ಕಾರ್​ ನಂಬರ್​ ಪ್ಲೇಟ್​ನಲ್ಲಿ ಧೋನಿ ಹೆಸರು: ವಿಸಿಲ್​ ಪೋಡು ಎಂದು ಸಿಎಸ್​ಕೆ ಸಂಭ್ರಮ

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಜಗತ್ತಿನ ಮೂಲೆಗಳಲ್ಲೂ ಧೋನಿ ಪ್ರೀತಿಸುವ ಅಸಂಖ್ಯಾತ ಹೃದಯಗಳಿವೆ. ಅದರಲ್ಲೂ ಚೆನ್ನೈಗೂ ಧೋನಿಗೂ ಅವಿನಾಭಾವ ಸಂಬಂಧವಿದೆ.

ಹೌದು, ತಮ್ಮ ವಿಶಿಷ್ಟ ಕ್ರಿಕೆಟ್​ ಮ್ಯಾನರಿಸಂ ಹಾಗೂ ನಾಯಕತ್ವ ವಿಚಾರದಲ್ಲಿ ಧೋನಿ ಎಲ್ಲರಿಗೂ ಮಾದರಿ. ಈ ಸಾಮರ್ಥ್ಯದಿಂದಲೇ ಧೋನಿ ನಮ್ಮ ದೇಶಕ್ಕೆ ಮತ್ತೊಂದು ವಿಶ್ವಕಪ್​ ಕಿರೀಟವನ್ನು ತೊಡಿಸಿದರು. ಅಲ್ಲದೇ ಐಪಿಎಲ್​ನಲ್ಲಿ ಚೆನ್ನೈ ಟೀಂ ರುವಾರಿಯಾಗಿರುವ ಧೋನಿ ಮೂರು ಬಾರಿ ಐಪಿಎಲ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹೀಗಾಗಿ ಚೆನ್ನೈನಲ್ಲಿ ಧೋನಿ ಅಭಿಮಾನಕ್ಕೆ ಕೊನೆಯೇ ಇಲ್ಲ. 2019ರ ಐಪಿಎಲ್​ಗೆ ದಿನಗಣನೇ ಆರಂಭವಾಗಿರುವ ಹಿನ್ನೆಲೆಯಲ್ಲಿ ಧೋನಿಗೆ ಮತ್ತೊಂದು ಅಚ್ಚರಿಯ ಉಡುಗೊರೆಯೊಂದು ಬಂದಿದೆ.

ಐಪಿಎಲ್​ ವೇಳೆ ಅಭಿಮಾನಿಯೊಬ್ಬ ತನ್ನ ಮೈಯೆಲ್ಲಾ ಹಳದಿ ಬಣ್ಣವನ್ನು ಬಳಿದುಕೊಂಡು ಧೋನಿಗೆ ಗೌರವ ಸೂಚಿಸಿದ್ದ. ಆದರೆ, ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿರುವ ಅಭಿಮಾನಿಯೊಬ್ಬ ತನ್ನ ಕಾರಿನ ನಂಬರ್​ ಪ್ಲೇಟ್​ನಲ್ಲಿ ಹಳದಿ ಬಣ್ಣದಲ್ಲಿ ಎಂ.ಎಸ್​.ಧೋನಿ ಅಂತ ಬರೆದು ಗೌರವ ಸೂಚಿಸಿರುವುದು ವಿಶೇಷವಾಗಿದೆ. ಇದನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿ ಅದ್ಭುತ ಎಂದು ಟ್ವೀಟ್​ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೆನ್ನೈ ಅಭಿಮಾನಿಗಳು ವಿಸಿಲ್​ ಪೋಡು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

37 ವರ್ಷದ ಧೋನಿ ಅವರು ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮೂರು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ, ಎರಡು ಬಾರಿ ಚಾಂಪಿಯನ್ಸ್​ ಲೀಗ್​ ಟ್ರೋಫಿಯನ್ನು ಚೆನ್ನೈ ಮುಡಿಗೇರಿಸಿದ್ದಾರೆ. ಮುಂಬರುವ ಐಪಿಎಲ್​ನಲ್ಲೂ ಧೋನಿ ನಾಯಕತ್ವದಲ್ಲಿ ಟ್ರೋಫಿ ಗೆಲುವ ನಿರೀಕ್ಷೆಯನ್ನು ಚೆನ್ನೈ ತಂಡ ಹೊಂದಿದೆ. (ಏಜೆನ್ಸೀಸ್​)