ಕನಸುಗಳಿಗೆ ಬಣ್ಣ ತುಂಬಿದ ಮಿಸೆಸ್ ಇಂಡಿಯಾ ಕರ್ನಾಟಕ

ಗಂಡನಿಗೆ ಮಡದಿಯಾಗಿ, ಮಕ್ಕಳಿಗೆ ತಾಯಿಯಾಗಿ ಸಂಸಾರದ ನೊಗ ಹೊತ್ತು ಸಾಗುವ ಹೆಣ್ಣು ಬಹುಮುಖ ಪ್ರತಿಭೆ ಎನ್ನುವುದು ಯಾರಿಗೆ ತಿಳಿದಿಲ್ಲ ಹೇಳಿ? ಕುಟುಂಬಸ್ಥರ ಸಾಧನೆಯಲ್ಲಿಯೇ ತನ್ನ ಖುಷಿ ಕಾಣುವ ಮಹಿಳೆ ಮದುವೆ ನಂತರ ಮನೆಗಷ್ಟೇ ಸೀಮಿತವೇ? ಸ್ತ್ರೀಪರವಾಗಿರುವ ಯಾವ ಮನಸ್ಸಿಗಾದರೂ ಇಂಥದೊಂದು ಪ್ರಶ್ನೆ ಕಾಡದೆ ಇರದು. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮಿಂಚುತ್ತಿದ್ದರೂ ಮಹಿಳೆಯರಿಗಾಗಿಯೇ ಇರುವ ಏಕೈಕ ಲೋಕವೆಂದರೆ ಅದು ‘ಫ್ಯಾಷನ್’ ಜಗತ್ತು. ಆದರೆ, ಮದುವೆ ಮುಂಚೆ ಮಾತ್ರವೇ ಗ್ಲಾಮರ್ ಎಂದು ಕೆಲವರು ಗೊಣಗುವುದೂ ಉಂಟು. ಈ ಎಲ್ಲ ಅಪವಾದಗಳನ್ನು ಸುಳ್ಳು ಮಾಡಲು ಹುಟ್ಟಿಕೊಂಡಿರುವ ‘ಮಿಸೆಸ್ ಇಂಡಿಯಾ ಕರ್ನಾಟಕ’ ಗೃಹಿಣಿಯರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತ ಬಂದಿದೆ. ಮಿಸೆಸ್ ಇಂಡಿಯಾ ಕರ್ನಾಟಕದ ನಾಲ್ಕನೇ ಆವೃತ್ತಿಗೆ ಶನಿವಾರವಷ್ಟೇ ತೆರೆಬಿದ್ದಿದೆ.

| ಅಭಯ್ ಮನಗೂಳಿ

ಮಹಿಳೆಯರ ಕನಸುಗಳಿಗೆ ಬಣ್ಣ ತುಂಬುತ್ತಿರುವ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಗೆ ತೆರೆ ಬಿದ್ದಿದೆ. ಸ್ಪರ್ಧೆಯಲ್ಲಿ ವಯಸ್ಸಿನ ಹಂಗು ತೊರೆದು 46ಕ್ಕೂ ಹೆಚ್ಚು ಸ್ಪರ್ಧಿಗಳು ಸಾಧನೆ ಮೆರೆದಿರುವುದು ವಿಶೇಷ. ಕಳೆದ ಎರಡ್ಮೂರು ತಿಂಗಳಿನಿಂದ ನಡೆದ ಆಡಿಷನ್​ಗಳಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳ ಮೂಲಕ ಅಂತಿಮ ಸುತ್ತಿಗೆ 46 ಜನರನ್ನು ಶನಿವಾರ ಆಯ್ಕೆ ಮಾಡಲಾಯಿತು. ಕೊನೆಗೆ 25 ಜನರ ಶಾರ್ಟ್​ಲಿಸ್ಟ್ ಮಾಡಿ 2019ನೇ ಸಾಲಿನ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟವನ್ನು ದಂತ ವೈದ್ಯೆ ‘ಪ್ರಿಯಾಂಕಾ ಅಭಿಷೇಕ್’ ಅವರ ಮುಡಿಗೆ ಹಾಕಲಾಯಿತು. ಯಶವಂತಪುರದ ಆರ್​ಜಿ ರಾಯಲ್ ಕನ್ವೆನ್ಷನ್ ಸೆಂಟರ್​ನಲ್ಲಿ ನಡೆದ ವರ್ಣರಂಜಿತ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ 46 ಸುಂದರಿಯರು ಸ್ಪರ್ಧೆಗೆ ಕಿಚ್ಚು ಹಚ್ಚಿದರು. ಮೊದಲ ಸುತ್ತಿನಲ್ಲಿ ಸಾಮಾಜಿಕ ಸಂದೇಶ ಸಾರುವುದರೊಂದಿಗೆ ಸಾಂಸ್ಕೃತಿಕ ಉಡುಗೆಗಳಲ್ಲಿ ಮಾರ್ಜಾಲದ ಹೆಜ್ಜೆ ಹಾಕಿದರು. ನಂತರ ಕ್ರೀಡಾ ವೇಷಭೂಷಣದಲ್ಲಿ ವೇದಿಕೆಯನ್ನೇರಿದ ಸ್ಪರ್ಧಿಗಳು ಒಂದೊಂದು ಕ್ರೀಡೆಯನ್ನು ಪ್ರತಿನಿಧಿಸಿ ಗಮನಸೆಳೆದರು. ಕೊನೆಗೆ ಗೌನ್ ಧರಿಸಿ ಹೆಜ್ಜೆ ಹಾಕಿದಾಗ ಇಡೀ ಸಭಾಂಗಣ ಶಿಳ್ಳೆ, ಚಪ್ಪಾಳೆಗಳಿಂದ ಕೂಡಿತು. ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀಪಾಲಿ ಫಡ್ನಿಸ್ ನೇತೃತ್ವದಲ್ಲಿ ಸ್ಪರ್ಧೆಯನ್ನು ಸಂಘಟಿಸಲಾಗುತ್ತಿದೆ. ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಗೆ ಪ್ರತಿಭಾ ಸಂಶಿಮಠ ರೂವಾರಿಯಾಗಿದ್ದು, ನಾಲ್ಕು ವರ್ಷಗಳಿಂದ ಸ್ಪರ್ಧೆಯನ್ನು ಸಂಘಟಿಸುತ್ತ ಬಂದಿದ್ದಾರೆ. ಫ್ಯಾಷನ್ ಲೋಕದಲ್ಲಿ ಮಿಂಚುವ ಅಭಿಲಾಷೆ ಉಳ್ಳ ಮಹಿಳೆಯರಿಗೆ ಈ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಆಗಿದೆ.

ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ಆಯ್ಕೆಯಾದವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ. ‘ಸಾಧನೆ ಮಾಡಬೇಕೆಂದು ನಿಶ್ಚಿಯಿಸಿದರೆ ಅಲ್ಲಿ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆ ಸಾಬೀತುಪಡಿಸಿತು. ಮದುವೆ ಆದ ಮೇಲೆ ಮಕ್ಕಳು, ಸಂಸಾರ ಅಷ್ಟೇ ನಮ್ಮ ಜೀವನ ಎಂಬ ಭ್ರಮೆಯನ್ನು ಸುಳ್ಳಾಗಿಸುವಲ್ಲಿ ಈ ಸ್ಪರ್ಧೆ ಯಶಸ್ವಿಯಾಗಿದ್ದು, ಯಾವುದೇ ವಯಸ್ಸಿನವರಾದರೂ ನಾವು ವೇದಿಕೆ ಕಲ್ಪಿಸುತ್ತೇವೆ. ಪ್ರತಿಭೆಯನ್ನು ಹೊರಹಾಕಲು ಸಿದ್ಧರಾಗಿ’ ಎಂಬುದು ಕಾರ್ಯಕ್ರಮದ ರೂವಾರಿ ಪ್ರತಿಭಾ ಸಂಶಿಮಠ್ ಅವರ ಮಾತಾಗಿದೆ. ಅದೇ ಕಾರಣಕ್ಕಾಗಿಯೇ 60 ದಾಟಿದವರಿಗಾಗಿ ‘ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ, 40-60 ವಯೋಮಾನದವರಿಗಾಗಿ ‘ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ’ ವಿಭಾಗ ಹಾಗೂ 22-40 ವಯೋಮಾನವದರಿಗೆ ‘ಮಿಸೆಸ್ ಇಂಡಿಯಾ ಕರ್ನಾಟಕ’ ವಿಭಾಗಗಳಲ್ಲಿ ಸ್ಪರ್ಧೆಯನ್ನು ಸಂಘಟಿಸಲಾಯಿತು. ಮಹಿಳೆಯರು ವಯಸ್ಸಿನ ಹಂಗು ತೊರೆದು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದರಿಂದ ಸ್ಪರ್ಧೆ ಕಠಿಣವಾಗಿತ್ತು. 60 ದಾಟಿದ ಮಹಿಳೆಯರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ಸಭಿಕರು ಕರತಾಡನಗಳ ಮೂಲಕ ಹುರಿದುಂಬಿಸಿದರು.

ಆನಂದ ಸಂಕೇಶ್ವರ ಸೇರಿ ಗಣ್ಯರು ಭಾಗಿ

ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ, ಚಲನಚಿತ್ರ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಎಚ್​ಡಿಎಫ್​ಸಿ ಬ್ಯಾಂಕ್ ಇ-ಕಾಮರ್ಸ್ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಸತೀಶ್ ಭಟ್ ಮತ್ತಿತರರು ಪಾಲ್ಗೊಂಡಿದ್ದರು. ನಟಿ ಸೋನಿಕಾ ಗೌಡ, ಫ್ಯಾಷನ್ ಡಿಸೈನರ್ ಮಿರಾಜ್ ಅನ್ವರ್, ನಟ ಎಂ.ಎನ್. ಸುರೇಶ್ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ಗೆಲುವು ಸಾಧಿಸಿರುವುದು ಖುಷಿ ನೀಡಿದೆ. ಕುಟುಂಬದ ಬೆಂಬಲವಿಲ್ಲದೆ ಇದು ಸಾಧ್ಯವಿರಲಿಲ್ಲ. ಇಂಥ ವೇದಿಕೆ ಒದಗಿಸಿರುವ ಪ್ರತಿಭಾ ಸಂಶಿಮಠ ಸೇರಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಕಾರ್ಯಕ್ರಮದ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಿದೆ. ಪರಿಸರ ಉಳಿವು, ಸ್ವಚ್ಛ ಬೆಂಗಳೂರು ಜತೆಗೆ ಮಹಿಳಾ ದೌರ್ಜನ್ಯ ತಡೆಗಟ್ಟುವುದು ನನ್ನ ಗುರಿಯಾಗಿದೆ. ಇಂಥ ಕಾರ್ಯಗಳಲ್ಲಿ ಇನ್ನುಮುಂದೆ ಹೆಚ್ಚಾಗಿ ತೊಡಗಿಸಿಕೊಳ್ಳುವ ಯೋಜನೆಯಿದೆ.

| ಪ್ರಿಯಾಂಕಾ ಅಭಿಷೇಕ್, ಮಿಸೆಸ್ ಇಂಡಿಯಾ ಕರ್ನಾಟಕ -2019

ಒಂದೇ ದಿನದ ಆಯ್ಕೆಯಲ್ಲ…

ಮಿಸೆಸ್ ಇಂಡಿಯಾ ಕರ್ನಾಟಕ ವಿಜೇತರನ್ನು ಆಯ್ಕೆ ಮಾಡುವುದು ಒಂದೇ ದಿನದ ಪ್ರಕ್ರಿಯೆಯಲ್ಲ. ಎರಡ್ಮೂರು ತಿಂಗಳುಗಳ ಆಡಿಷನ್​ಗಳ ಮೂಲಕ ವಿವಿಧ ವಿಭಾಗದಲ್ಲಿ ಕಠಿಣ ಸ್ಪರ್ಧೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಅಂತಿಮ ಸ್ಪರ್ಧೆಗೆ ಮೂರು ದಿನ ಇದ್ದಾಗ ಎಲ್ಲ ಸ್ಪರ್ಧಿಗಳು ಒಂದೇ ಕಡೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಸ್ಪರ್ಧಿಗಳು ವಿವಿಧ ಚಟುವಟಿಕೆಗಳಲ್ಲಿ ತೋರುವ ಆಸಕ್ತಿ, ರ‍್ಯಾಂಪ್ ಮೇಲಿನ ಅವರ ಭಂಗಿ, ಕಠಿಣ ಸವಾಲುಗಳನ್ನು ಸ್ವೀಕರಿಸುವ ರೀತಿ, ಅವರಲ್ಲಿನ ಜ್ಞಾನ, ಕೌಶಲಗಳನ್ನು ನೋಡಿಕೊಂಡು ಆಯ್ಕೆ ಮಾಡಲಾಗುತ್ತದೆ ಎಂದು ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸಂಶಿಮಠ್ ತಿಳಿಸಿದರು. ಮಹಿಳೆಯರು ಮನೆಗಷ್ಟೇ ಸೀಮಿತಗೊಳ್ಳಬಾರದು. ಅವರಲ್ಲಿನ ಪ್ರತಿಭೆ ಹಾಗೆಯೇ ಉಳಿಯಬಾರದು. ಪುರುಷರಷ್ಟೇ ಹಕ್ಕು ಮಹಿಳೆಗೂ ಇರುತ್ತದೆ ಎನ್ನುವ ನಿಟ್ಟಿನಲ್ಲಿ ಅವರಲ್ಲಿರುವ ಆಸೆಗಳಿಗೆ ಬಣ್ಣ ತುಂಬುವ ಕೆಲಸವನ್ನು ಮಿಸೆಸ್ ಇಂಡಿಯಾ ಕರ್ನಾಟಕ ಮಾಡುತ್ತ ಬಂದಿದೆ.

ವಿಜಯವಾಣಿ, ದಿಗ್ವಿಜಯ ಕಾರ್ಯಕ್ಕೆ ಪ್ರತಿಭಾ ಮೆಚ್ಚುಗೆ

ಮಿಸೆಸ್ ಇಂಡಿಯಾ ಕರ್ನಾಟಕದ ಆರಂಭ ದಿಂದ ಹಿಡಿದು ಅದರ ಬೆಳವಣಿಗೆಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಗಳ ಪಾತ್ರ ಮಹತ್ವದ್ದಾಗಿದೆ. ಎಲೆಮರೆಯ ಕಾಯಿಯಂತಿ ರುವ ಮಹಿಳಾ ಸಾಧಕಿಯರನ್ನು ಗುರುತಿಸುವ ಕಾರ್ಯವನ್ನು ವಿಆರ್​ಎಲ್ ಮೀಡಿಯಾ ಮಾಡುತ್ತಿದ್ದು, ನಮ್ಮ ಕಾರ್ಯಕ್ರಮದ ಬೆಳವಣಿಗೆ ಹಿಂದೆ ವಿಆರ್​ಎಲ್ ಸಂಸ್ಥೆಯ ಶ್ರಮವಿದೆ ಎಂದು ಪ್ರತಿಭಾ ಸಂಶಿಮಠ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬುದ್ಧಿಮಾಂದ್ಯ ಮಕ್ಕಳಿಂದ ನೃತ್ಯ

ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮ ದಲ್ಲಿ ಬಾಲ ಮನೋವಿಕಾಸ ಕೇಂದ್ರದ ಮಕ್ಕಳು ಮಹಾಭಾರತ ಹಾಗೂ ವಿಷ್ಣುವಿನ 9 ಅವತಾರಗಳನ್ನು ನೃತ್ಯರೂಪಕದ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಶ್ರೀಕೃಷ್ಣ, ಬುದ್ಧ, ರಾಮ, ಕಲ್ಕಿ, ವರಾಹ, ವಾಮನ, ನರಸಿಂಹ ಸೇರಿ ಎಲ್ಲ ಅವತಾರಗಳನ್ನು ಮಕ್ಕಳು ಪ್ರದರ್ಶಿಸುತ್ತಿದ್ದಂತೆ ಇಡೀ ಸಭಾಂಗಣ ಎದ್ದು ನಿಂತು ಗೌರವಿಸಿತು. ರ್ಯಾಂಪ್​ವಾಕ್​ಗಷ್ಟೇ ಕಾರ್ಯಕ್ರಮ ಸೀಮಿತಗೊಳ್ಳದೆ ಇಂಥ ಹಲವು ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *