ಮಿಸೆಸ್ ಏಷ್ಯಾಗೆ ಹೊರಟ ಕಾಜೋಲ್

ಬೆಂಗಳೂರು: ಜುಲೈನಲ್ಲಿ ನಡೆದ ‘ಮಿಸೆಸ್ ಇಂಡಿಯಾ 2018’ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡಿದ್ದ ಕರ್ನಾಟಕದ ಕಾಜೋಲ್ ಭಾಟಿಯಾ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳಲು ಸಜ್ಜಾಗಿದ್ದಾರೆ. ನ.8ರಿಂದ ನ.14ರ ವರೆಗೆ ಥಾಯ್ಲೆಂಡ್​ನಲ್ಲಿ ನಡೆಯುವ ‘ಮಿಸೆಸ್ ಏಷ್ಯಾ ಇಂಟರ್​ನ್ಯಾಷನಲ್’ ಸ್ಪರ್ಧೆಯಲ್ಲಿ ಕಾಜೋಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು ಆರು ದಿನ ನಡೆಯುವ ಸ್ಪರ್ಧೆಯಲ್ಲಿ ಏಷ್ಯಾ ಖಂಡದ ಹಲವೆಡೆಯಿಂದ ರೂಪದರ್ಶಿಯರು ಆಗಮಿಸಲಿದ್ದಾರೆ. ಆ ಪೈಕಿ 40 ವರ್ಷದ ಕ್ಲಾಸಿಕ್ ವಿಭಾಗದಲ್ಲಿ ಕಾಜೋಲ್ ಭಾರತದಿಂದ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳುತ್ತಿರುವುದರಿಂದ ವಿಜಯವಾಣಿ ಜತೆಗೆ ಸಂತಸವನ್ನೂ ಹಂಚಿಕೊಂಡಿದ್ದಾರೆ. ‘ಈ ನನ್ನ ಬೆಳವಣಿಗೆಗೆ ದೀಪಾಲಿ ಫಡ್ನೀಸ್, ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಪ್ರತಿಭಾ ಸಂಶಿಮಠ ಅವರೇ ಕಾರಣೀಕರ್ತರು. ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಬೆಂಗಳೂರಿಗಳಾಗಿ ನನ್ನ ನಾಡಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ’ ಎಂದಿದ್ದಾರೆ.

ಈ ಮೊದಲು ಅಂದರೆ ಮಾರ್ಚ್​ನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಕಾಜೋಲ್ ಭಾಟಿಯಾ, ‘ಮಿಸೆಸ್ ಇಂಡಿಯಾ ಕರ್ನಾಟಕ 2018’ ಪಟ್ಟ ಪಡೆದು, ‘ಬೆಸ್ಟ್ ದಿವಾ’ ಸಬ್ ಟೈಟಲ್ ಸಹ ಮುಡಿಗೇರಿಸಿಕೊಂಡಿದ್ದರು.