ಕನಕಗಿರಿ: ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ತಾಲೂಕುಗಳು ರೈಲು ಹಳಿ ಕಂಡಿದ್ದು, ಮುಂದಿನ ಅವಧಿಯಲ್ಲಿ ಕನಕಗಿರಿ ಹಾಗೂ ಮಸ್ಕಿ ತಾಲೂಕುಗಳಿಗೂ ಹಳಿ ಹಾಕಿಸಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಂಗಳವಾರ ಮಾತನಾಡಿದರು. ದರೋಜಿ- ಬಾಗಲಕೋಟೆ ರೈಲ್ವೆ ಯೋಜನೆ ಎರಡು ಭಾಗವಾಗಿ ವಿಗಂಡಿಸಲಾಗಿದೆ. ದರೋಜಿ-ಗಂಗಾವತಿ ಸರ್ವೇ ಕಾರ್ಯ ಮುಗಿದಿದ್ದು, ರೈಲ್ವೆ ಮಂಡಳಿಗೆ ಡಿಪಿಆರ್ ಸಲ್ಲಿಸಲಾಗಿದೆ. ಮಂಡಳಿ ಒಪ್ಪಿಗೆ ಪಡೆದ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭವಾಗಲಿದೆ. ಮತ್ತೊಂದು ಭಾಗವಾದ ಗಂಗಾವತಿ- ಕನಕಗಿರಿ-ತಾವರಗೇರಾ- ಕುಷ್ಟಗಿ-ಇಳಕಲ್-ಹುನಗುಂದ-ಬಾಗಲಕೋಟೆಗೆ ಸಂಪರ್ಕಿಸುವ ರೈಲ್ವೆ ಯೋಜನೆ ಸರ್ವೇ ಕಾರ್ಯ ಆರಂಭವಾಗಿದೆ. ಶೀಘ್ರವೇ ರೈಲ್ವೆ ಮಂಡಳಿಗೆ ವರದಿ ಸಲ್ಲಿಕೆಯಾಗಲಿದೆ. ಮುಂದಿನ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಭಾಗವಾಗಿ ಭಾರತ ಅಷ್ಟೇ ಅಲ್ಲ ಅಮೆರಿಕಾದಲ್ಲೂ ಶ್ರೀರಾಮನ ಘೋಷಣೆಗಳು ಮೊಳಗುತ್ತಿವೆ. ಐದುನೂರು ವರ್ಷಗಳ ಹೋರಾಟ ಇದೀಗ ಸಾಫಲ್ಯ ಕಂಡಿದೆ. ದೇಶ ಸೇರಿದಂತೆ ನೆರೆಯ ದೇಶದಲ್ಲಿನ ದೇಶವಾಸಿಗಳು ಶ್ರೀರಾಮನ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಜ.22ರಂದು ರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಒಂದು ಲಕ್ಷ ಕೋಟಿ ರೂ. ವ್ಯವಹಾರ ನಡೆಯಲಿದೆ ಎಂದು ಭಾರತದ ವ್ಯಾಪಾರ ಒಕ್ಕೂಟ ಘೋಷಿಸಿದೆ ಎಂದು ತಿಳಿಸಿದರು.
ಯಾವುದೇ ಸರ್ಕಾರಗಳು ಬದುಕು ಕಟ್ಟಿಕೊಡುವುದಿಲ್ಲ. ಬದಲಾಗಿ ನಾವೇ ದುಡಿದು ಬದುಕು ಕಟ್ಟಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಕೇಂದ್ರ ಸರ್ಕಾರ ಅಂಚೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ, ಕೃಷಿ ಇಲಾಖೆಗಳಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದು, ಜನರು ಅವುಗಳ ಬಗ್ಗೆ ತಿಳಿದುಕೊಂಡು ಸದ್ಬಳಕೆಗೆ ಮುಂದಾಗಬೇಕು ಎಂದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಹನುಮಂತ ಬಸರಿಗಿಡ, ವೈದ್ಯೆ ಬೀನಾದೇವಿ, ಅಂಗನವಾಡಿ ಮೇಲ್ವಿಚಾರಕಿ ಶಾಹೀದಾಬೇಗಂ, ಅಂಚೆ ಕಚೇರಿಯ ಸುಭಾಷ್, ಎಸ್‌ಬಿಐ ವ್ಯವಸ್ಥಾಪಕ ಶಿವರಾಜ ಪೂಜಾರ, ದಿಶಾ ಸಮಿತಿ ಸದಸ್ಯ ಹನುಮೇಶ ಯಲಬುರ್ಗಿ, ಪ್ರಮುಖರಾದ ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ ಇತರರು ಇದ್ದರು.
ಜವಾಬ್ದಾರಿ ಅರಿತು ಮಾತನಾಡಲಿ
ಯಲಬುರ್ಗಾ, ಕುಷ್ಟಗಿ ತಾಲೂಕುಗಳಲ್ಲಿ ಮೇಲ್ಸುತುವೆ ನಿರ್ಮಾಣ, ಕನಕಗಿರಿ-ಕಾರಟಗಿ ಪಟ್ಟಣಗಳಿಗೆ ನಿರಂತರ ನೀರು ಸರಬರಾಜು ಯೋಜನೆಗೆ ಕೇಂದ್ರ ಸರ್ಕಾರ ಕಾಮಗಾರಿಯ ಅರ್ಧದಷ್ಟು ಅನುದಾನ ನೀಡಿದೆ. ಸಿಂಧನೂರು-ಮಸ್ಕಿ ಕ್ಷೇತ್ರದ ಬೈಪಾಸ್ ರಸ್ತೆ ಅಭಿವೃದ್ಧಿಗೆ 404 ಕೋಟಿ ರೂ. ಅನುದಾನ ನೀಡಲಾಗಿದೆ. ಜ.28ರೊಳಗಾಗಿ ಸಿಂಧನೂರಿಗೆ ರೈಲು ಸಂಚಾರ ಆರಂಭಿಸಲಾಗುವುದು. ತಳಕಲ್-ವಾಡಿ ರೈಲು ಮಾರ್ಗ ಈಗಾಗಲೇ ಯಲಬುರ್ಗಾ ಪಟ್ಟಣದವರೆಗೆ ಸಾಗಿದೆ. ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡಲು ಸಿದ್ಧನಿದ್ದು, ಬೇಕಾದರೆ ಓದಿ ತಿಳಿದುಕೊಳ್ಳಲಿ. ಸಚಿವರಾದವರು ಜವಾಬ್ದಾರಿ ಅರಿತು ಮಾತನಾಡಬೇಕು. ಅಭಿವೃದ್ಧಿಯಾಗಿಲ್ಲ ಎನ್ನುವ ಸಂಶಯವಿದ್ದರೆ ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಸಂಸದ ಸಂಗಣ್ಣ ಕರಡಿ ಹರಿಹಾಯ್ದರು.