ಪೌತಿ ಖಾತೆ ಕ್ಯಾತೆಗೆ ತೆರೆ

ಬೆಂಗಳೂರು: ದಸರಾ ಮುಗಿದ ಕೂಡಲೇ ರೈತರು ಎದುರಿಸುತ್ತಿರುವ ಪೌತಿ ಖಾತೆ ಸಮಸ್ಯೆಗೆ ಮೂರು ತಿಂಗಳ ಅವಧಿಯೊಳಗೆ ಮಂಗಳ ಹಾಡಲು ರಾಜ್ಯ ಸರ್ಕಾರ ವಿಶೇಷ ಆಂದೋಲನಕ್ಕೆ ಸಜ್ಜಾಗುತ್ತಿದೆ.

ರೈತರು ಮೃತಪಟ್ಟ ಸಂದರ್ಭದಲ್ಲಿ ಅವರ ಜಮೀನು ಮಕ್ಕಳಿಗೆ ವರ್ಗಾವಣೆ ಆಗದಿರುವ ಸಮಸ್ಯೆ ಬಗೆಹರಿಸಲು ದಸರಾ ಮುಗಿದ ಕೂಡಲೇ ಪೌತಿ ಖಾತೆ ಆಂದೋಲನ ಆರಂಭಿಸಲು ಸಿದ್ಧತೆ ನಡೆದಿದೆ. ಖಾತೆ ಬದಲಾವಣೆಗೆ ರೈತರು ಮಧ್ಯವರ್ತಿಗಳ ಮೊರೆ ಹೋಗಬೇಕಾದ ಸ್ಥಿತಿ ಬಹುತೇಕ ಎಲ್ಲ ತಾಲೂಕು ಗಳಲ್ಲಿ ಇದೆ. ಅನೇಕ ಕಡೆ ಲಂಚ ಪಡೆದು ಒಬ್ಬರ ಜಮೀನನ್ನು ಇನ್ನೊಬ್ಬರಿಗೆ ಖಾತೆ ಮಾಡಿಕೊಟ್ಟಿರುವ ಉದಾಹರಣೆಗಳು ಸಾಕಷ್ಟು ಇವೆ. ಹಿಂದಿನ ಸರ್ಕಾರ ಕಂದಾಯ ಅದಾಲತ್ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಿತ್ತಾದರೂ ಅದರಿಂದ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆ ಹರಿದಿಲ್ಲ. ರೈತರು ತಾಲೂಕು ಕಚೇರಿಗಳಿಗೆ ಅಲೆದಾಡುವುದೂ ತಪ್ಪಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲವೆಂಬ ಆರೋಪಗಳಿವೆ. ಕೆಲವೆಡೆ ಶಾಲಾ ದಾಖಲಾತಿಗಳನ್ನು ಪಡೆದು ಪೌತಿ ಖಾತೆ ಮಾಡಿಕೊಡುವ ಯತ್ನವೂ ನಡೆದಿತ್ತು. ಇದಕ್ಕೆಲ್ಲ ಮುಕ್ತಿ ಕೊಡಿಸುವುದು ಸರ್ಕಾರದ ಉದ್ದೇಶ.

ಸಿದ್ಧತೆಗೆ ಸೂಚನೆ: ಕಂದಾಯ ಸಚಿವ ಆರ್. ಅಶೋಕ್ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಶೇಷ ಆಂದೋಲನಕ್ಕೆ ಸಾಫ್ಟ್​ವೇರ್, ಸಿಬ್ಬಂದಿ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ದಸರಾ ಮುಗಿದ ಕೂಡಲೇ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಪರೆನ್ಸ್ ನಡೆಸಲಾಗುತ್ತದೆ. ಆ ನಂತರ ಮುಖ್ಯಮಂತ್ರಿಯಿಂದ ಯೋಜ ನೆಗೆ ಚಾಲನೆ ಕೊಡಿಸಲಾಗುತ್ತದೆ.

ಹೊಣೆ ಯಾರಿಗೆ?: ಗ್ರಾಮ ಲೆಕ್ಕಾಧಿಕಾರಿ ಗಳಿಗೆ ಈ ಆಂದೋಲನದ ಹೊಣೆ ನೀಡ ಲಾಗುತ್ತದೆ. ಅವರೇ ಆಯಾ ಗ್ರಾಮಗಳಲ್ಲಿ ದಾಖಲೆ ಸಂಗ್ರಹಿಸಬೇಕು. ಆ ನಂತರ ತಾಲೂಕು ಕಚೇರಿಯಲ್ಲಿ ಭೂಮಿ ವಿಭಾಗಕ್ಕೆ ನೀಡಿ ಪಹಣಿಯ ಬದಲಾವಣೆ ಮಾಡಬೇಕು. ಪ್ರತಿ ಪಹಣಿಗೆ ಕನಿಷ್ಠ ದರ ಮಾತ್ರ ನಿಗದಿಯಾಗಲಿದೆ. ರೈತರಿಗೆ ಹೊಣೆ ಆಗದಂತೆ ಈ ಆಂದೋಲನ ನಡೆಯಲಿದೆ.

ಎಷ್ಟು ಅವಧಿ?: ರಾಜ್ಯದಲ್ಲಿ ಎಲ್ಲ ಪೌತಿ ಖಾತೆಗಳನ್ನು ಮೂರು ತಿಂಗಳ ಅವಧಿಯಲ್ಲಿ ಮಾಡಿ ಮುಗಿಸಬೇಕೆಂಬ ಗಡುವು ವಿಧಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಪೌತಿ ಖಾತೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಬಾಕಿ ಇರಬಾರದೆಂದು ವೀಡಿಯೋ ಕಾನ್ಪರೆನ್ಸ್ ಸಂದರ್ಭದಲ್ಲಿ ಸೂಚನೆ ನೀಡಲಾಗುತ್ತದೆ.

ಪ್ರಮುಖ ಉದ್ದೇಶ?: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕೇಂದ್ರ ಹಾಗೂ ರಾಜ್ಯದಿಂದ ಒಟ್ಟು 10 ಸಾವಿರ ರೂ. ನೀಡಲಾಗುತ್ತದೆ. ಪೌತಿ ಖಾತೆ ಮಕ್ಕಳ ಹೆಸರಿಗೆ ವರ್ಗಾವಣೆಯಾಗದಿದ್ದರೆ ರೈತರಿಗೆ ಅನುಕೂಲ ಆಗುವುದಿಲ್ಲ. ಯಾವುದೇ ಜಮೀನು ಎಷ್ಟು ಜನ ಮಕ್ಕಳಿಗೆ ವರ್ಗಾವಣೆಯಾಗುತ್ತದೆಯೋ ಅಷ್ಟು ಜನರಿಗೂ ಯೋಜನೆಯ ಲಾಭ ಸಿಗುತ್ತದೆ. ಆ ಉದ್ದೇಶದಿಂದ ಸರ್ಕಾರ ವಿಶೇಷ ಆಂದೋಲನ ನಡೆಸಲಿದೆ.

ಅನುಕೂಲಗಳೇನು?
  1. ಮಧ್ಯವರ್ತಿಗಳ ಹಾವಳಿ ಇಲ್ಲದೆ ಖಾತೆಗಳ ವರ್ಗಾವಣೆ ಸುಲಭ
  2. ಸರ್ಕಾರದ ಯೋಜನೆಗಳ ಫಲ ಖಾತೆದಾರರಿಗೆ ಸಿಗಲಿದೆ
  3. ಪದೇಪದೆ ತಾಲೂಕು ಕಚೇರಿ ಅಲೆದಾಟ ತಪ್ಪಲಿದೆ
ಏನಿದು ಪೌತಿ ಖಾತೆ

ರೈತರ ಹೆಸರಿನಲ್ಲಿ ಇರುವ ಪಿತ್ರಾರ್ಜಿತ ಜಮೀನನ್ನು ಅವರ ನಿಧನಾನಂತರ ಮಕ್ಕಳ ಹೆಸರಿಗೆ ಖಾತೆ ಮಾಡಿಕೊಡುವುದೇ ಪೌತಿ ಖಾತೆ. ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೇ ಮೃತರ ಮನೆಯವರನ್ನು ಸಂರ್ಪಸಿ ಪೌತಿ ಖಾತೆ ಮಾಡಿಸಿಕೊಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ. ಈ ಪ್ರಕ್ರಿಯೆ ತಡವಾದರೆ ತಾಲೂಕು ಕಚೇರಿಗಳನ್ನು ಸುತ್ತಿ ಖಾತೆ ಬದಲಾವಣೆ ಮಾಡಿಸಿಕೊಳ್ಳುವುದು ಸುಲಭದ ಮಾತಾಗಿರುವುದಿಲ್ಲ. ಯಾವುದೇ ಜಮೀನು ಖಾತೆ ರೈತರ ಹೆಸರಿನಲ್ಲಿ ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಕ್ಕುವುದಿಲ್ಲ. ಆದ್ದರಿಂದಲೇ ಸರ್ಕಾರ ರೈತರಿಗೆ ಯಾವುದೇ ಸೌಲಭ್ಯ ತಪ್ಪಬಾರದು ಎಂಬ ಕಾರಣಕ್ಕೆ ವಿಶೇಷ ಆಂದೋಲನ ನಡೆಸಲಿದೆ.

ಪೌತಿ ಖಾತೆ ಸಮಸ್ಯೆಗೆ ರಾಜ್ಯದಲ್ಲಿ ಮುಕ್ತಿ ಕಾಣಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ. ನೆರೆ ಹಾವಳಿ ಇಲ್ಲದಿದ್ದರೆ ಈ ವೇಳೆಗೆ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿತ್ತು. ದಸರಾ ಮುಗಿದ ಕೂಡಲೇ 3 ತಿಂಗಳಿನಲ್ಲಿ ಪೌತಿ ಖಾತೆ ಸಮಸ್ಯೆ ಬಗೆಹರಿಯಲಿದೆ.

| ಆರ್.ಅಶೋಕ್ ಕಂದಾಯ ಸಚಿವ

ಯಾವ ದಾಖಲೆಗಳು ಬೇಕು?

ಪೌತಿ ಖಾತೆ ಮಾಡಿಸಲು ಅರ್ಹ ರೈತರು ಪಹಣಿ, ವಂಶವೃಕ್ಷ, ರೈತರ ಮರಣ ಪತ್ರ ನೀಡಿದರೆ ಸಾಕು. ಹಾಗೆಯೇ ರೈತರಿಗೆ ಇರುವ ಮಕ್ಕಳು, ಯಾರ ಹೆಸರಿಗೆ ಎಷ್ಟು ಜಮೀನು ಎಂಬ ದಾಖಲೆ ನೀಡುವುದೂ ಕಡ್ಡಾಯ.

Leave a Reply

Your email address will not be published. Required fields are marked *