ಕೊಹ್ಲಿಗೆ ನಾಯಕತ್ವ ಹಸ್ತಾಂತರಿಸಿದ ಕುರಿತು ಎಂ.ಎಸ್​. ಧೋನಿ ಹೇಳಿದ್ದೇನು?

ರಾಂಚಿ: ಭಾರತ ತಂಡ ಕಂಡ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ತಾವು ನಾಯಕತ್ವವನ್ನು ವಿರಾಟ್​ ಕೊಹ್ಲಿಗೆ ಹಸ್ತಾಂತರಿಸಿದ್ದು ಏಕೆ ಎಂಬ ಸತ್ಯವನ್ನು ಬಯಲು ಮಾಡಿದ್ದಾರೆ.

ಇತ್ತೀಚೆಗೆ ಬಿಸ್ರಾ ಮುಂಡಾ ಏರ್​ಪೋರ್ಟ್​ನಲ್ಲಿ ಆಯೋಜಿಸಲಾಗಿದ್ದ ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ ತಾವು ನಾಯಕತ್ವವನ್ನು ಹಸ್ತಾಂತರಿಸಿದ ಸಂದರ್ಭದ ಕುರಿತು ವಿವರವಾಗಿ ತಿಳಿಸಿದ್ದಾರೆ.

2019ರ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಹೊಸ ನಾಯಕನಿಗೆ (ವಿರಾಟ್​ ಕೊಹ್ಲಿ) ಸಾಕಷ್ಟು ಸಮಯಾವಕಾಶ ಸಿಗಲಿ ಎಂಬ ಕಾರಣಕ್ಕಾಗಿ ನಾನು ಟೀಂ ಇಂಡಿಯಾ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ತಂಡದ ನಾಯಕನಿಗೆ ಸೂಕ್ತ ಸಮಯಾವಕಾಶವನ್ನು ನೀಡದೆ ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾನು ಸೂಕ್ತ ಸಂದರ್ಭದಲ್ಲೇ ನಾಯಕತ್ವವನ್ನು ತ್ಯಜಿಸಿದ್ದೇನೆ ಎಂಬ ವಿಶ್ವಾಸವಿದೆ ಎಂದು ಧೋನಿ ತಿಳಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಭಾರತ ತಂಡ ಟೆಸ್ಟ್​ ಸರಣಿಯಲ್ಲಿ ಸೋಲನುಭವಿಸಿದ ಕುರಿತು ಮಾತನಾಡಿದ ಧೋನಿ ಭಾರತ ತಂಡ ಅಭ್ಯಾಸ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬ್ಯಾಟ್ಸ್​ಮನ್​ಗಳು ಸ್ಥಳೀಯ ವಾತಾವರಣ ಮತ್ತು ಪಿಚ್​ಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿದೆ. ಇದು ಆಟದ ಭಾಗವಷ್ಟೇ. ಆದರೂ ಭಾರತ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ನಂ. 1 ತಂಡ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.

ಧೋನಿ 2014ರಲ್ಲಿ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಆ ನಂತರ ಅವರು ಏಕದಿನ ತಂಡದ ನಾಯಕತ್ವವನ್ನೂ ತ್ಯಜಿಸಿ ಓರ್ವ ಆಟಗಾರನಾಗಿ ತಂಡದಲ್ಲಿ ಮುಂದುವರೆದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *