ಸುಮಲತಾಗೆ ಬಿಜೆಪಿಗೆ ಸ್ವಾಗತ

ಮೈಸೂರು: ಬಿಜೆಪಿ ಪ್ರವಾಹ ಇದ್ದ ಹಾಗೆ. ಎಷ್ಟೆಷ್ಟು ನದಿಗಳು ಬಂದು ಸೇರಿಕೊಳ್ಳುತ್ತವೊ ಅಷ್ಟು ಒಳ್ಳೆಯದು. ಸುಮಲತಾ ಅಂಬರೀಷ್ ಕೂಡ ಬಿಜೆಪಿಗೆ ಬರಲಿ, ಅವರಿಗೆ ಸ್ವಾಗತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಒಬ್ಬ ರಾಜಕೀಯ ವ್ಯಕ್ತಿ ಚುನಾವಣೆಯಾದ ನಂತರ ಮತ್ತೊಂದು ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಆದರೆ ಒಬ್ಬ ಮುತ್ಸದ್ಧಿ ಮುಂದಿನ ತಲೆಮಾರಿನ ಕುರಿತು ಯೋಚನೆ ಮಾಡುತ್ತಾನೆ. ಮೋದಿ ಅವರಂತಹ ಮುತ್ಸದ್ಧಿ ಯಾರಿದ್ದಾರೆ. ಇಡೀ ದೇಶದ ಭವಿಷ್ಯದ ಬಗ್ಗೆ, ಯುವ ಜನಾಂಗದ ಬಗ್ಗೆ, ಮುಂದಿನ ತಲೆಮಾರಿನ ಕುರಿತು ಯೋಚನೆ ಮಾಡುವಂತಹ ವ್ಯಕ್ತಿ ಮೋದಿ. ಆದ್ದರಿಂದ ನಾವು ಅಭಿವೃದ್ಧಿ ಪರ್ವದ ಕಡೆ ಮುಖ ಮಾಡಿದ್ದೇವೆ. ನಾವು ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಾವು ಜನರ ಮುಂದೆ ಹೋಗುತ್ತಿರುವುದು ಎದುರಾಳಿಗಳ ಮುಖ ನೋಡಿಕೊಂಡಲ್ಲ. ಯಾವುದೇ ಜಾತಿ, ಜನಾಂಗದ ಹೆಸರನ್ನು ಹೇಳಿಕೊಂಡಲ್ಲ. ಅಭಿವೃದ್ಧಿ ರಾಜಕಾರಣವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ. ಹೀಗಾಗಿ, ನಾನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.