ಧೋನಿ ಟೀಂ ಇಂಡಿಯಾದ ನಾಯಕ !

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಮಹೇಂದ್ರ ಸಿಂಗ್​ ಧೋನಿ ಇತ್ತೀಚೆಗಷ್ಟೇ ಭಾರಿ ಸುದ್ದಿಯಾಗಿದ್ದರು. ಕ್ರಿಕೆಟ್​ನಿಂದ ಅವರು ಇನ್ನೇನು ನಿವೃತ್ತಿ ಆಗಿಯೇ ಬಿಟ್ಟರು ಎಂಬ ಮಟ್ಟಿಗೆ ವ್ಯಾಖ್ಯಾನಗಳೂ ಕೇಳಿ ಬಂದವು. ಆದರೆ, ಅವುಗಳನ್ನೆಲ್ಲ ರವಿಶಾಸ್ತ್ರಿ ಅಲ್ಲಗೆಳೆದು ಸುದ್ದಿಯನ್ನು ತಣ್ಣಗಾಗಿಸಿದರು. ಹೀಗಿರುವಾಗಲೇ ಇನ್ನೊಂದು ಸುದ್ದಿ ಬಂದಿದೆ. ಅದೇನೆಂದರೆ ಧೋನಿ ಟೀಂ ಇಂಡಿಯಾಕ್ಕೆ ನಾಯಕ ಎಂಬುದು.

ಮಹೇಂದ್ರ ಸಿಂಗ್​ ಧೋನಿ ಟೀಂ ಇಂಡಿಯಾದ ಎಲ್ಲ ಪ್ರಕಾರದ ಕ್ರಿಕೆಟ್​ನ ನಾಯಕತ್ವದಿಂದ ಕೆಳಗಿಳಿದು ಅದಾಗಲೇ 2 ವರ್ಷ ಕಳೆದಿವೆ. ಆದರೆ, ಸದ್ಯ ಅವರು ಕ್ರಿಕೆಟ್​ ತಂಡಕ್ಕೆ ಕ್ಯಾಪ್ಟನ್​ ಆಗಿರುವ ಕುರಿತು ಭಾರತೀಯ ಕ್ರಿಕೆಟ್​ ನಿಯಂತ್ರಣಾ ಮಂಡಳಿ (ಬಿಸಿಸಿಐ)ಯ ವೆಬ್​ಸೈಟ್​ನಲ್ಲೇ ಉಲ್ಲೇಖಿಸಲಾಗಿದೆ!

ಆದರೆ, ಅದು ಧೋನಿ ಅವರನ್ನು ಪುನಃ ನಾಯಕನನ್ನಾಗಿ ನೇಮಿಸಿದ ಬಗ್ಗೆ ನೀಡಿದ ಮಾಹಿತಿ ಅಲ್ಲ. ಬದಲಿಗೆ ಧೋನಿ ಅವರ ಪ್ರೋಫೈಲ್​ ಅನ್ನು ಅಪ್ಡೇಟ್​ ಮಾಡದೇ ಇರುವುದರಿಂದ ಆಗಿರುವ ಪ್ರಮಾದ. ಧೋನಿ ಅವರು ನಾಯಕತ್ವದಿಂದ ಕೆಳಗಿದಾಗ್ಯೂ ಬಿಸಿಸಿಐ ಅವರ ಪ್ಲೇಯರ್​ ಪ್ರೊಫೈಲ್​ ಅನ್ನು ಅಪ್ಡೇಟ್​ ಮಾಡುವ ಗೋಜಿಗೆ ಹೋಗಿಲ್ಲ.

ಭಾರಿ ಪ್ರಮಾಣದ ಆದಾಯ ಹೊಂದಿರುವ, ಶ್ರೀಮಂತ ಮತ್ತು ಅತ್ಯಂತ ವ್ಯವಸ್ಥಿತ ಸಂಸ್ಥೆ ಎಂದೇ ಕರೆಸಿಕೊಳ್ಳವ ಬಿಸಿಸಿಐನಿಂದ ಆಗಿರುವ ಈ ಪ್ರಮಾದಕ್ಕೆ ನೆಟ್ಟಿಗರಿಂದ ಭಾರಿ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಟ್ರೋಲ್​ ಆಗಿದೆ.

ಸಾಮಾಜಿ ತಾಣಗಳಲ್ಲಿ ಆಗುತ್ತಿರುವ ಟ್ರೋಲ್​ಗಳಿವು

ತಪ್ಪು ಸರಿಪಡಿಸಿದ ಬಿಸಿಸಿಐ 

ಧೋನಿ ಇನ್ನೂ ನಾಯಕ ಎಂದು ಬಿಸಿಸಿಐನ ವೆಬ್​ಸೈಟ್​ನಲ್ಲಿ ಬಿತ್ತರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗಳು ಶುರುವಾದ ಹಿನ್ನೆಲೆಯಲ್ಲಿ ಬಿಸಿಸಿಐ ತಪ್ಪು ಸರಿ ಮಾಡಿಕೊಂಡಿದೆ. ಟೀಂ ಇಂಡಿಯಾದ ಕ್ಯಾಪ್ಟನ್​ ಎಂಬುದನ್ನು ತೆಗೆದುಹಾಕಿದೆ.

ಮಹೇಂದ್ರ ಸಿಂಗ್​ ಭಾರತೀಯ ಟಿ20 ತಂಡದ ಮೊದಲ ನಾಯಕ ಮತ್ತು ಮೊದಲ ಟಿ20 ವಿಶ್ವಕಪ್​ ಗೆದ್ದ ಯಶಸ್ವಿ ಕ್ಯಾಪ್ಟನ್​ ಕೂಡ ಹೌದು. ಟಿ20 ವಿಶ್ವಕಪ್​​ ಗೆದ್ದ ಯಶಸ್ಸಿನಲ್ಲಿದ್ದ ಧೋನಿಯನ್ನು ಭಾರತೀಯ ಏಕದಿನ ಕ್ರಿಕೆಟ್​ ತಂಡದ ನಾಯಕನನ್ನಾಗಿಯೂ ನೇಮಕ ಮಾಡಲಾಯಿತು. ಯಶಸ್ಸಿನ ಯಾತ್ರೆ ಮುಂದುವರಿಸಿದ್ದ ಧೋನಿ ಏಕದಿನ ವಿಶ್ವಕಪ್​ ಅನ್ನು ಗೆದ್ದುಕೊಟ್ಟಿದ್ದರು.