ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಎಂದಿನಂತಿದೆ ಸಾರಿಗೆ ವ್ಯವಸ್ಥೆ

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರ್ ವಾಹನ(ತಿದ್ದುಪಡಿ) ಮಸೂದೆ ವಿರೋಧಿಸಿ ಸಿಐಟಿಯು ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ‌ ಕೊಟ್ಟಿದ್ದರೂ ರಾಜ್ಯದೆಲ್ಲೆಡೆ ಬಂದ್​ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ.

ಮುಷ್ಕರಕ್ಕೆ ಮುಂಜಾಗ್ರತೆ ಕ್ರಮವಾಗಿ ಬಿಎಂಟಿಸಿ ನಿನ್ನೆಯೇ ಎಲ್ಲ ನೌಕರರ ರಜೆ ಕಟ್​ ಮಾಡಿದ್ದ ಕಾರಣ, ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಿಎಂಟಿಸಿ ನಿನ್ನೆ 32 ಸಾವಿರ ಚಾಲಕ-ನಿರ್ವಾಹಕರಿಗೆ ಇಂದು ವಾರದ ರಜೆ ಅಥವಾ ದೀರ್ಘಾವಧಿ ರಜೆ ಅನ್ವಯವಾಗುವುದಿಲ್ಲ ಎಂದಿತ್ತು.

ಇದನ್ನು ಹೊರತು ಪಡಿಸಿ ಆಟೋ ಸಂಘಗಳು, ಕ್ಯಾಬ್​ಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಜನಜೀವನ ಎಂದಿನಂತೆ ಸಾಗಿದೆ.

ರಾಜ್ಯಕ್ಕೆ ತಟ್ಟದ ಬಂದ್​ ಬಿಸಿ
ಮಂಡ್ಯ, ಕೋಲಾರ, ರಾಮನಗರ, ಯಾದಗಿರಿ, ಬೆಳಗಾವಿ, ಮೈಸೂರು, ಹುಬ್ಬಳ್ಳಿ- ಧಾರವಾಡ ಸೇರಿ ರಾಜ್ಯದ ಹಲವೆಡೆ ಲಾರಿ, ಟ್ಯಾಕ್ಸಿ, ಗೂಡ್ಸ್ ವಾಹನ, ಪ್ರವಾಸಿಗರ ವಾಹನ, ಓಲಾ, ಉಬರ್, ಟ್ಯಾಕ್ಸಿವಾಲಾ ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿದೆ. ಆದರೆ ಉತ್ತರ ಕರ್ನಾಟಕದ ಲಾರಿ ಮಾಲೀಕರ ಸಂಘ ಸಾಂಕೇತಿಕವಾಗಿ ಬಂದ್​ಗೆ ಬೆಂಬಲ ಸೂಚಿಸಿದೆ. ಇನ್ನು ರಾಜ್ಯ ರಾಜಧಾನಿಯಲ್ಲಿ ಮೆಟ್ರೊ ಸಂಚಾರಕ್ಕೂ ಯಾವುದೆ ತೊಡಕುಂಟಾಗಿಲ್ಲ. (ದಿಗ್ವಿಜಯ ನ್ಯೂಸ್​)