ರಾಜ್ಯದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣ ಭಾರಿ ಹೆಚ್ಚಳ

| ಕಿರಣ್ ಮಾದರಹಳ್ಳಿ, 

ಬೆಂಗಳೂರು: ರಾಜ್ಯದಲ್ಲಿ ಜನರು ಬಾಯಿ ಕ್ಯಾನ್ಸರ್​ಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 4 ತಿಂಗಳಲ್ಲಿ 8623 ಜನರಲ್ಲಿ ಈ ರೋಗ ದೃಢಪಟ್ಟಿದೆ. ಹೆಚ್ಚು ತಂಬಾಕು ಹಾಗೂ ಗುಟ್ಖಾ ಸೇವನೆ ಮಾಡುವವರು ಕ್ಯಾನ್ಸರ್​ಗೆ ಬಲಿಯಾಗುತ್ತಿದ್ದಾರೆ.

2018ರಲ್ಲಿ ರಾಜ್ಯದಲ್ಲಿ 12,426 ಬಾಯಿ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ 2019ರ ಏಪ್ರಿಲ್​ನಿಂದ ಜುಲೈವರೆಗಿನ ಅವಧಿಯಲ್ಲೇ 8,623 ಮಂದಿ ಈ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಯಾದಗಿರಿ, ರಾಮನಗರ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮಹಿಳೆಯರಲ್ಲೇ ಜಾಸ್ತಿ!: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಪುರುಷರಿಗಿಂತ ಹೆಚ್ಚು ಮಹಿಳೆಯರು ಬಾಯಿ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಕಳೆದ 4 ತಿಂಗಳಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ 4287 ಪುರುಷರು ಹಾಗೂ 4336 ಮಹಿಳೆಯರು. ಹೆಚ್ಚು ಕಡ್ಡೀಪುಡಿ ಜಗಿಯುವುದರಿಂದ, ವೈರಾಣು ಸೋಂಕು ದಾಳಿ, ಬಾಯಿ ಸ್ವಚ್ಛತೆ ಕಾಪಾಡಿಕೊಳ್ಳದ ಕಾರಣ ಮಹಿಳೆಯರು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಬ್ಯಾನಾಗಿದ್ರೂ ಸೇಲಾಗುತ್ತೆ ಗುಟ್ಖಾ!: ತಂಬಾಕು ಸಹಿತ ಗುಟ್ಖಾ ಮಾರಾಟಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೆಟ್​ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರೂ ಪ್ರತ್ಯೇಕವಾಗಿಯೇ ಖರೀದಿಸಿ ನಂತರ ಎರಡನ್ನೂ ಮಿಶ್ರಣ ಮಾಡಿ ಸೇವನೆ ಮಾಡುತ್ತಿದ್ದಾರೆ. ಸರ್ಕಾರ ತಂಬಾಕು ಸಹಿತ ಗುಟ್ಖಾ ಮಾರಾಟ ಮಾಡಬಾರದು ಎಂದಷ್ಟೇ ಹೇಳಿರುವುದರಿಂದ ಪ್ರತ್ಯೇಕ ಮಾರಾಟದ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಲಕ್ಷಣಗಳೇನು?

  • ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆ
  • ಆಹಾರ ಸೇವಿಸಿದಾಗ ಬಾಯಿಯಲ್ಲಿ ಉರಿ
  • ಬಾಯಿಯಲ್ಲಿ ಹುಣ್ಣು, ಸಣ್ಣ ಗಡ್ಡೆ.
  • ಮಾತನಾಡಲು ಹಾಗೂ ಆಹಾರ ಸೇವಿಸಲು ಕಷ್ಟ

ಯಾದಗಿರಿ, ರಾಮನಗರ ಟಾಪ್

ಬಾಯಿ ಕ್ಯಾನ್ಸರ್ ಪ್ರಕರಣಗಳ ಪಟ್ಟಿಯಲ್ಲಿ ಯಾದಗಿರಿ ಹಾಗೂ ರಾಮನಗರ ಮೊದಲೆರಡು ಸ್ಥಾನದಲ್ಲಿವೆ. ಯಾದಗಿರಿಯಲ್ಲಿ 1,399, ರಾಮನಗರದಲ್ಲಿ 909, ಕಲಬುರ್ಗಿಯಲ್ಲಿ 879, ದಕ್ಷಿಣ ಕನ್ನಡದಲ್ಲಿ 539, ಕೊಪ್ಪಳದಲ್ಲಿ 538 ಪ್ರಕರಣಗಳು ವರದಿಯಾಗಿವೆ.

ರೋಗ ಹೇಗೆ ಬರುತ್ತೆ?

  • ತಂಬಾಕು, ಮದ್ಯ ಸೇವನೆಯಿಂದ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 70
  • ವೈರಾಣು ಸೋಂಕು, ಬಾಯಿ ಸ್ವಚ್ಛಗೊಳಿಸದಿರುವುದರಿಂದ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇ.30
  • ಅವೈಜ್ಞಾನಿಕ ಕೃತಕ ಹಲ್ಲು ಜೋಡಣೆ, ಹಲ್ಲಿಗೆ ತುಂಬಿಸಲಾದ ಸಿಮೆಂಟ್.
  • ರಾಸಾಯನಿಕ ಮಿಶ್ರಿತ ಆಹಾರ, ಬದಲಾದ ಜೀವನ ಶೈಲಿ, ಆನುವಂಶಿಕತೆ

30 ವರ್ಷಕ್ಕೇ ಬರುತ್ತೆ

ಬಾಯಿ ಕ್ಯಾನ್ಸರ್​ಗೆ ಧೂಮಪಾನವೂ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕರು ಸಿಗರೇಟ್ ಚಟಕ್ಕೆ ದಾಸರಾಗುತ್ತಿದ್ದಾರೆ. ಈವರೆಗೆ 50 ವರ್ಷ ವಯಸ್ಸಿನ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ್ದ ಬಾಯಿ ಕ್ಯಾನ್ಸರ್ ಇದೀಗ 30ರ ವಯೋಮಾನದಲ್ಲೇ ಬರುತ್ತಿದೆ ಎಂದು ವೈದ್ಯರು ಮಾಹಿತಿ ನೀಡುತ್ತಾರೆ.

ಸರ್ಕಾರದ ಅನುಮತಿ ಪಡೆಯದೆ ನಿಕೋಟಿನ್ ಅಂಶವಿರುವ ಪದಾರ್ಥಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾಯಿ ಕ್ಯಾನ್ಸರ್ ಗಂಭೀರ ಸ್ವರೂಪ ಪಡೆದಾಗ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಇದರಿಂದ ರೋಗ ನಿಯಂತ್ರಣಕ್ಕೆ ಸಮಸ್ಯೆಯಾಗಿದೆ.

| ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಆಸ್ಪತ್ರೆ, ಬೆಂಗಳೂರು.

ತಂಬಾಕು ಉತ್ಪನ್ನಗಳ ಸೇವನೆಯಿಂದಲೇ ಬಾಯಿ ಕ್ಯಾನ್ಸರ್ ಬರುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯ ಇಲಾಖೆಯಿಂದ ಅರಿವು ಮೂಡಿಸಲಾಗುತ್ತಿದೆ. ಯಾವುದೇ ರೂಪದ ತಂಬಾಕು ಸೇವನೆ ಮಾಡಿದರೂ ಕ್ಯಾನ್ಸರ್ ಬರುತ್ತದೆಂಬ ಅರಿವು ಜನರಿಗಿರಬೇಕು.

| ರಂಗಸ್ವಾಮಿ,  ಉಪ ನಿರ್ದೇಶಕ, ಆರೋಗ್ಯ ಇಲಾಖೆ (ಅಸಾಂಕ್ರಾಮಿಕ ರೋಗಗಳ ನಿರ್ವಹಣೆ ವಿಭಾಗ)

Leave a Reply

Your email address will not be published. Required fields are marked *