ಹುಟ್ಟಿದ ಮಗುವಿನ ಅಪ್ಪ ಅಮ್ಮ ಯಾರೆಂದು ತಿಳಿಯಬೇಕೆಂದ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಿಎಂ ಗರಂ!

ಕೊಡಗು: ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 102 ಕೋಟಿ ರೂ. ಹಣ ಬಂದಿದೆ. ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಸ್ಪಂದನೆಗೆ ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಯನ್ನು ಸಹೋದರಿ ಎಂದರು.

ಮಾದಾಪುರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಾಪ್ ಸಿಂಹ ಕೇಂದ್ರ ಸರಕಾರದ ಪರವಾಗಿ ಮಾತನಾಡಿದರು. ಆದರೆ, ಸತ್ಯವನ್ನು ತಿರುಚಬಾರದು. ಅವರು ಮಾತನಾಡಿದ್ದರ ಬಗ್ಗೆ ಅಸಮಾಧಾನ ಇಲ್ಲ. ಕೇಂದ್ರ ಸರಕಾರ ಎಲ್ಲವನ್ನು ಪುಕ್ಕಟೆ ನೀಡಿಲ್ಲ. ಹೆಲಿಕಾಪ್ಟರ್ ಕಳುಹಿಸಿದ್ದಕ್ಕೂ ಕೂಡ ಹಣ ನೀಡಲಾಗಿದೆ ಎಂದು ಹೇಳಿದರು.

ಮಂಡ್ಯದ ಬಸ್ ದುರಂತದಲ್ಲಿ ‌ಮೃತಪಟ್ಟ 30 ಕುಟುಂಬಗಳಿಗೆ ತಲಾ ಐದು ಲಕ್ಷ ಹಣವನ್ನು ಇಂದು‌ ನೀಡಲಾಗುತ್ತದೆ. ಕೇಂದ್ರ ಸರಕಾರ ನೀಡಿರುವ 546 ಕೋಟಿ‌ ಕೇವಲ ಕೊಡಗು ಜಿಲ್ಲೆಗೆ ಮಾತ್ರ ಅಲ್ಲ. ಎಂಟು ಜಿಲ್ಲೆಗಳಿಗೆ ನೀಡಲಾಗುತ್ತದೆ. ಜಿಲ್ಲೆಯ ಶಾಸಕರ ಮನವಿ ಮೇರೆಗೆ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇನೆ ಎಂದರು.

ಸಿಎಂ, ಸಂಸದರ ನಡುವೆ ವಾಕ್ಸಮರ

ಕೇಂದ್ರ ಸರ್ಕಾರ ಸಾಕಷ್ಟು‌ ಅನುದಾನ ಕೊಟ್ಟಿದೆ ಎಂದು ವೇದಿಕೆಯಲ್ಲಿ ಸಮರ್ಥನೆ ನೀಡಿದ ಪ್ರತಾಪ್ ಸಿಂಹ ಅವರು ಮಾತು ನಿಲ್ಲಿಸುವಂತೆ ಸಿಎಂ ತಾಕೀತು ಮಾಡಿದರು. ನಾವು ಮಾಡಿದ ಕೆಲಸವನ್ನು ಜನರಿಗೆ ತಿಳಿಸಬೇಕು. ಹುಟ್ಟಿದ ಮಗುವಿಗೆ ಅಪ್ಪ-ಅಮ್ಮ ಯಾರೆಂದು ಗೊತ್ತಾಗಬೇಕು ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ಕಿಡಿಕಾರಿದ ಎಚ್‌ಡಿಕೆ, ನಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಸರಕಾರಿ ನೌಕರರ ಸಂಘದಿಂದ 100 ಕೋಟಿ ರೂ. ಪರಿಹಾರ

ಸರಕಾರಿ ನೌಕರರ ಸಂಘದಿಂದ ಕೊಡಗು ಸಂತ್ರಸ್ತರ ಮುಖ್ಯಮಂತ್ರಿ ಪರಿಹಾರ ನಿಧಿಗೆ 100 ಕೋಟಿ ರೂ. ಹಣ ನೀಡಿದರು. ಕೊಡಗಿನ ಮಾದಾಪುರದಲ್ಲಿ ಮುಖ್ಯಮಂತ್ರಿಗೆ ಚೆಕ್ ನೀಡಿ ಕೊಡಗಿನ ಸಂತ್ರಸ್ತರಿಗಾಗಿ ಸಹಾಯಹಸ್ತ ಚಾಚಿದರು. (ದಿಗ್ವಿಜಯ ನ್ಯೂಸ್)