ಬೆಳಗಾವಿ: ಲೋಕಸಭೆ ಚುನಾವಣೆ ವೇಳೆಯೇ ಕೆಲ ಸಮಸ್ಯೆಗಳ ಬಗ್ಗೆ ತಾವು ಗಮನಕ್ಕೆ ತಂದಿದ್ದರಿಂದ ಯಮಕನಮರಡಿ ಕ್ಷೇತ್ರದ ಕಲಖಾಂಬ, ಚಂದಗಡ , ಅಷ್ಟೆ, ಮುಚ್ಚಂಡಿ ಗ್ರಾಮದಲ್ಲಿ ಒಟ್ಟು 13.35 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ತಿಳಿಸಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಲಖಾಂಬ ಗ್ರಾಮದಲ್ಲಿ 4.5 ಕೋಟಿ, ಚಂದಗಡ ಗ್ರಾಮದಲ್ಲಿ 70 ಲಕ್ಷ, ಅಷ್ಟೆ ಗ್ರಾಮದಲ್ಲಿ 1.80 ಕೋಟಿ ಮತ್ತು ಮುಚ್ಚಂಡಿ ಗ್ರಾಮದಲ್ಲಿ 6.80 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ, ರಸ್ತೆ ಸುಧಾರಣೆ, ಕಲ್ಯಾಣ ಮಂಟಪ, ಬೂದು ನಿರ್ವಹಣೆ, ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 18 ವರ್ಷಗಳ ಅವಧಿಯಲ್ಲಿ ಯಮಕನಮರಡಿ ಕ್ಷೇತ್ರವನ್ನು ತಂದೆ, ಸಚಿವ ಸತೀಶ್ ಜಾರಕಿಹೊಳಿ ಅವರು ಮಾದರಿ ಕೇತ್ರವನ್ನಾಗಿ ಮಾಡಿದ್ದಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ತಮ್ಮ ನಿರೀಕ್ಷೆಯಂತೆ ಮತಗಳನ್ನು ಸಿಕ್ಕಿಲ್ಲ. ತಂದೆಯವರು ಶೈಕ್ಷಣಿಕ ಪ್ರಗತಿಗೆ ಸಾಕಷು ಕೊಡುಗೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆದರೂ ಹೆಚ್ಚಿನ ಮತಗಳು ತಾವು ನೀಡಬೇಕು. ನೀವು ಹೆಚ್ಚಿನ ಮತಗಳನ್ನು ನೀಡಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಮಗೆ ಹುಮ್ಮಸು ಬರುತ್ತದೆ ಎಂದರು.
ಇದೇ ವೇಳೆ ಕಲಖಾಂಬ, ಚಂದಗಡ , ಅಷ್ಟೆ, ಮುಚ್ಚಂಡಿ ಗ್ರಾಮದ ವಿವಿಧ ಸಂಘ, ಸಂಸ್ಥೆ, ಕಮಿಟಿಗಳಿಂದ, ಗ್ರಾಮಸ್ಥರಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕಲಖಾಂಬ, ಚಂದಗಡ , ಅಷ್ಟೆ, ಮುಚ್ಚಂಡಿ ಗ್ರಾಮದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಹಿರಿಯರು, ಮುಖಂಡರು, ಮಹಿಳೆಯರು ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು.