ಬಾಲ್​ ನೋಡದೆ ಒನ್​ ಹ್ಯಾಂಡೆಡ್​ ಸಿಕ್ಸರ್​ ಬಾರಿಸಿದ ಧೋನಿಗೆ ವೇಗಿ ಕ್ರಿಸ್​ ಮಾರಿಸ್​ ಕ್ಷಮೆ ಕೇಳಿದ್ದೇಕೆ?

ನವದೆಹಲಿ: ನಿನ್ನೆ(ಬುಧವಾರ) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಐಪಿಎಲ್​ ಪಂದ್ಯವು ಚೆನ್ನೈ ಸೂಪರ್​​ ಕಿಂಗ್ಸ್​​ (ಸಿಎಸ್​ಕೆ) ತಂಡದ ನಾಯಕ ಧೋನಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವೇಗಿ ಕ್ರಿಸ್​ ಮಾರಿಸ್​ ನಡುವಿನ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಜ್ವರದಿಂದ ಬಳಲುತ್ತಿದ್ದರೂ ನಿನ್ನೆಯ ಪಂದ್ಯದಲ್ಲಿ ಸ್ಫೋಟಕ ಆಟವಾಡಿ ತಂಡದ ಗೆಲುವಿನಲ್ಲಿ ಒಬ್ಬರಾದ ಧೋನಿ(44* ರನ್​, 22 ಎಸೆತ) ಅವರಿಗೆ ಡೆಲ್ಲಿ ತಂಡದ ವೇಗಿ ಕ್ರಿಸ್​ ಮಾರಿಸ್​ ಕ್ಷಮೆ ಕೇಳಿದ ಘಟನೆ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿತ್ತು.

ಕ್ರಿಸ್​ ಮಾರಿಸ್​ ಎಸೆದ ಪಂದ್ಯದ 18ನೇ ಓವರ್​ನ 5ನೇ ಎಸೆತದಲ್ಲಿ ಧೋನಿ ಸಿಕ್ಸರ್​ ಬಾರಿಸಿದರು. ಅದು ನೋಬಾಲ್​ ಆಗಿತ್ತು. ಮಾರಿಸ್​ ಗಂಟೆಗೆ 136.3 ಕಿ.ಮೀ ವೇಗದಲ್ಲಿ ಬಾಲನ್ನು ಕ್ರೀಸ್​ನಲ್ಲಿದ್ದ ಧೋನಿ ಕಡೆಗೆ ಎಸೆದಿದ್ದರು. ಗಾಳಿಯಲ್ಲಿ ವೇಗವಾಗಿ ತಲೆಯ ಭಾಗದ ಕಡೆಗೆ ತೂರಿ ಬಂದ ಚೆಂಡನ್ನು ಜಡ್ಜ್​ ಮಾಡಲಾಗದೇ, ನೋಡದೆಯೇ ಧೋನಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದರು. ಅದೃಷ್ಟವೆಂಬಂತೆ ಚೆಂಡು ಪೆವಿಲಿಯನ್​ಗೆ ಹಾರಿತ್ತು. ಬಳಿಕ ಮಾರಿಸ್​ ಧೋನಿ ಬಳಿ ಬಂದು ಕ್ಷಮೆ ಕೇಳಿದರು. ಏಕೆಂದರೆ ಒಂದು ವೇಳೆ ಮಾರಿಸ್​ ಎಸೆದ ಬಾಲ್​ ಧೋನಿ ಬ್ಯಾಟ್​ಗೆ ತಾಗದಿದ್ದರೆ ನೇರವಾಗಿ ಅವರ ತಲೆಗೆ ಬಡಿಯುತ್ತಿತ್ತು. ಇಂತಹ ಘಟನೆಗಳು ಈ ಹಿಂದೆ ನಡೆದು ಪ್ರಾಣ ಕಳೆದುಕೊಂಡು ಆಟಗಾರರ ಉದಾಹರಣೆಯು ಇದೆ. ಹೀಗಾಗಿ ಮಾರಿಸ್ ಧೋನಿ​ ಬಳಿ ಕ್ಷಮೆಯಾಚಿಸಿ ಕ್ರೀಡಾಸ್ಫೂರ್ತಿ ಮೆರೆದರು.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 179 ರನ್​ ಕಲೆಹಾಕಿತು. ಚೆನ್ನೈ ನೀಡಿದ 180 ರನ್​ ಗುರಿ ಬೆನ್ನತ್ತಿದ ಡೆಲ್ಲಿ ತಂಡ 16.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 99 ರನ್​ ಮಾತ್ರ ಗಳಿಸಲು ಶಕ್ತವಾಯಿತು. ಡೆಲ್ಲಿ ನಾಯಕ ಶ್ರೇಯಸ್​ ಅಯ್ಯರ್(44) ಅವರನ್ನು ಧೋನಿ ಸ್ಟಂಪ್​ ಮಾಡಿದ್ದು, ಚೆನ್ನೈ ಗೆಲುವಿನ ಟರ್ನಿಂಗ್​ ಪಾಯಿಂಟ್​ ಎನಿಸಿಕೊಂಡಿತು. (ಏಜೆನ್ಸೀಸ್​)