ಏಷ್ಯಾಕಪ್​ ಫೈನಲ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ದಾಖಲೆ ವೀರ ಧೋನಿ: ಏನದು ಗೊತ್ತೇ?

ದುಬೈ: ಕ್ರಿಕೆಟ್​ ರಂಗದಲ್ಲಿ ಅದ್ಭುತ ಸಾಧನೆ ಮಾಡಿರುವ ಭಾರತೀಯ ಕ್ರಿಕೆಟರ್​, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪಂದ್ಯಗಳನ್ನಾಡಿದರೆ ಸಾಕು ಅವರಿಂದ ಒಂದಿಲ್ಲೊಂದು ದಾಖಲೆ ಸೃಷ್ಟಿಯಾಗುತ್ತದೆ. ಹಾಗೆಯೇ ಫೈನಲ್​ ಪಂದ್ಯದಲ್ಲೂ ಅವರೊಂದು ಸಾಧನೆ ಮಾಡಿ ಮತ್ತಷ್ಟು ಉತ್ತುಂಗಕ್ಕೇರಿದ್ದಾರೆ.

ಏಷ್ಯಾಕಪ್​ನ ಈ ಟೂರ್ನಿಯಲ್ಲಂತೂ ಧೋನಿ ಅದಾಗಲೇ ಎರಡು ಸಾಧನೆ ಮಾಡಿದ್ದರು. ಒಂದು, ಭಾರತೀಯ ಕ್ರಿಕೆಟರ್​ಗಳ ಪೈಕಿ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನಕ್ಕೇರಿದರು. ಮತ್ತೊಂದು ಏಷ್ಯಾಕಪ್​ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್​ ಆಗುವ ಮೂಲಕ 200 ಪಂದ್ಯಗಳಲ್ಲಿ ನಾಯಕನಾದ ಕೀರ್ತಿಗೆ ಪಾತ್ರರಾದರು. ಈಗ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ.

ಅದೇನೆಂದರೆ, ಬಾಂಗ್ಲಾದೇಶ ಎದುರಿಗಿನ ಫೈನಲ್​ ಪಂದ್ಯದಲ್ಲಿ ಧೋನಿ ಅವರು 800ನೇ ಸ್ಟಂಪ್​ ಔಟ್​ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಟಂಪ್​ ಔಟ್​ ಮಾಡಿದ ಏಷ್ಯಾದ ಮೊದಲ ಕ್ರಿಕೆಟರ್​ ಎಂಬ ಖ್ಯಾತಿಗೆ ಭಾಜನರಾದರು. ಪಂದ್ಯದ 43ನೇ ಓವರ್​ನಲ್ಲಿ ಕುಲದೀಪ್​ ಯಾದವ್​ ಅವರ ಬೌಲಿಂಗ್​ನಲ್ಲಿ ಮಶ್ರಫೆ ಮೊರ್ತಜಾ ಅವರ ಸ್ಟಂಪ್​ ಎಗರಿಸುವ ಮೂಲಕ ಅವರು ಈ ಸಾಧನೆ ಮಾಡಿದರು.

ಕ್ರಿಕೆಟ್​ನ ಮೂರು ಪ್ರಕಾರಗಳಾದ ಟೆಸ್ಟ್​, ಏಕದಿನ, ಟಿ20ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಟಂಪ್​ ಔಟ್​ ಮಾಡಿದ ವಿಶ್ವದ ವಿಕೆಟ್​ ಕೀಪರ್​ಗಳ ಪಟ್ಟಿಯಲ್ಲಿ ಧೋನಿ ಈಗ ಮೂರನೇ ಸ್ಥಾನದಲ್ಲಿದ್ದಾರೆ. 998 ಸ್ಟಂಪ್​ ಎಗರಿಸಿ ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಚರ್​ ಮೊದಲ ಸ್ಥಾನದಲ್ಲಿದ್ದರೆ, 905 ಸ್ಟಂಪ್​ ಔಟ್​ ಮಾಡುವ ಮೂಲಕ ಆಸ್ಟ್ರೇಲಿಯಾದ ವಿಕೆಟ್​ ಕೀಪರ್​ ಆ್ಯಡಮ್​ ಗಿಲ್​ಕ್ರಿಸ್ಟ್​ ಎರಡನೇ ಸ್ಥಾನದಲ್ಲಿದ್ದಾರೆ.

ಸ್ಟಂಪ್ ಔಟ್​ನಲ್ಲಿ ಧೋನಿ ಸಾಧನೆ

  • ಟೆಸ್ಟ್​ – 294
  • ಏಕದಿನ – 419
  • ಟಿ20- 87