ಅಕ್ಷರಗಳಿಗೆ ನಿಲುಕದ ಅಮ್ಮ

‘ಅಮ್ಮ’ ಎಂದರೆ ಅದೊಂದು ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪ ಅಮ್ಮ. ಅವಳ ಬಗೆಗಿನ ವರ್ಣನೆ ಅಕ್ಷರಗಳಿಗೆ ನಿಲುಕದ್ದು. ಮಕ್ಕಳು ಎಂಥ ಮಹಾನ್ ಸಾಧನೆ ಮಾಡಿ ಕೀರ್ತಿಯ ಉತ್ತುಂಗಕ್ಕೆ ಏರಿದರೂ ಅಮ್ಮನಿಗೆ ಮಾತ್ರ ಅವರು ಪುಟಾಣಿಗಳೇ. ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ತಾಯಿಯ ಜತೆಗಿನ ಒಡನಾಟವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಕೂಲಿ ಮಾಡಿ ಸಾಕಿದಳು…

ನಾನು ಇವತ್ತು ಪ್ರಧಾನಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ತಾಯಿ. 1989ರಲ್ಲಿ ನನ್ನ ತಂದೆ ತೀರಿಕೊಂಡರು. ಆಗ ಆರು ಮಂದಿ ಮಕ್ಕಳ ಜವಾಬ್ದಾರಿ ತಾಯಿಯ ಮೇಲೆ ಬಿತ್ತು. ನಾವೇನೂ ಅಷ್ಟು ಅನುಕೂಲಸ್ಥರಾಗಿರಲಿಲ್ಲ. ಆದರೆ ಅಮ್ಮ ಧೃತಿಗೆಡಲಿಲ್ಲ. ಅಕ್ಕಪಕ್ಕದ ಮನೆಗೆ ಪಾತ್ರೆ ತೊಳೆಯಲು ಹೋಗುತ್ತಿದ್ದಳು. ಗಾರ್ಡನ್​ಗಳಿಗೆ ನೀರು ಹಾಕುತ್ತಿದ್ದಳು, ಕೂಲಿ ಮಾಡಿ ನಮ್ಮನ್ನೆಲ್ಲ ಸಾಕಿದಳು. ಎಲ್ಲಾ ಕಷ್ಟಗಳನ್ನು ನುಂಗಿಕೊಂಡು ಮಕ್ಕಳಿಗೆ ಒಂದಿನಿತು ನೋವು ತಿಳಿಯದ ಹಾಗೆ ನೋಡಿಕೊಳ್ಳುವ ಗುಣ ಇರುವುದು ತಾಯಿಗೆ ಮಾತ್ರ. ಇದು ನನ್ನ ತಾಯಿಯ ಗುಣ ಮಾತ್ರವಲ್ಲ, ಎಲ್ಲ ಅಮ್ಮಂದಿರ ಗುಣವೂ ಅದೇ. ನನ್ನ ಅಮ್ಮನಿಗೀಗ 90 ವರ್ಷ. ಆದರೆ ಯಾವ ಕೆಲಸಕ್ಕೂ ಯಾರ ಮೇಲೂ ಅವಲಂಬಿತಳಾಗಿಲ್ಲ. ಪ್ರತಿಯೊಂದು ಕೆಲಸವನ್ನೂ ತಾನೇ ಮಾಡಿಕೊಳ್ಳುತ್ತಾಳೆ. ಶಾಲೆಯ ಮೆಟ್ಟಿಲು ಏರದಿದ್ದರೂ ಜಗತ್ತಿನ ಪ್ರತಿಯೊಂದು ಆಗುಹೋಗು ಆಕೆಗೆ ಗೊತ್ತಿದೆ. ಎಲ್ಲವನ್ನೂ ಟಿ.ವಿ. ಮೂಲಕ ತಿಳಿದುಕೊಳ್ಳುತ್ತಾಳೆ. ನಾನು ಪ್ರಧಾನಿಯಾದರೂ ತಾನು ಮಾತ್ರ ಚಿಕ್ಕಮನೆಯಲ್ಲಿಯೇ ಇದ್ದಾಳೆ. ಇಂಥ ತಾಯಿಯನ್ನು ಪಡೆದ ನಾನು ಧನ್ಯ.

| ನರೇಂದ್ರ ಮೋದಿ, ಪ್ರಧಾನಿ

ನಾನು ಭಾವಜೀವಿಯಾಗಿದ್ದು ಅವಳಿಂದಲೇ…

ನಾನು ತಾಯ್ತನದ ಔನ್ನತ್ಯದ ಸವಿಯುಂಡು ಬೆಳೆದವನು. ದೇಶದ ಪ್ರಧಾನಿಯ ಪತ್ನಿ ಯಾದರೂ ಯಾವುದೇ ಹಮ್ಮು ಬಿಮ್ಮು ತೋರದೆ ಎಲ್ಲರಿಗೂ ಅಮ್ಮನಾದವರು ಚೆನ್ನಮ್ಮ. ಆಕೆ ಅನ್ನಪೂರ್ಣೆಯ ಅಪರಾವತಾರ. ನಮ್ಮ ಮನೆಗೆ ಬಂದವರಾರೂ ಹಸಿದು ಮರಳಿದ್ದು ನನಗೆ ನೆನಪಿಲ್ಲ. ಹೇಳಿ ಕೇಳಿ ನಮ್ಮದು ರಾಜಕಾರಣಿಗಳ ಕುಟುಂಬ. ದೇಶದ ಹಿರಿಯ ರಾಜಕೀಯ ಮುತ್ಸದ್ದಿ ಎನಿಸಿಕೊಂಡ ದೇವೇಗೌಡರು, ರಾಜ್ಯದ ಮುಖ್ಯಮಂತ್ರಿಯಾದ ನಾನು, ಸಚಿವರಾಗಿರುವ ಸಹೋದರ ರೇವಣ್ಣ… ಹೀಗೆ ನಮ್ಮೆಲ್ಲರಿಗೂ ಮನೆಯ ಹೊರಗೆ ಒಂದು ಸ್ಥಾನಮಾನವನ್ನು ಜನ ದಯಪಾಲಿಸಿದ್ದಾರೆ. ನಮ್ಮೆಲ್ಲರ ಹೊರ ಮುಖಗಳನ್ನೂ ಜನ ಕಂಡಿದ್ದಾರೆ. ಆದರೆ ಮನೆಯ ಒಳಗೆ ನಾವ್ಯಾರೂ ಅಧಿಕಾರಸ್ಥರಾಗಿರುವುದಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ತಾಯಿಯೇ. ಹೊರ ಜಗತ್ತಿಗೆ ನಾನೇನಾದರೂ ಸರಿ, ಮನೆಯಲ್ಲಿ ಅವರ ಮಗನೇ. ಅದೇ ಸಲುಗೆ, ಅದೇ ವಿಶ್ವಾಸ, ಅದೇ ಮಮತೆ. ಹೊರಜಗತ್ತಿನಲ್ಲಿ ನಾನು ಹೇಗಿರಬೇಕು? ಜನರೊಂದಿಗೆ ಹೇಗೆ ಬೆರೆಯಬೇಕು? ಅವರ ಒಳಿತು ಸಾಧಿಸಲು ಯಾವ ದಾರಿ ತುಳಿಯಬೇಕು? ಅಂತಃಕರಣ, ಮಾನವೀಯ ಪ್ರೀತಿಯನ್ನು ಹೇಗೆ ರೂಢಿಸಿಕೊಳ್ಳಬೇಕು ಎನ್ನುವ ಸಂಸ್ಕೃತಿಯನ್ನು ನನ್ನ ಮನದಲ್ಲಿ ಬಿತ್ತಿದ ಶಿಕ್ಷಕಿ ಆಕೆ. ನಿಜ, ಆಕೆಯೂ ಎಲ್ಲ ಹೆಂಗಸರಂತೆ ದೇವರ ಪೂಜೆ ಮಾಡುತ್ತಾರೆ. ಹರಕೆ ಹೊರುತ್ತಾರೆ, ಸಂಸಾರದ ನೊಗವನ್ನು ನಗೆ ಮೊಗದಿಂದಲೇ ಹೆಗಲ ಮೇಲೆ ಹೊತ್ತು ಮುಂದೆ ಸಾಗುತ್ತಾರೆ. ಆದರೆ ಈ ಎಲ್ಲ ಕೆಲಸಗಳ ಹಿಂದೆ ಆಕೆಯದೊಂದು ನಿಷ್ಕಲ್ಮಷ, ನಿಸ್ವಾರ್ಥ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಅದು ತನ್ನ ನೋವನ್ನೆಲ್ಲ ಬದಿಗಿರಿಸಿ ಕುಟುಂಬದವರ ಏಳ್ಗೆ ಬಯಸುವ ಅಪೂರ್ವ ತ್ಯಾಗದ ಹೊಳಹು ಉಳ್ಳ ಮನಸ್ಸು. ನಾನು ರೈತರ ಕಷ್ಟಕ್ಕೆ ಮರುಗಿದ್ದರೆ, ಅಂಗವಿಕಲರಿಗೆ ಉದ್ಯೋಗ ನೀಡಿ

ಅವರ ಬಾಳಿಗೊಂದು ದಾರಿಯಾದೆ ಎನ್ನುವ ನೆಮ್ಮದಿಯನ್ನು ಪಡೆದಿದ್ದರೆ, ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ನೆರವು ನೀಡಿ ಅವರು ನೀಡಿದ ತುಂಬು ಮನದ ಆರ್ಶೀವಾದದ ಸವಿಯನ್ನು ಸವಿದಿರುವೆನಾದರೆ, ನನ್ನ ಯುವ ಮಿತ್ರರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ರೂಪಿಸುವಲ್ಲಿ ಧನ್ಯಭಾವ ಅನುಭವಿಸಿದ್ದರೆ, ನನ್ನ ಭೇಟಿಗೆ ಬರುವ ಅಸಂಖ್ಯ ಅಕ್ಕ ತಂಗಿಯರ ಕಣ್ಣೀರೊರೆಸುವ ಅಲ್ಪ ಕೆಲಸವನ್ನಾದರೂ ಮಾಡಿದ್ದೇನೆ ಎಂಬ ತೃಪ್ತ ಭಾವದಿಂದ ನಿದ್ರಿಸಿದ್ದೇನಾದರೆ, ಅದಕ್ಕೆ ನನ್ನ ಜೀವನಪೂರ್ತಿ ನಾನು ಅನುಭವಿಸಿದ ತಾಯ ಹೃದಯದ ಪ್ರೀತಿ ಕಾರಣ. ಆಕೆ ನೀಡಿದ ಮಾರ್ಗದರ್ಶನ ಕಾರಣ. ಇತರರ ಕಷ್ಟಕಾರ್ಪಣ್ಯಕ್ಕೆ ಕಣ್ಣೀರಾಗುವ ಭಾವಜೀವಿ ನಾನಾಗಿದ್ದರೆ, ಅದಕ್ಕೆ ಕಾರಣ ನಮ್ಮ ತಾಯಿ. ಎಲ್ಲ ತಾಯಿಯರಿಗೂ ಮಗನಾಗುವ, ಎಲ್ಲ ಅಕ್ಕತಂಗಿಯರಿಗೂ ಅಣ್ಣ-ತಮ್ಮ ನಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ನಾನು ಬೆಳೆಯುವಂತೆ ಮಾಡಿದ ಆ ಧನ್ಯ ಜೀವಕ್ಕೆ ನನ್ನ ಗೌರವಪೂರ್ವಕ ನಮನಗಳು.

| ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ನನ್ನಮ್ಮ ತುಂಬಾ ಪ್ರೊಟೆಕ್ಟಿವ್!

ನಾನು ಒಬ್ಬಳೇ ಮಗಳು. ಅದಕ್ಕಾಗಿ ಚಿಕ್ಕಂದಿನಿಂದಲೂ ನನ್ನನ್ನು ಕಂಡರೆ ಅಪ್ಪ, ಅಮ್ಮನಿಗೆ ಹೆಚ್ಚೇ ಪ್ರೀತಿ. ಐದು ವರ್ಷಗಳ ಹಿಂದೆ ಅಪ್ಪ ತೀರಿ ಹೋದ ಮೇಲಂತೂ ನನ್ನ ಅಮ್ಮ ತುಂಬಾ ಪ್ರೊಟೆಕ್ಟಿವ್ ಆಗಿದ್ದಾರೆ. ನನಗೆ ಯಾರಾದರೂ ತೊಂದರೆ ಕೊಟ್ಟರೂ ಸಹಿಸಿಕೊಳ್ಳುವುದಿಲ್ಲ. ಹೊರಗೆ ಹೋಗುವುದು ನನಗೂ ಇಷ್ಟ ಇಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕೆಲವೇ ಕೆಲವು ಫ್ರೆಂಡ್ಸ್ ಬಿಟ್ಟರೆ ಹೆಚ್ಚು ಜನರ ಜತೆ ಬೆರೆಯುವುದು ನನಗೂ ಇಷ್ಟ ಆಗುವುದಿಲ್ಲ. ಹಾಗಾಗಿ ಅಮ್ಮನೇ ನನಗೆ ಪ್ರಪಂಚ. ‘ಮಗಳಿಗೆ ಸಿನಿಮಾ, ನಟನೆ ಎಲ್ಲಾ ಯಾಕೆ, ಮದುವೆ ಮಾಡಿಬಿಡಿ’ ಎಂದು ಅಕ್ಕಪಕ್ಕದವರೆಲ್ಲಾ ಅಮ್ಮನಿಗೆ ಹೇಳುವುದುಂಟು. ಆದರೆ ಅದಕ್ಕೆಲ್ಲ ಅವಳು ಕೇರ್ ಮಾಡುವುದಿಲ್ಲ. ಸಿನಿಮಾದ ಬಗೆಗಿನ ಜನರ ಮೈಂಡ್​ಸೆಟ್ ಬದಲಾಗಬೇಕಿದೆ. ಪ್ರತಿಯೊಂದು ಶೂಟಿಂಗ್​ಗೂ ಅಮ್ಮನನ್ನು ನಾನು ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಡೆಯುವ ಪ್ರತಿಯೊಂದು ಶಾಟ್​ಗಳ ಸತ್ಯಾಸತ್ಯತೆ ನನ್ನಮ್ಮನಿಗೆ ತಿಳಿದಿರುವ ಕಾರಣ, ಅವರಿಗೆ ನನ್ನ ನಟನೆಯ ಬಗ್ಗೆ ಯಾವುದೇ ರೀತಿಯ ಬೇಸರವಿಲ್ಲ. ಅವರಿಗೆ ನನ್ನ ಪ್ರತಿಯೊಂದು ನಡವಳಿಕೆಯೂ ಗೊತ್ತಿದೆ. ಅವರನ್ನು ಬಿಟ್ಟು ನನ್ನನ್ನು ಇಷ್ಟು ಅರ್ಥ ಮಾಡಿಕೊಳ್ಳುವ ಬೇರೆ ಯಾವ ಬೆಸ್ಟ್ ಫ್ರೆಂಡೂ ನನಗೆ ಅಗತ್ಯವೇ ಇಲ್ಲ.

| ಮಾನ್ವಿತಾ ಹರೀಶ್, ನಟಿ

ಆದರ್ಶಮಯ ತಾಯಿ

ಇಂದು ನಾನು ಈ ಮಟ್ಟಿನ ಹೆಸರನ್ನು ಮಾಡಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನಮ್ಮ. ನನ್ನನ್ನಷ್ಟೇ ಅಲ್ಲ, ನನ್ನ ಅಪ್ಪ ಕೆರೆಮನೆ ಶಂಭು ಹೆಗಡೆ ಅವರು ದೇಶ-ವಿದೇಶಗಳಲ್ಲಿ ಖ್ಯಾತರಾಗಿದ್ದಾರೆ ಎಂದರೆ ಅದರ ಹಿಂದಿರುವ ಶಕ್ತಿಯೂ ನನ್ನ ಅಮ್ಮನೇ. ನಮ್ಮ ಯಕ್ಷಗಾನ ಇಡಗುಂಜಿ ಮೇಳದ ಬೆನ್ನೆಲುಬು ಆಕೆ. ಮನೆಯಲ್ಲಿ ಬಡತನವಿದ್ದ ದಿನಗಳವು. ಮೈತುಂಬಾ ಸಾಲವಾಗಿತ್ತು. ಅದಕ್ಕಾಗಿ ನಾನು ಒಳ್ಳೆಯ ಉದ್ಯೋಗ ಮಾಡಿಕೊಂಡು ಕುಟುಂಬದ ಆಧಾರವಾಗಿರಲಿ ಎಂದುಕೊಂಡಿದ್ದರು ಅಪ್ಪ. ಆದರೆ ತಲೆತಲಾಂತರಗಳಿಂದ ನಡೆದುಬಂದಿರುವ ಯಕ್ಷಗಾನ ಕಲೆಯನ್ನು ಅರ್ಧಕ್ಕೆ ನಿಲ್ಲಿಸಬಾರದು, ಅದನ್ನು ಮುಂದಿನ ಪೀಳಿಗೆಗೂ ದಾಟಿಸಬೇಕು ಎನ್ನುವುದು ಅಮ್ಮನ ಹೆಬ್ಬಯಕೆ. ಅದಕ್ಕಾಗಿ ನನ್ನನ್ನೂ ಯಕ್ಷಗಾನದಲ್ಲಿಯೇ ಮುಂದುವರಿಸುವ ಪಣತೊಟ್ಟಳು. ಸಾಲ ಹೆಚ್ಚಾಗಿ ಬ್ಯಾಂಕಿನವರು ಮನೆಬಾಗಿಲಿಗೆ ಬಂದರೂ ಜಗ್ಗಲಿಲ್ಲ ಅವಳು. ರಾತ್ರಿ- ಹಗಲು ಎನ್ನದೇ ತಂಡೋಪತಂಡವಾಗಿ ಕಲಾವಿದರು ನಮ್ಮ ಮನೆಗೆ ಬರುತ್ತಿದ್ದರು. ಆಗಲೂ ಅಮ್ಮ ಬೇಸರಿಸಿಕೊಳ್ಳುತ್ತಿರಲಿಲ್ಲ. ಎಲ್ಲರನ್ನೂ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದಳು. ಮನೆಯಲ್ಲಿದ್ದ 10-15 ಹಸುಗಳನ್ನು ನೋಡಿಕೊಂಡು, ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸಿ, ಮನೆಯಲ್ಲಿನ ಬೆಟ್ಟದಷ್ಟು ಸಮಸ್ಯೆಗಳಿಗೆ ಒಂದಿನಿತೂ ಕುಗ್ಗದೇ ಕೆಲಸ ಮಾಡುತ್ತಿದ್ದ ಆಕೆ ನಮಗೆಲ್ಲಾ ಆದರ್ಶ.

| ಕೆರೆಮನೆ ಶಿವಾನಂದ ಹೆಗಡೆ, ಯಕ್ಷಗಾನ ಕಲಾವಿದ

ಅಮ್ಮ ಅಂದ್ರೆ ಆಲ್ ಇನ್ ಒನ್!

ನನ್ನಮ್ಮ ನನಗೆ ಅಮ್ಮ ಮಾತ್ರವಲ್ಲ, ನನ್ನ ನೃತ್ಯ ಗುರು, ಗೈಡ್, ಬೆಸ್ಟ್ ಫ್ರೆಂಡ್ ಎಲ್ಲವೂ. ಅದಕ್ಕೇ ಅವರು ನನಗೆ ಆಲ್ ಇನ್ ಒನ್. ಹೆಚ್ಚಾಗಿ ಅಮ್ಮ- ಮಕ್ಕಳ ಮಧ್ಯೆ ಜನರೇಷನ್ ಗ್ಯಾಪ್ ಇರತ್ತೆ. ಮಕ್ಕಳು ತಮ್ಮ ತೀರಾ ಪರ್ಸನಲ್ ಸಮಸ್ಯೆಗಳನ್ನು ಇದೇ ಕಾರಣಕ್ಕೆ ಅಪ್ಪ- ಅಮ್ಮನಿಗೆ ಹೇಳಿಕೊಳ್ಳುವುದಿಲ್ಲ. ಆದರೆ ನನ್ನಮ್ಮ ಹಾಗಲ್ಲ. ಫ್ರೆಂಡ್ ಥರಾ ಇದ್ದಾರೆ. ನಾನು ಎಂಥದ್ದೇ ಸಮಸ್ಯೆ ಇದ್ದರೂ ಅದನ್ನು ನನ್ನ ಫ್ರೆಂಡ್ಸ್ ಬದಲು ಅಮ್ಮನ ಬಳಿಯೇ ಹೇಳಿಕೊಳ್ಳುತ್ತೇನೆ. ನನ್ನ ಎಲ್ಲಾ ಸಮಸ್ಯೆಗಳಿಗೂ ಅವರ ಬಳಿ ಉತ್ತರ ಇದೆ. ಮೂವಿಗೆ ಹೋಗುವುದು, ತಿರುಗಾಟ, ಟೂರ್… ಏನೇ ಇದ್ದರೂ ನನ್ನ ಕ್ಲೋಸ್ ಫ್ರೆಂಡ್ ಥರಾ ಜತೆಗೆ ಅಮ್ಮ ಬರ್ತಾರೆ. ನಾವಿಬ್ಬರೂ ಒಟ್ಟಿಗೆ ಇದ್ದರೆ ಎಲ್ಲರೂ ನಮ್ಮನ್ನು ಅಮ್ಮ-ಮಗಳು ಅಂದುಕೊಳ್ಳುವುದೇ ಇಲ್ಲ. ಫ್ರೆಂಡ್ಸ್ ಅಂದುಕೊಳ್ತಾರೆ. ಅಮ್ಮನ ಅಮ್ಮ, ಅಂದ್ರೆ ಅಜ್ಜಿ ಕೂಡ ನನಗೆ ಇಷ್ಟೇ ಕ್ಲೋಸ್ ಆಗಿದ್ರು. ಅವರೀಗ ನಮ್ಮ ಜತೆ ಇಲ್ಲ. ಅವರಿಗೆ ತಮ್ಮ ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಹಾಗಾಗಿ ನಾವು ಪ್ರತಿ ವರ್ಷ ಅಮ್ಮಂದಿರ ದಿನದಂದೇ ಅಜ್ಜಿಯ ಬರ್ತ್​ಡೇ ಕೂಡ ಆಚರಿಸುತ್ತೇವೆ. ಅವರು ಸಾಯಿಬಾಬಾ ಭಕ್ತೆ ಆಗಿದ್ದರಿಂದ ಅಂದು ಬಾಬಾ ದೇವಸ್ಥಾನದಲ್ಲಿ ಅವರ ಹೆಸರಿನಲ್ಲಿ ಅನ್ನದಾನ ಮಾಡುತ್ತೇವೆ.

| ಪ್ರತೀಕ್ಷಾ ಕಾಶಿ, ಕೂಚಿಪುಡಿ ಕಲಾವಿದೆ

ಮನೆ ಬಿಡೋಣ ಅಂದಿದ್ರು!

ನನ್ನ ಅವ್ವನಿಗೆ ನಾವು ಎಂಟು ಮಂದಿ ಮಕ್ಕಳು. ನಾನೇ ಕೊನೆಯವನು. ಅದಕ್ಕೆ ಅವ್ವನಿಗೆ ನನ್ನನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಮನೆಯಲ್ಲಿ ಏನೇ ಸ್ಪೆಷಲ್ ತಿಂಡಿ, ಅಡುಗೆ ಮಾಡಿದರೂ ನನಗೇ ಹೆಚ್ಚು ಕೊಡುತ್ತಿದ್ದರು. ನಾನು ಊಟ ಮಾಡದೆ ಅವರು ಮಾಡುತ್ತಿರಲಿಲ್ಲ. ಒಮ್ಮೆ ನನ್ನಣ್ಣ ನನಗೆ ಹೊಡೆದ ಎಂದು ಸಿಟ್ಟಿನಿಂದ ‘ಬಾ ಮಗಾ, ನಾವಿಬ್ಬರೂ ಮನೆ ಬಿಟ್ಟು ಬೇರೆ ಎಲ್ಲಾದ್ರೂ ಹೋಗೋಣ’ ಎಂದು ಹೇಳಿದ್ದು ಇಂದಿಗೂ ನನ್ನ ಕಣ್ಣಮುಂದಿದೆ. ಅಂಥ ಅವ್ವ ನನ್ನ ಸ್ಪೂರ್ತಿ, ನನ್ನ ಶಕ್ತಿ, ನನ್ನ ಪಾಲಿನ ದೇವರು. ನನ್ನಲ್ಲಿ ಆತ್ಮವಿಶ್ವಾಸ, ಬದುಕುವ ಶಕ್ತಿ ನೀಡಿದ ದೇವತೆ ಅವರು. ಅವರನ್ನು ಬಿಟ್ಟರೆ ನನಗೆ ಇನ್ನೇನೂ ಇಲ್ಲ. ಯಾವತ್ತಿಗೂ ಅವ್ವ ನನ್ನನ್ನು ಬಿಟ್ಟುಕೊಟ್ಟದ್ದೇ ಇಲ್ಲ, ಸದಾ ನನ್ನ ಪರವಾಗಿಯೇ ನಿಲ್ಲುತ್ತಾರೆ. ಅವ್ವನ ಮೇಲಿನ ಇದೇ ಪ್ರೀತಿಯ ಸಲುವಾಗಿ ತಾಯಿಯ ಕುರಿತಾದ ಚಿತ್ರ ‘ಕಾಜಿ’ ತಯಾರಿಸಿದ್ದೇನೆ. ಇದನ್ನು ನಮ್ಮ ‘ಸತೀಶ್ ಆಡಿಯೋ ಹೌಸ್’ ಮೂಲಕ ಅಮ್ಮನ ದಿನವೇ ರಿಲೀಸ್ ಮಾಡುತ್ತಿದ್ದೇವೆ.

| ನೀನಾಸಂ ಸತೀಶ್, ಚಲನಚಿತ್ರ ನಟ

Leave a Reply

Your email address will not be published. Required fields are marked *