More

  ಕೂಲ್​ ಕ್ಯಾಪ್ಟನ್​ ಖ್ಯಾತಿಯ ಧೋನಿಗೆ ಬಿಸಿಸಿಐನಿಂದ ಬಿಗ್​ ಶಾಕ್: ಮಾಹಿಯ ಕ್ರಿಕೆಟ್ ಭವಿಷ್ಯದ ಮೇಲೆ ಮೂಡಿದ ಅನುಮಾನ

  ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂ.ಎಸ್​.ಧೋನಿ ನಿವೃತ್ತಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವ ನಡುವೆಯೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಧೋನಿಗೆ ಶಾಕ್​ ನೀಡಿದೆ. ಹೊಸ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಧೋನಿ ಹೆಸರನ್ನು ಕೈಬಿಟ್ಟಿದೆ.

  ಆಟಗಾರರ ಒಪ್ಪಂದವನ್ನು ಬಿಸಿಸಿಐ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು, ಅದರಲ್ಲಿ ಟೀಮ್​ ಇಂಡಿಯಾದ ಹಿರಿಯ ಆಟಗಾರರ ಪಟ್ಟಿ ಅಂದರೆ ಕೇಂದ್ರೀಯ ಒಪ್ಪಂದದ ಪಟ್ಟಿಯಿಂದ ಧೋನಿ ಹೆಸರನ್ನು ಕೈಬಿಟ್ಟಿರುವುದು, ಧೋನಿ ಅವರ ಕ್ರಿಕೆಟ್​ ಭವಿಷ್ಯದ ಮೇಲೆ ಹೊಸದೊಂದು ಅನುಮಾನದ ಅಲೆ ಏಳುವಂತೆ ಮಾಡಿದೆ.

  ಕಳೆದ ವರ್ಷದ ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಸೋತ ಬಳಿಕ ಈವರೆಗೂ ಧೋನಿ ಒಂದು ಪಂದ್ಯವನ್ನೂ ಆಡಿಲ್ಲ. ಧೋನಿ ಮಾತ್ರವಲ್ಲದೆ, ದಿನೇಶ್​ ಕಾರ್ತಿಕ್​, ಖಲೀಲ್ ಅಹಮ್ಮದ್​ ಮತ್ತು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಅಂಬಾಟಿ ರಾಯುಡು ಕೂಡ ಪಟ್ಟಿಯಿಂದ ಕೈಬಿಡಲಾಗಿದೆ.

  ಅಕ್ಟೋಬರ್​ 2019 ರಿಂದ ಸೆಪ್ಟೆಂಬರ್​ 2020ರವರೆಗಿನ ಒಪ್ಪಂದದ ಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಬಿಸಿಸಿಐ ಆಟಗಾರರ ಒಪ್ಪಂದ ಕೆಟಗರಿಯನ್ನು ಎ+(7 ಕೋಟಿ ರೂ.), ಎ ( 5 ಕೋಟಿ ರೂ.), ಬಿ (3 ಕೋಟಿ ರೂ.) ಮತ್ತು ಸಿ (1 ಕೋಟಿ ರೂ.) ಎಂದು ಬಿಸಿಸಿಐ ವಿಂಗಡಿಸಿದೆ.

  ಒಟ್ಟು 27 ಆಟಗಾರರನ್ನು ನಾಲ್ಕು ಕೆಟಗರಿಯಾಗಿ ವಿಂಗಡಿಸಲಾಗಿದ್ದು, ನಾಯಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಮತ್ತು ಜಸ್ಪ್ರಿತ್​ ಬೂಮ್ರಾ ಎ+ ಕೆಟಗರಿಯಲ್ಲಿದ್ದಾರೆ.

  ಇನ್ನುಳಿದ ಕೆಟಗರಿಯಲ್ಲಿ ಯಾರಿದ್ದಾರೆ ಎಂದು ಗಮಿಸಿದರೆ…..

  ಕೆಟಗರಿ ಎ: ರವಿಚಂದ್ರನ್​ ಅಶ್ವಿನ್​, ರವಿಂದ್ರ ಜಡೇಜಾ, ಭುವನೇಶ್ವರ್​ ಕುಮಾರ್​, ಚೇತೇಶ್ವರ ಪೂಜಾರ, ಅಂಜಿಕ್ಯಾ ರಹಾನೆ, ಕೆ.ಎಲ್​.ರಾಹುಲ್​, ಶಿಖರ್​ ಧವನ್​, ಮಹಮ್ಮದ್​ ಶಮಿ, ಇಶಾಂತ್ ಶರ್ಮ, ಕುಲದೀಪ್​ ಯಾದವ್​ ಮತ್ತು ರಿಷಭ್​ ಪಂತ್​.

  ಕೆಟಗರಿ ಬಿ: ವೃದ್ಧಿಮಾನ್​ ಸಹಾ, ಉಮೇಶ್​ ಯಾದವ್​, ಯಜುವೇಂದ್ರ ಚಹಾಲ್​, ಹಾರ್ದಿಕ್ ಪಾಂಡ್ಯ, ಮಯಾಂಕ್​ ಅಗರ್​ವಾಲ್​.

  ಕೆಟಗರಿ ಸಿ: ಕೇದರ್​ ಜಾಧವ್​, ನವದೀಪ್​ ಸೈನಿ, ದೀಪಕ್​ ಚಹಾರ್​, ಮನೀಶ್​ ಪಾಂಡೆ, ಹನುಮ ವಿಹಾರಿ, ಶಾರ್ದೂಲ್​ ಠಾಕೂರ್​, ಶ್ರೇಯಸ್​ ಅಯ್ಯರ್​, ವಾಷಿಂಗ್ಟನ್​ ಸುಂದರ್​. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts