ಅಂಗವಿಕಲರಿಗೆ ವಿಶೇಷ ವ್ಯವಸ್ಥೆ

ಬೀದರ್: ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರು ಸುಲಭವಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ಹಲವು ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿರುವ ಎಲ್ಲ ಅಂಗವಿಕಲರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು ಎಂದು ಜಿಪಂ ಸಿಇಒ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಂಗಳವಾರ ನಗರದ ರಂಗಮಂದಿರದಲ್ಲಿ ಅಂಗವಿಕಲರಿಗಾಗಿ ನಡೆದ ಚುನಾವಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಡೆಯಲು ಸಾಧ್ಯವಾಗದವರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ವೀಲ್ಚೇರ್, ವಾಕಿಂಗ್ ಸ್ಟಿಕ್ ಲಭ್ಯವಿದ್ದು, ದೃಷ್ಟಿಹೀನರಿಗೆ ಅನುಕೂಲವಾಗಲು ಮತಯಂತ್ರದಲ್ಲಿ ಸಂಖ್ಯೆಗಳು ಬ್ರೈಲ್ ಲಿಪಿಯಲ್ಲಿರುತ್ತವೆ. ಅಂಗವಿಕಲರಿಗೆ ಸಹಕರಿಸಲು ಮತಗಟ್ಟೆಯಲ್ಲಿ ಇಬ್ಬರು ಸಹಾಯಕರನ್ನು ನಿಯೋಜಿಸಲಾಗುವುದು. ಎಲ್ಲ ಮತಗಟ್ಟೆಗಳು ಅಂಗವಿಕಲರಿಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದ್ದು, ವಿಶೇಷಚೇತನರು ಮತದಾನ ಮಾಡಬಹುದು ಎಂದು ಹೇಳಿದರು.
ಮತದಾನ ಕೇಂದ್ರಗಳಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರು ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ತಮ್ಮ ಮನೆ ಮತ್ತು ಸುತ್ತಲಿನ ಜನರಿಗೆ ಸಹ ಮತದಾನ ಮಾಡುವಂತೆ ಪ್ರೇರಣೆ ನೀಡಬೇಕು. ಜಿಲ್ಲೆಯಲ್ಲಿರುವ ಎಲ್ಲ ಅಂಗವಿಕಲರು ಮತ ಚಲಾಯಿಸುವಂತಾಗಬೇಕು ಎಂದು ತಿಳಿಸಿದರು.
ಚುನಾವಣೆ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಮಾತನಾಡಿ, ಜಿಲ್ಲೆಯಲ್ಲಿ 20,271 ಜನ ಅಂಗವಿಕಲರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಇವರು ಸುಲಭವಾಗಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವಂತಾಗಲು ನಾನಾ ಸೌಲಭ್ಯ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದು ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಗವಿಕಲರು ಭಾಷಣ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಹಲವರು ಮಾತನಾಡಿ ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ದತ್ತಾತ್ರಿ ಢೋಣಗಾಪುರ ಮಾತನಾಡಿ, ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದರು. ಕಲ್ಲಪ್ಪ ಲಕ್ಷ್ಮಣ ಮಾತನಾಡಿ, ತಮ್ಮ ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳದಿರಿ ಎಂದು ಸಲಹೆ ಮಾಡಿದರು. ಗುರಮ್ಮ ಮಾತನಾಡಿ, ಸಾಕಷ್ಟು ಜನರಿಗೆ ಮತದಾನದ ಮಹತ್ವದ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಹೀಗಾಗಿ ಎಲ್ಲರೂ ಮತದಾನದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದರು. ಮಂಗಲಾ ಮರಖಲೆ ಮಾತನಾಡಿ, ಅಂಗವಿಕಲರಿಗಾಗಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಅಂಗವಿಕಲರ ಜತೆಗೆ ಸಾಮಾನ್ಯ ಜನರಿಗೂ ಸಹ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುವುದಾಗಿ ಭರವಸೆ ನೀಡಿದರು. ತುಕಾರಾಮ, ಮಸ್ತಾನಸಾಬ್ ಚಿದ್ರಿ, ರಮೇಶ ರಾಠೋಡ್, ಬಂಡೆಪ್ಪ ಕಾಡವಾದ ಮಾತನಾಡಿದರು.
ರಾಜ್ಯ ಮಟ್ಟದ ಚುನಾವಣೆ ಮಾಸ್ಟರ್ ಟ್ರೇನರ್ ರಮೇಶ ಮಠಪತಿ, ಡಿಎಚ್ಒ ಡಾ.ಎಂ.ಎ.ಜಬ್ಬಾರ್, ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಇತರರಿದ್ದರು. ಶಿವಕುಮಾರ ಪಾಟೀಲ್ ನಿರೂಪಣೆ ಮಾಡಿದರು. ಜಗನ್ನಾಥ ವಂದಿಸಿದರು.