ಬಾಯಿಹುಣ್ಣಿನ ಭಯ ಬೇಡ

| ಡಾ. ವೆಂಕಟ್ರಮಣ ಹೆಗಡೆ

ಪದೇಪದೆ ಕಾಡುವ ಬಾಯಿಹುಣ್ಣು ಒಂದು ಆಟೋ ಇಮ್ಯೂನ್ ಕಾಯಿಲೆಯಾಗಿರಬಹುದೆಂದು ಎಂದು ವೈದ್ಯಕೀಯ ವಿಜ್ಞಾನಿಗಳು ಇತ್ತೀಚಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಕರುಳಿಗೆ ಸಂಬಂಧಿಸಿದ ತೊಂದರೆ. ಪದೇಪದೆ ಬಾಯಿಯಲ್ಲಿ ಹುಣ್ಣು ಆಗುವುದು, ಒಂದೇ ಬಾರಿ ನಾಲ್ಕು ಐದು ಹುಣ್ಣುಗಳು ಕಾಣಿಸಿಕೊಳ್ಳುವುದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ನೋವು, ಸಂಕಟದ ಜತೆ ಉರಿ ಕಂಡುಬರುತ್ತದೆ. ಸರಿಯಾದ ಆಹಾರವನ್ನು ಸೇವಿಸಲೂ ಸಾಧ್ಯವಾಗದು. ಮಾತನಾಡಲೂ ಕಷ್ಟವಾಗುತ್ತದೆ. ಬ್ರಷ್ ಮಾಡಲು ಕಷ್ಟ.

ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಅಸಮತೋಲನವು ಇದಕ್ಕೆ ನಾಂದಿಯಾಗಿರುತ್ತದೆ. ದೇಹದಲ್ಲಿ ರಕ್ಷಕಗಳಾಗಿ ಕೆಲಸ ಮಾಡಬೇಕಾದವು ದೇಹದ ಮೇಲೆಯೇ ದಾಳಿ ಮಾಡುತ್ತವೆ. ಇಂತಹ ಅವ್ಯವಸ್ಥೆಯಿಂದಾಗುವ ತೊಂದರೆಗಳಿಗೆ, ಕಾಯಿಲೆಗಳಿಗೆ ಆಟೋ ಇಮ್ಯೂನ್ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಇದನ್ನು ಸರಿಮಾಡಲು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಕಾಲನಿ ವೃದ್ಧಿಯಾಗುವಂತೆ ಮಾಡಬೇಕು. ಬ್ಯಾಕ್ಟೀರಿಯಾಗಳ ಅಸಮತೋಲನವನ್ನು ಸರಿಮಾಡಬೇಕು. ಪ್ರೀಬಯಾಟಿಕ್​ಗಳನ್ನು ಹೆಚ್ಚು ಸೇವಿಸಬೇಕು. ಇವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳಿಗೆ ಅನುವು ಮಾಡಿಕೊಡುತ್ತದೆ.

ಫರ್ವೆಂಟೆಡ್ ಆಹಾರಗಳನ್ನು ಹೆಚ್ಚು ಸೇವಿಸಬೇಕು. ರಾಗಿ ಅಥವಾ ಅಕ್ಕಿಯ ಗಂಜಿ ಮಾಡಿ, ಅದಕ್ಕೆ ನೀರು ಅಥವಾ ಮಜ್ಜಿಗೆ ಸೇರಿಸಿಟ್ಟು ಎಂಟು ಗಂಟೆಯ ಬಳಿಕ ಸೇವಿಸಬೇಕು. ಇದು ಅತ್ಯಂತ ಪರಿಣಾಮಕಾರಿ ವಿಧಾನ. ಇದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹವನ್ನು ಸೇರುತ್ತವೆ. ಇದು ಸಮಸ್ಯೆಯ ಮೂಲ ಕಾರಣಕ್ಕೆ ಪರಿಹಾರ ನೀಡುವ ವಿಧಾನ.

ಇನ್ನೊಂದು ತಂತ್ರ ಹುಣ್ಣುಗಳನ್ನು ಕಡಿಮೆ ಮಾಡಿಕೊಳ್ಳುವುದು. ಇಲ್ಲಿ ಸಮಸ್ಯೆಯ ಮೂಲ ಕಾರಣವನ್ನು ಪರಿಗಣಿಸದೆ ಕೇವಲ ತಕ್ಷಣಕ್ಕೆ ಪರಿಹಾರ ನೀಡುವಂತಹ ವ್ಯವಸ್ಥೆ. ಸೀಬೆ ಎಲೆಯ ಕಷಾಯವನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸುವುದು ಸಹಕಾರಿ. ನೀರನ್ನು ಬಿಸಿಗಿಟ್ಟು ಅದಕ್ಕೆ ಸೀಬೆಯ ಚಿಗುರೆಲೆಗಳನ್ನು, ಗರಿಕೆಯನ್ನು ಹಾಕಬೇಕು. ಕುದಿಯುತ್ತಿರುವಾಗ ಚಿಟಿಕೆ ಉಪ್ಪು ಹಾಕಿ ಕಷಾಯ ಮಾಡಬೇಕು. ಸೋಸಿ ತಣ್ಣಗಾದ ನಂತರ ಬಾಯಿ ಮುಕ್ಕಳಿಸಬೇಕು. ಸೀಬೆಯ ಚಿಗುರೆಲೆಗಳ ಬದಲಾಗಿ ಮಾವಿನ ಚಿಗುರೆಲೆ ಅಥವಾ ಬೇವಿನ ಇಲ್ಲವೇ ಹುಣಸೆಯ ಎಲೆಗಳನ್ನು ಉಪಯೋಗಿಸಬಹುದು.

ಬಾಳಿದಿಂಡಿನ ಮಧ್ಯದ ಭಾಗವನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವು ತಂಪಾಗಿ ಬಾಯಿಹುಣ್ಣು ಕಡಿಮೆಯಾಗುತ್ತದೆ. ಹೆಚ್ಚು ಮೂತ್ರವುಂಟಾಗಿ ದೇಹದಲ್ಲಿನ ಕಶ್ಮಲಗಳು ಹೊರಹೋಗಲು ಸಾಧ್ಯವಾಗುತ್ತದೆ.

ಮಲಬದ್ಧತೆಯಿದ್ದರೆ ಬಾಯಿಹುಣ್ಣುಗಳು ಆಗುವ ಸಾಧ್ಯತೆ ಹೆಚ್ಚು. ಹೊಟ್ಟೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮಲಬದ್ಧತೆ ನಿವಾರಣೆಗೆ ನೀರಿನಲ್ಲಿ ಕರಗುವ ನಾರಿನಂಶವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಉದಾಹರಣೆಗೆ ಇಸಬ್​ಗೋಲ್. ನಾರಿನಂಶವು ವಿಸರ್ಜನಾವ್ಯವಸ್ಥೆಯು ಸರಿಯಾಗುವಂತೆ ಮಾಡುತ್ತದೆ. ಅಜೀರ್ಣದಿಂದಲೂ ಬಾಯಿಯಲ್ಲಿ ಹುಣ್ಣುಗಳಾಗಬಹುದು. ಅಜೀರ್ಣ ಕಡಿಮೆ ಮಾಡಲು ಸಾಕಷ್ಟು ಸುಲಭ ವಿಧಾನಗಳಿದ್ದು, ಜೀರಿಗೆ ಕಷಾಯ ಸುಲಭ ವಿಧಾನ. ತನ್ಮೂಲಕ ಮನೆಯಲ್ಲಿಯೇ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಬಾಯಿಹುಣ್ಣು ಆಗುವುದುಂಟು. ಆಗ ದೇಹಕ್ಕೆ ತಂಪಾಗುವ ಆಹಾರವನ್ನು, ಪಾನೀಯವನ್ನು ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನೀರನ್ನು ಹೆಚ್ಚು ಕುಡಿಯಬೇಕು. ದಿನಕ್ಕೆ 3-4 ಲೀಟರ್ ನೀರು ಅಗತ್ಯ. ಇದು ಎಲ್ಲ ಸಮಸ್ಯೆಗಳನ್ನು ಹತೋಟಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ಸುಲಭ ಉಪಾಯಗಳಿಂದ ಸಮಸ್ಯೆಯ ನಿವಾರಣೆ ಸಾಧ್ಯ.