ಧೋನಿ ಅಂಪೈರ್​ನಿಂದ ಅಂದು ಬಾಲ್​ ಪಡೆದುಕೊಂಡಿದ್ದು ಏಕೆ ಗೊತ್ತಾ? ಧೋನಿ ಉತ್ತರ ನೋಡಿ…

ನವದೆಹಲಿ: ಭಾರತೀಯ ಕ್ರಿಕೆಟ್​ನ ಮಾಜಿ ನಾಯಕ, ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ಇನ್ನೇನು ನಿವೃತ್ತಿ ಪಡೆದೇ ಬಿಟ್ಟರು ಎಂಬ ಊಹಾಪೋಹ ಹುಟ್ಟಿಕೊಳ್ಳಲು ಕಾರಣವಾಗಿದ್ದ ಆ ಘಟನೆಯ ಬಗ್ಗೆ ಧೋನಿ ಕೊನೆಗೂ ಮಾತನಾಡಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಮೂರು ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಭಾರತ ಸೋತು ಸರಣಿಯನ್ನೂ ಕೈಚೆಲ್ಲಿತ್ತು. ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್​ ರೂಂ ಕಡೆಗೆ ಹೆಜ್ಜೆ ಹಾಕುತ್ತಿದ್ದ ಆಟಗಾರರೊಂದಿಗೆ ಹಿಂದೆ ನಡೆದು ಬರುತ್ತಿದ್ದ ಧೋನಿ, ಅಂಪೈರ್​ ಬಳಿ ತೆರಳಿ ಪಂದ್ಯಕ್ಕೆ ಬಳಸಿದ್ದ ಚೆಂಡನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅಂಪೈರ್​ ಕೂಡ ಚೆಂಡನ್ನು ಧೋನಿಗೆ ಕೊಟ್ಟಿದ್ದರು.

ಈ ಘಟನೆ ನಡೆದದ್ದೇ ತಡ, ಧೋನಿ ತಮ್ಮ ಕೊನೆ ಪಂದ್ಯದ ಜ್ಞಾಪಕಾರರ್ಥವಾಗಿ ಆ ಪಂದ್ಯದ ಚೆಂಡನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರು ನಿವೃತ್ತಿ ಪಡೆಯಲಿದ್ದಾರೆ ಎಂದೆಲ್ಲ ವ್ಯಾಖ್ಯಾನಗಳು ಬಂದಿದ್ದವು. ಆದರೆ, ಮಾಜಿ ಕ್ರಿಕೆಟಿಗ ರವಿಶಾಸ್ತ್ರೀ ಈ ಊಹಾಪೋಹಗಳಿಗೆಲ್ಲ ತೆರೆ ಎಳೆದು ಧೋನಿ ಇನ್ನೂ ಒಂದಷ್ಟು ಕಾಲ ಆಡಲಿದ್ದಾರೆ ಎಂದು ಹೇಳಿದ್ದರು. ಆದರೂ, ಘಟನೆ ಕುರಿತ ಅನುಮಾನಗಳು ಮಾತ್ರ ನಿವಾರಣೆಯಾಗಿರಲಿಲ್ಲ.

ಆದರೆ, ಅಂದು ತಾವು ಚೆಂಡನ್ನು ಪಡೆದದ್ದು ಏಕೆ ಎಂದು ಧೋನಿ ಸ್ವತಃ ಈಗ ಬಹಿರಂಗಪಡಿಸಿದ್ದಾರೆ. ” ಮುಂದಿನ ವರ್ಷ ಇದೇ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕ್ರಿಕೆಟ್​ ವಿಶ್ವಕಪ್​ ಕೂಟದ ತಯಾರಿಗಾಗಿ ನಾನು ಆ ಚೆಂಡನ್ನು ಪಡೆದುಕೊಂಡಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ.

” ನಾವು ಮುಂದಿನ ವರ್ಷ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ಆಡಬೇಕಾಗಿದೆ. ಹೀಗಾಗಿ ನಾವು ರಿವರ್ಸ್​ ಸ್ವಿಂಗ್​ನಿಂದ ಹೆಚ್ಚು ವಿಕೆಟ್​ ಗಳಿಸುವುದು ಮುಖ್ಯ. ಸದ್ಯ ರಿವರ್ಸ್​ ಸ್ವಿಂಗನಲ್ಲಿ ನಮಗೆ ಹೆಚ್ಚು ವಿಕೆಟ್​ ಸಿಗುತ್ತಿಲ್ಲ. ಆದರೆ, ಎದುರಾಳಿಗಳಿಗೆ ವಿಕೆಟ್​ ಸಿಗುತ್ತಿದೆ. ಬೌಲಿಂಗ್​ನಲ್ಲಿ ಏನಾದರೂ ಸಂಗತಿಗಳು ತಿಳಿಯಬಹುದು ಎಂಬ ಕಾರಣಕ್ಕೆ ನಾನು ಆ ಚೆಂಡನ್ನು ಕೇಳಿ ಪಡೆದುಕೊಂಡೆ” ಎಂದು ಅವರು ತಿಳಿಸಿದ್ದಾರೆ.

ಹೀಗೆ ಹೇಳುವ ಮೂಲಕ ಧೋನಿ ತಾವು ವಿಶ್ವಕಪ್​ಗೆ ತಯಾರಾಗುತ್ತಿರುವುದಾಗಿಯೂ, ಅದರ ಜತೆಗೆ ತಂಡಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿಯೂ ಸ್ಪಷ್ಟವಾಗಿ ತಿಳಿಸಿದ್ದಾರೆ.