‘ಐಟಿ ದಾಳಿ ನಡೆಸಿ, ಕಾಂಗ್ರೆಸಿಗರ ಧ್ವನಿ ಅಡಗಿಸುವುದು ಭ್ರಮೆ’: ಬಿಜೆಪಿ ವಿರುದ್ಧ ಸಂಸದ ಹನುಮಂತಯ್ಯ ಗರಂ

ನವದೆಹಲಿ: ಐಟಿ ದಾಳಿ ಮೂಲಕ ಕಾಂಗ್ರೆಸ್ ನಾಯಕರ ಧ್ವನಿ ಅಡಗಿಸುತ್ತೇನೆಂದು ಬಿಜೆಪಿ ಭಾವಿಸಿದ್ದರೆ ಅದು ಭ್ರಮೆ ಎಂದು ಕಾಂಗ್ರೆಸ್​ ಸಂಸದ ಡಾ. ಎಲ್. ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ವಿಚಾರವಾಗಿ ನವದೆಹಲಿಯಲ್ಲಿ ಅವರು ಪ್ರತಿಕ್ರಿಯಿಸಿದರು. ಕರ್ನಾಟಕದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದಾಗಿನಿಂದ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ ಎಂದು ಆರೋಪಿಸಿದರು.

ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ಕಾಂಗ್ರೆಸ್​ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿಸುತ್ತಿದೆ. ಡಿ.ಕೆ. ಶಿವಕುಮಾರ್ ಅವರಂತೆಯೇ ಡಾ.ಜಿ. ಪರಮೇಶ್ವರ್ ಅವರನ್ನೂ ಟಾರ್ಗೆಟ್​ ಮಾಡಲಾಗಿದೆ ಎಂದರು.

ಸಂವಿಧಾನಬದ್ಧ ಸಂಸ್ಥೆಗಳಾದ ಐಟಿ ಮತ್ತು ಇಡಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಉಪಚುನಾವಣೆ ಮುಗಿಯುವ ತನಕ ಡಿ.ಕೆ.ಶಿವಕುಮಾರ್ ಅವರನ್ನ ಹೊರಗಡೆ ಬಿಡುವ ಹಾಗೇ ಕಾಣಿಸುತ್ತಿಲ್ಲ. ಸಜ್ಜನ‌ ರಾಜಕಾರಣಿ ಪರಮೇಶ್ವರ್ ಮನೆ ಮೇಲೆ ದಾಳಿ ನಡೆಸಿರುವುದು ಸರಿಯಲ್ಲ. ಇದು ರಾಜಕೀಯ ಪ್ರೇರಿತ ದಾಳಿ ಎಂದು ವ್ಯಗ್ರಗೊಂಡರು.

 

Leave a Reply

Your email address will not be published. Required fields are marked *