲ್ಲಿ ಪ್ರವಾದಿತ್ವ ಪಡೆದ ಮೇಲೆ 23 ವರ್ಷ ಇಸ್ಲಾಂಧರ್ಮದ ಬೆಳವಣಿಗೆಗಾಗಿ ಮಹತ್ತರ ಕಾರ್ಯ ಕೈಗೊಂಡಿದ್ದರು. ಕೊನೆಗೆ ಅವರು ‘ಅಲ್ಲಾಹ್ ಒಬ್ಬನೇ ಪ್ರಾರ್ಥನೆಗೆ, ಪೂಜೆಗೆ ಅರ್ಹ; ಅವನ ಆಜ್ಞೆಯ ಹೊರತು ಈ ಜಗತ್ತಿನಲ್ಲಿ ಒಂದು ಎಲೆಯೂ ಅಲ್ಲಾಡುವುದಿಲ್ಲ. ಅವನೇ ಸಕಲ ಜೀವಿಗಳಿಗೆ ಆಹಾರ-ನೀರು ಒದಗಿಸುವನು. ನಮ್ಮೆಲ್ಲರಿಗೆ ಅವನೇ ಜೀವ ಕೊಟ್ಟಿರುವನು’- ಇವೇ ಮುಂತಾದ ಸಂದೇಶಗಳನ್ನು ಜಗತ್ತಿಗೆ ಸಾರಿದರು.

ಪ್ರವಾದಿಗಳ ಮರಣದ ನಂತರ ಈ ಧರ್ಮದ ಸಂರಕ್ಷಣೆಯ ಜವಾಬ್ದಾರಿ ಅವರ ಅಳಿಯ ಹಜರತ್ ಅಲಿಯವರಿಗೆ ಬಂದಿತು. ಅವರನ್ನು ಅಲ್ಲಿನ ಕಾಫಿರರು ಮೋಸದಿಂದ ಕೊಂದರು. ಹಜರತ್ ಅಲಿಯವರ ಮಕ್ಕಳಾದ ಹಜರತ್ ಇಮಾಮ್ ಹಸನ್ (ರ) ಹಾಗೂ ಹಜರತ್ ಇಮಾಮ್ ಹುಸೈನ್ (ರ) ಅವರು ಕೊನೆಯ ಉಸಿರು ಇರುವವರೆಗೂ ಇಸ್ಲಾಂಧರ್ಮಕ್ಕೋಸ್ಕರ ಹೋರಾಡಿ ಪ್ರಾಣವನ್ನೇ ತೆತ್ತರು. ಧರ್ಮಪಾಲನೆಗಾಗಿ ಅವರು ಮಾಡಿದ ತ್ಯಾಗ ಮತ್ತು ಬಲಿದಾನಗಳ ನೆನಪು ಚಿರಾಯುವಾಗಲಿ ಎಂದು ಮುಹರ›ಂ ಹಬ್ಬವನ್ನು ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.

ಆಚರಣೆಯ ಹಿನ್ನೆಲೆ: ಆರಂಭದಲ್ಲಿ ಪ್ರವಾದಿಗಳ ವಿರೋಧಿಯಾಗಿ ಬಳಿಕ ಮತಾಂತರ ಹೊಂದಿದ್ದ ಅಬು ಸೂಫಿಯಾನ್​ರ ಮಗ ಹಜರತ್ ಮುಆವಿಯಾ ಅವರು ಖಲೀಫಾ (ಪ್ರಜಾಪ್ರಭುತ್ವ ವಿಧಾನದಿಂದ ಚುನಾಯಿಸಲ್ಪಟ್ಟ ಇಸ್ಲಾಮಿ ಆಡಳಿತಗಾರ) ಆದರು. ಅವರಿಗೆ ಈ ಪದವಿ ದೊರೆತ ಬಗ್ಗೆ ಅನೇಕ ಅನುಯಾಯಿಗಳ ವಿರೋಧವಿತ್ತು. ಆದರೂ ಅವರೆಲ್ಲ ಅರೆಮನಸ್ಸಿನಿಂದಲೇ ಮುಆವಿಯಾಗೆ ನಿಷ್ಠೆ ತೋರುತ್ತಿದ್ದರು. ನನ್ನ ಬಳಿಕ ಮಗ ಯಝೀದ್​ಗೆ ಪಟ್ಟವಾಗಬೇಕೆಂದು ಮುಆವಿಯಾ ತಿಳಿಸಿದ್ದರು. ವಂಶಾಡಳಿತ ಹೇರುತ್ತಿರುವರೆಂಬ ಕಾರಣಕ್ಕೆ ಹಜರತ್ ಇಮಾಮ್ ಹುಸೈನ್ (ರ) ಸೇರಿ ಹಲವರು ಇದನ್ನು ವಿರೋಧಿಸಿದರು. ಆದರೆ, ಮುಆವಿಯಾ ತೀರಿಕೊಂಡ ಬಳಿಕ ಅವರ ಮಗ ಯಝೀದ್​ನೇ ಖಲೀಫಾ ಸ್ಥಾನಕ್ಕೇರಿದ.

ನಾನಾ ದುರ್ಗಣಗಳಿಂದ ಕೂಡಿದ್ದ ಆತ, ತನಗೆ ಅನುಕೂಲವಾಗುವ ರೀತಿಯಲ್ಲಿ ಇಸ್ಲಾಂ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಸಹಜವಾಗಿ ಯಝೀದ್ ಆಡಳಿತವನ್ನು ಹ. ಇಮಾಮ್ ಹಸನ್ (ರ) ಹಾಗೂ ಹ. ಇಮಾಮ್ ಹುಸೈನ್ (ರ) ಸಹೋದರರು ವಿರೋಧಿಸಿದರು. ಆಗ ಹ. ಇಮಾಮ್ ಹಸನ್ (ರ) ಆಹಾರದಲ್ಲಿ ವಿಷ ಬೆರೆಸಿ ಸಾಯಿಸಲಾಯಿತು. ಸಹೋದರನ ಸಾವಿನ ಬಳಿಕವೂ ಹ. ಇಮಾಮ್ ಹುಸೈನ್ (ರ) ಆತನ ದುರಾಡಳಿತವನ್ನು ವಿರೋಧಿಸುತ್ತಿದ್ದರು. ಕೊನೆಗೆ ಹ. ಇಮಾಮ್ ಹುಸೈನ್(ರ)ರನ್ನು ಯಝೀದ್ ಸಂಧಾನಕ್ಕಾಗಿ ಆಹ್ವಾನಿಸಿದ. ಅವರು ಅದಕ್ಕೆ ಒಪ್ಪಲಿಲ್ಲ.

ಇತ್ತ ಯಝೀದ್​ನ ದುರಾಡಳಿತದಿಂದ ಬೇಸತ್ತ ‘ಕೂಫಾ’ದ ಜನ ಹ. ಇಮಾಮ್ ಹುಸೈನ್(ರ)ರನ್ನು ಆಡಳಿತಗಾರನನ್ನಾಗಿ ನೇಮಿಸಿಕೊಳ್ಳಲು ತೀರ್ವನಿಸಿ ಆಹ್ವಾನಿಸಿದರು. ಆ ಆಹ್ವಾನವನ್ನು ಮನ್ನಿಸಿ ಇಸ್ಲಾಮಿ ಸಂವಿಧಾನದ ಅನ್ವಯ ಉತ್ತಮ ಆಡಳಿತ ನೀಡಲು ಹ. ಇಮಾಮ್ ಹುಸೈನ್ (ರ) 72 ಅನುಯಾಯಿಗಳೊಂದಿಗೆ ಯಝೀದ್ ರಾಜ್ಯವನ್ನು ತೊರೆದು ಮೆಕ್ಕಾದತ್ತ ಹೊರಟರು. ‘ಒಂದು ವೇಳೆ ಮೆಕ್ಕಾಗೆ ತೆರಳಿದಾಗ ಯಝೀದ್ ತನ್ನನ್ನು ಕೊಲ್ಲಬಹುದು. ಆ ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ’ ಎಂದು ಇರಾಕ್ ದೇಶದ ಕರ್ಬಲಾದತ್ತ ಮಾರ್ಗ ಬದಲಿಸಿದರು.

ಕರ್ಬಲಾದಲ್ಲಿ ಎದುರಾದ ಯಝೀದ್​ನ ಭಾರೀ ಸೈನ್ಯವು, ‘ನಮ್ಮ ರಾಜ ಹೇಳಿದಂತೆ ಕೇಳಿದರೆ ನಿನ್ನನ್ನು ಜೀವಂತವಾಗಿ ಬಿಡುತ್ತೇವೆ’ ಎಂದರೂ ಹ. ಇಮಾಮ್ ಹುಸೈನ್ (ರ) ಯಾವುದೇ ಪ್ರಲೋಭನೆಗೆ ಸಿಲುಕಲಿಲ್ಲ. ಹೀಗಾಗಿ ಅವರಿಗೆ ಅನ್ನಾಹಾರ ಸಿಗದಂತೆ ಮಾಡಲಾಯಿತು. ಅವರ ಆರು ತಿಂಗಳ ಮಗ ದಾಹದಿಂದ ಬಳಲಿ ಸಾವಿಗೀಡಾದ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಹ. ಇಮಾಮ್ ಹುಸೈನ್ (ರ) ಸುದೀರ್ಘ ಕಾಲ ಹೋರಾಡಬೇಕಾಗಿ ಬಂದರೂ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದ ಕುಪಿತಗೊಂಡ ಯಝೀದ್ ಸೈನಿಕರು ಕದನವಿರಾಮದ ಅವಧಿಯಲ್ಲಿ ಡೇರೆಯ ಬಳಿ ತೆರಳಿ ನಮಾಜ್ ಮಾಡುತ್ತಿದ್ದ ಹ. ಇಮಾಮ್ ಹುಸೈನ್ (ರ) ಶಿರಚ್ಛೇದ ಮಾಡಿದರು.

(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)

ಒಳಿತಿಗಾಗಿ ಆತ್ಮಾರ್ಪಣೆ

ಜೀವನದ ಕೊನೆಯವರೆಗೂ ಇಸ್ಲಾಂಧರ್ಮದ ಉಳಿವಿಗಾಗಿ ಹೋರಾಡಿದ್ದ ಹ. ಇಮಾಮ್ ಹುಸೈನ್ (ರ) ಅವರು ವೀರಮರಣವನ್ನಪ್ಪಿದ್ದು ಮುಹರ›ಂ ತಿಂಗಳ ಹತ್ತನೆಯ ದಿನದಂದು. ಅಂದು ಇಸ್ಲಾಂ ಅನುಯಾಯಿಗಳು ಹುತಾತ್ಮರು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಳ್ಳಲು ಹರಿತವಾದ ಉಪಕರಣಗಳಿಂದ ಬೆನ್ನು, ಎದೆಯ ಮೇಲೆ ಗಾಯ ಮಾಡಿಕೊಂಡು ರಕ್ತ ಬರಿಸಿಕೊಳ್ಳುತ್ತಾರೆ. ಈ ತಿಂಗಳಿಡೀ ಕಪು್ಪಬಟ್ಟೆ ಧರಿಸುವ ಪದ್ಧತಿಯೂ ಇದೆ. ಕೆಲವು ಪ್ರದೇಶಗಳಲ್ಲಿ ಹುಲಿವೇಷ ಧರಿಸಿ ಕುಣಿಯುತ್ತಾರೆ. ಇಂಥ ಕೆಲವು ಕ್ರಿಯೆಗಳು ಸ್ಥಳೀಯ ಸಂಸ್ಕೃತಿಯ ಪ್ರಭಾವದಿಂದ ಆಚರಣೆಗೆ ಬಂದಿವೆ. ಇಸ್ಲಾಂ ಸಂವಿಧಾನದ ಮೂಲಭೂತ ತತ್ತ್ವಗಳ ಉಳಿವಿಗಾಗಿ, ಒಳಿತಿನ ಸ್ಥಾಪನೆ ಹಾಗೂ ಕೆಡುಕಿನ ನಿವಾರಣೆಗಾಗಿ ಮಾಡಿದ ಆತ್ಮಾರ್ಪಣ ಎಂದು ಹ. ಇಮಾಮ್ ಹುಸೈನ್ (ರ) ಅವರ ವೀರಮರಣವನ್ನು ವ್ಯಾಖ್ಯಾನಿಸಬಹುದು. ದುರಾಡಳಿತದ ವಿರುದ್ಧ ಹೋರಾಡುವಂತಹ ಮನೋಬಲವನ್ನು ಈ ಆಚರಣೆಯು ವೃದ್ಧಿಸುತ್ತದೆ.

Leave a Reply

Your email address will not be published. Required fields are marked *

Back To Top