ಜಯಪ್ರಕಾಶ್ ಹೆಗ್ಡೆಯಂಥವರಿಗೆ ಟಿಕೆಟ್ ನೀಡಿ

ಚಿಕ್ಕಮಗಳೂರು: ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಪಕ್ಷದೊಳಗೆ ಉಂಟಾಗಿರುವ ಅಸಮಾಧಾನದ ಬಗ್ಗೆ ರ್ಚಚಿಸಲು ಸಂಸದೆ ಶೋಭಾ ಕರಂದ್ಲಾಜೆ ಪಕ್ಷದ ಕಚೇರಿಯಲ್ಲೇ ವಿಶೇಷ ಸಭೆ ಕರೆಯಬೇಕೆಂದು ನಗರಸಭೆ ಅಧ್ಯಕ್ಷೆ ಹಾಗೂ ಕೆಲ ಸದಸ್ಯರು ಒತ್ತಾಯಿಸಿದರು.

ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದೆಂಬ ಅಭಿಪ್ರಾಯವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ನಗರಸಭೆ ಸದಸ್ಯ ರಾಜಶೇಖರ್ ತಿಳಿಸಿದರು.

ಕ್ಷೇತ್ರದೊಳಗಿರುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಸಾಮಾನ್ಯ ಕಾರ್ಯಕರ್ತರಿಂದಲೂ ವ್ಯಕ್ತವಾಗುತ್ತಿದೆ. ಶೋಭಾ ಕರಂದ್ಲಾಜೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಾದ್ದರಿಂದ ಅವರನ್ನು ಭೇಟಿ ಮಾಡಲು ಇಲ್ಲಿನ ಕಾರ್ಯಕರ್ತರಿಗೆ ಆಗುತ್ತಿಲ್ಲ. ಹಾಗಾಗಿ ಜಯಪ್ರಕಾಶ್ ಹೆಗ್ಡೆಯಂಥ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ಶೋಭಾ ಜಿಲ್ಲೆಗೆ ಬಂದಾಗ ನಗರಸಭೆ ಸದಸ್ಯರನ್ನು ಭೇಟಿ ಮಾಡುವುದಿಲ್ಲ. ತಮಗೆ ಬಂದ ಅನುದಾನ ಎಲ್ಲಿ ಉಪಯೋಗಿಸುತ್ತಿದ್ದಾರೆಂಬ ಮಾಹಿತಿಯೂ ನೀಡುವುದಿಲ್ಲ. ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೋದರೂ ಸಿಗುವುದಿಲ್ಲ. ಇದು ಮುಂದೆಯೂ ಆಗುವುದು ಬೇಡವೆಂಬ ಉದ್ದೇಶದಿಂದ ಅವರಿಗೆ ಟಿಕೆಟ್ ನೀಡಬಾರದು ಎಂದು ತಿಳಿಸಿದರು.

ನಗರಸಭೆ ಸದಸ್ಯ ದೇವರಾಜ ಶೆಟ್ಟಿ ಮಾತನಾಡಿ, ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ರ್ಚಚಿಸಲು ನಗರಸಭೆ ಅಧ್ಯಕ್ಷರ ಮನೆಯಲ್ಲಿ ಸೇರಿದ್ದೆವು. ಅಲ್ಲಿಗೆ ಜಯಪ್ರಕಾಶ್ ಹೆಗ್ಡೆ ಬಂದಿದ್ದರು. ಈ ಬಾರಿ ಶೋಭಾ ಅವರಿಗೆ ಟಿಕೆಟ್ ಬೇಡವೆಂಬ ಅಭಿಪ್ರಾಯ ಆ ಸಭೆಯಲ್ಲಿ ವ್ಯಕ್ತವಾಯಿತು. ಇದನ್ನು ಪಕ್ಷದ ಮುಖಂಡರಿಗೆ ತಿಳಿಸಿದ್ದೇವೆ ಎಂದರು.

ಸದಸ್ಯ ಅಪ್ಸರ್ ಅಹಮದ್ ಮಾತನಾಡಿ, ತಮಗೆ ಟಿಕೆಟ್ ಕೊಡಬಾರದೆಂದು ಧ್ವನಿಯೆತ್ತಿದವರ ವಿರುದ್ಧ ಹೈಕಮಾಂಡ್ ಕ್ರಮಕ್ಕೆ ಮುಂದಾಗುತ್ತದೆಂದು ಬೆದರಿಕೆ ಹಾಕಿರುವುದು ಸರಿಯಲ್ಲ. ಐದು ಸಾವಿರ ಕಾರ್ಯಕರ್ತರು ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇವೆರಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆಯೇ? ಎಂದು ಪ್ರಶ್ನಿಸಿದರು. ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷ ಡಿ.ಸುಧೀರ್, ಸದಸ್ಯರಾದ ಮುತ್ತಯ್ಯ, ಪುಷ್ಪರಾಜ್ ಇದ್ದರು.

ಈ ಬಾರಿಯೂ ಶೋಭಾಗೆ ಟಿಕೆಟ್ ನೀಡುವ ಬಗ್ಗೆ ಕಾರ್ಯಕರ್ತರಿಗೆ ಒಲವಿಲ್ಲ. ಈ ಗೊಂದಲ ಸರಿಪಡಿಸಲು ಕೂಡಲೇ ವಿಶೇಷ ಸಭೆ ಕರೆಯಬೇಕು. ಇಷ್ಟಾದರೂ ತಾವೇ ಮಾಡಿದ್ದು ಸರಿ ಎಂದು ಟಿಕೆಟ್ ತಂದು ಸ್ಪರ್ಧಿಸಿದರೆ ಅನಿವಾರ್ಯವಾಗಿ ನಾವು ಮೋದಿ ಅವರ ನಾಯಕತ್ವ ನೋಡಿಕೊಂಡು ಮತ ಹಾಕಿಸುತ್ತೇವೆ. | ದೇವರಾಜ ಶೆಟ್ಟಿ, ನಗರಸಭೆ ಸದಸ್ಯ