ನಾಳೆ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ: ಬಸ್​, ಟ್ಯಾಕ್ಸಿ, ಆಟೋ ಸಿಗೋದು ಡೌಟ್​

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದೆ. ಆದರೆ ರಾಜ್ಯದಲ್ಲಿ ಹಲವು ಸಂಘಟನೆಗಳು ಬಂದ್​ ಬೆಂಬಲಿಸದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಂದ್​ ತೀವ್ರತೆ ಕಂಡು ಬರುವುದು ಅನುಮಾನವಾಗಿದೆ.

ಕಾಯ್ದೆ ಜಾರಿಯಾದರೆ ಪ್ರತಿಯೊಬ್ಬ ನಾಗರಿಕರಿಗೆ ಇದರಿಂದ ಪೆಟ್ಟು ಬೀಳಲಿದೆ. ಮಸೂದೆ ಜಾರಿಯಿಂದ ರಾಜ್ಯ ಸಾರಿಗೆ ಇಲಾಖೆಗಳು, ಕೇಂದ್ರದ ಅಧೀನದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದ ರಾಜ್ಯ ಸಾರಿಗೆ ಇಲಾಖೆಗಳಿಗೆ ಪೆಟ್ಟು ಬೀಳಲಿದೆ. ಆರ್​ಟಿಒದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ರಾಜ್ಯದಲ್ಲಿ ಬಂದ್​ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್​​ಆರ್​​ಟಿಸಿ ಸಂಚಾರ ಅನುಮಾನವಾಗಿದೆ. ಆಟೋ ಸಂಚಾರ ಬಹುತೇಕ ಸ್ತಬ್ಧವಾಗಲಿದೆ. ನಮ್ಮ ಮೆಟ್ರೋ ಸಂಚಾರ ಮಾಮೂಲಿಯಂತೆ ಇರಲಿದ್ದು, ಖಾಸಗಿ ಬಸ್​ ಸಂಚಾರ ಯಥಾಸ್ಥಿತಿ ಇರಲಿದೆ ಮತ್ತು ಲಾರಿ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ತಿಳಿದು ಬಂದಿದೆ.

ರಾಷ್ಟ್ರವ್ಯಾಪಿ ಸಾರಿಗೆ ಮತ್ತು ಸಾರಿಗೆ ಕಾರ್ಮಿಕರ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದ್ದು ನಾಳೆ ನಗರದಲ್ಲಿ ಯಾವುದೇ ಟ್ಯಾಕ್ಸಿ ಸೇವೆಗಳು ಲಭ್ಯವಿರುವುದಿಲ್ಲ. ಈಗಾಗಲೇ ಎಲ್ಲಾ ನಮ್ಮ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕಮಿತ್ರರಿಗೂ ಸಂದೇಶ ರವಾನೆ ಮಾಡಲಾಗಿದೆ ಎಂದು ಓಲಾ ಟ್ಯಾಕ್ಸಿ ಫಾರ್ ಶ್ಯೂರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯನ್ನು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಸ್ವಾಗತಿಸುತ್ತಿದೆ. ಬಂದ್‍ಗೆ ನಮ್ಮ ಬೆಂಬಲವಿಲ್ಲ, ನಮ್ಮ ಎಲ್ಲ ವಾಣಿಜ್ಯ ವಾಹನಗಳು ಎಂದಿನಂತೆ ಸಂಚರಿಸಲಿವೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ ಸ್ಟಾಫ್​ ವರ್ಕರ್ಸ್​ ಫೆಡರೇಷನ್​ ಬಂದ್​ಗೆ ತಮ್ಮ ಬೆಂಬಲವಿಲ್ಲ ಎಂದು ತಿಳಿಸಿದೆ.

ನಾಳಿನ ಬಂದ್​ಗೆ ಸಂಘಟನೆಗಳು ಹಿಂದೇಟು ; ಶಾಲಾ ಕಾಲೇಜುಗಳಿಗೆ ರಜೆ ಇಲ್ಲ