VIDEO| ಕಣ್ಣು ರಪ್ಪೆ ಮಿಟುಕಿಸುವಷ್ಟರಲ್ಲಿ ಸ್ಟಂಪ್ ಔಟ್​: ಧೋನಿಗೆ ಧೋನಿಯೇ ಸಾಟಿ ಎಂದ ಅಭಿಮಾನಿಗಳು

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​.ಧೋನಿ ಅವರ ವಿಕೆಟ್​ ಕೀಪಿಂಗ್​ ಕೌಶಲಕ್ಕೆ ಮರುಳಾಗದವರೇ ಇಲ್ಲ. ಕಣ್ಣು ರಪ್ಪೆ ಮಿಟುಕಿಸುವಲ್ಲಿ ಸ್ಟಂಪ್​ ಔಟ್​ ಮಾಡುವ ಧೋನಿ ಸಾಮರ್ಥ್ಯ ಮತ್ತೊಮ್ಮೆ ಸಾಬೀತಾಗಿದೆ.

ಶನಿವಾರ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್​ ಆಟಗಾರ ರಾಸ್​ ಟೇಲರ್​ ಅವರು ಕಾಲನ್ನು ಮುಂದೆ ಚಾಚಿ ಹೊಡೆಯಲು ಪ್ರಯತ್ನಿಸಿ ಬ್ಯಾಲೆನ್ಸ್​ ಕಳೆದುಕೊಂಡು ಸರಿಪಡಿಸಿಕೊಳ್ಳುವಷ್ಟರಲ್ಲಿ ಧೋನಿ ಮಾಡಿದ ಮಿಂಚಿನ ಸ್ಟಂಪ್​ಗೆ ಬಲಿಯಾದರು.

ಧೋನಿ ಸ್ಟಂಪ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕ್ರಿಕೆಟ್​ ದಿಗ್ಗಜರು ಸೇರಿದಂತೆ ಕ್ರೀಡಾಭಿಮಾನಿಗಳು ಧೋನಿ ಸಾಮರ್ಥ್ಯವನ್ನು ಟ್ವೀಟ್​ ಮೂಲಕ ಕೊಂಡಾಡಿದ್ದಾರೆ.

ಒಟ್ಟು 337 ಏಕದಿನ ಪಂದ್ಯಗಳನ್ನಾಡಿರುವ 37 ವರ್ಷದ ಧೋನಿ ಅವರು 311 ಕ್ಯಾಚ್​ ಹಿಡಿದಿದ್ದು, 119 ಸ್ಟಂಪ್​ ಮಾಡಿದ್ದಾರೆ. ಆಸಿಸ್​ನ ಆಡಮ್​ ಗಿಲ್​ಕ್ರಿಸ್ಟ್​, ಲಂಕಾದ ಕುಮಾರ್​ ಸಂಗಕ್ಕರ ನಂತರದ ಸ್ಥಾನವನ್ನು ಧೋನಿ ಕಾಯ್ದುಕೊಂಡಿದ್ದಾರೆ. ಅವರು ಸಾಮರ್ಥ್ಯ ಹೀಗೆ ಮುಂದುವರಿದಿದ್ದಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಡಲಿದ್ದಾರೆ.

ಪ್ರಸ್ತುತ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ. ಎರಡನೇ ಪಂದ್ಯದಲ್ಲಿ ದಾಖಲೆಯ 90 ರನ್​ ಅಂತರದಲ್ಲಿ ಟೀಂ ಇಂಡಿಯಾ ಕಿವೀಸ್​ ವಿರುದ್ಧ ಜಯ ಸಾಧಿಸಿತು. (ಏಜೆನ್ಸೀಸ್​)