ಆಸ್ಟ್ರೇಲಿಯಾ ವಿರುದ್ಧದ ಮೂರೂ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಎಂಎಸ್​ಡಿ

ಕ್ಯಾನ್​ಬೆರ: ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಮತ್ತು ಕೊನೆ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ 87 ರನ್​ ಗಳಿಸುವ ಸರಣಿಯ ಮೂರೂ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಕೀರ್ತಿಗೆ ಭಾಜನರಾಗಿದ್ದಾರೆ. ಜತೆಗೆ ಈ ಪಂದ್ಯದ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಪಂದ್ಯದಲ್ಲಿ 1,000 ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಈಗಾಗಲೇ ಆಸ್ಟ್ರೇಲಿಯಾ ನೆಲದಲ್ಲಿ 1000 ರನ್​ ಗಳಿಸಿದ್ದು, ಎಂಎಸ್​ಡಿ ಶುಕ್ರವಾರ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡಿ ಪಟ್ಟಿಗೆ ಸೇರಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ 114 ಬಾಲ್​ಗಳಿಗೆ 87 ರನ್​ ಗಳಿಸಿ ಟೀಂ ಇಂಡಿಯಾ ಸರಣಿ ಗೆಲ್ಲಲು ಕಾರಣರಾದರು. ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಎಂಎಸ್​ಡಿ 96 ಎಸೆತಕ್ಕೆ 51 ರನ್​ ಗಳಿಸಿದ್ದರು. ಅಂತೆಯೇ ಅಡಿಲೇಡ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ 54 ಎಸೆತಕ್ಕೆ 55 ರನ್​ ಗಳಿಸಿದ್ದರು.

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ 10 ಸಾವಿರ ರನ್​ ಗಳಿಸಿದ ಐದನೇ ಆಟಗಾರರಾಗಿ ಧೋನಿ ಗೌರವಕ್ಕೆ ಪಾತ್ರರಾಗಿದ್ದರು. ಭಾರತದ ಪರ ಸಚಿನ್​ ತೆಂಡುಲ್ಕರ್​ (18,426), ಸೌರವ್​ ಗಂಗೂಲಿ (11,221), ರಾಹುಲ್​ ದ್ರಾವಿಡ್​ (10,768), ವಿರಾಟ್​ ಕೊಹ್ಲಿ 10 ಸಾವಿರಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ. (ಏಜೆನ್ಸೀಸ್)