| ಮಾಳವಿಕಾ ಅವಿನಾಶ್, ನಟಿ
ತಾಯ್ತನ ಅಂದರೆ ಆ ಮಕ್ಕಳು, ಈ ಮಕ್ಕಳು ಅಂತ ವ್ಯತ್ಯಾಸ ಬರುವುದಿಲ್ಲ. ಮಕ್ಕಳ ಪೋಷಣೆ ವಿಷಯದಲ್ಲಿ ಇದು ತಂದೆ-ತಾಯಿ ಇಬ್ಬರಿಗೂ ಅನ್ವಯಿಸುತ್ತದೆ. ನಮ್ಮ ಮಕ್ಕಳು ಅಂತ ಬಂದಾಗ ಅವರ ಆರೋಗ್ಯ, ಬೆಳವಣಿಗೆ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ಸರ್ವಸ್ವವನ್ನೂ ಅರ್ಪಿಸುತ್ತೇವೆ. ಮಕ್ಕಳು ಸಾಮಾನ್ಯರೋ, ಭಿನ್ನ ಸಾಮರ್ಥ್ಯದವರೋ ಎಂಬ ಭೇದಭಾವ ತಂದೆ-ತಾಯಿಯಲ್ಲಿ ಇರುವುದಿಲ್ಲ. ಬೇರೆ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಪ್ರತಿಸ್ಪಂದನೆ ನೀಡುತ್ತಾರೆ. ಪಾಲಕರ ಕನಸುಗಳು, ಬದುಕು ಕಟ್ಟಿಕೊಳ್ಳುವುದು ಹೀಗೆ ವಿವಿಧ ಹಂತಗಳಲ್ಲಿ ಪ್ರತಿಸ್ಪಂದನೆ ಸಿಗುತ್ತದೆ. ಆದರೆ, ಭಿನ್ನ ಸಾಮರ್ಥ್ಯ ಇರುವ ಮಕ್ಕಳಿಂದ ಪ್ರತಿಸ್ಪಂದನೆ ನಮ್ಮ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಆದರೆ, ಪ್ರೀತಿಯನ್ನು ಅವರು ಅವರದೇ ಬಗೆಯಲ್ಲಿ ವ್ಯಕ್ತಪಡಿಸುತ್ತಾರೆ. ಅದಕ್ಕೆ ಯಾವುದೇ ಕೊರತೆ ಇರುವುದಿಲ್ಲ. ವಾಸ್ತವದಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರೀತಿ ತೋರುತ್ತಾರೆ. ಪಾಲಕರಿಗೆ ಮಕ್ಕಳಿಂದ ತುಂಬ ನಿರೀಕ್ಷೆಗಳು ಇರುತ್ತವೆ. ಆದರೆ, ಈ ಮಕ್ಕಳಿಂದ ಅಂಥ ನಿರೀಕ್ಷೆ ಬೇಡ. ಏಕೆಂದರೆ, ಪಾಲಕರ ಸ್ವಾರ್ಥಕ್ಕೆ ಇಂಥ ಮಕ್ಕಳು ಸೊಪ್ಪು ಹಾಕುವುದಿಲ್ಲ.

ಶಾಶ್ವತವಾದ ಮುಗ್ಧತೆ: ನನ್ನ ಮಗ ಗಾಲವ್ ಅಂತೂ ಸದಾ ನಗ್ ನಗ್ತಾ ಇರ್ತಾನೆ. ಲವಲವಿಕೆಯಿಂದ ಇರ್ತಾನೆ. ಶಾರೀರಿಕ ಬಾಧೆ ಇದ್ದಾಗ ಮಾತ್ರ ಆ ನೋವಿಗೆ ಅಳುತ್ತಾನೆ. ಸಾಮಾನ್ಯ ಎನ್ನುವ ಮಕ್ಕಳಲ್ಲಿ ಬಾಲ್ಯದ ಬಳಿಕ ಮುಗ್ಧತೆ ಹೊರಟುಹೋಗುತ್ತದೆ. ಆದರೆ, ಇಂಥ ಮಕ್ಕಳಲ್ಲಿ ಮುಗ್ಧತೆ ಸದಾ ಜೀವಂತವಾಗಿರುತ್ತದೆ, ಈ ಮುಗ್ಧತೆ ಶಾಶ್ವತವಾಗಿ ಇರುವಂಥದ್ದು. ಹಾಗಾಗಿ, ಆ ನಗು, ಮುಗ್ಧತೆ ನಮಗೆ ಒಂದುಬಗೆಯ ಶಕ್ತಿಯನ್ನು ಕೊಡುತ್ತದೆ, ನೋವುಗಳನ್ನು ಮರೆಸುತ್ತದೆ. ಹಾಗಾಗಿ, ಅಪ್ಪ-ಅಮ್ಮನಿಗೆ ಒಂದು ಬಗೆಯ ಸಾರ್ಥಕತೆ. ಅವರಲ್ಲೂ ಕೃತಜ್ಞತೆಯ ಭಾವ ಇರುತ್ತದೆ. ಅದನ್ನು ಪ್ರೀತಿಯ ಮೂಲಕ ವ್ಯಕ್ತಪಡಿಸುತ್ತಾರೆ.
ಕಷ್ಟ ಅಂತ ಏಕೆ ಭಾವಿಸುತ್ತೀರಿ?: ಅದೆಷ್ಟೋ ಪಾಲಕರಲ್ಲಿ ಇಂಥ ಮಕ್ಕಳನ್ನು ಸಲಹುವುದು ಕಷ್ಟ ಎನ್ನುವ ಭಾವನೆ ಇದೆ, ಅದು ಸರಿಯಲ್ಲ. ವಾಸ್ತವದಲ್ಲಿ ನೋಡಿದರೆ ಕಷ್ಟ ಎಲ್ಲಿಲ್ಲ? ಮಗ/ಮಗಳು ನಿರೀಕ್ಷಿತ ಅಂಕ ಗಳಿಸದಿದ್ದರೆ, ಯಶಸ್ಸು ಸಂಪಾದಿಸದಿದ್ದರೆ ಪಾಲಕರು ಬೇಜಾರಾಗುವುದುಂಟು. ಆದರೆ, ಇದಕ್ಕೆ ಕಾರಣ ಆಗಲೇ ಹೇಳಿದ ಹಾಗೆ ಪಾಲಕರ ನಿರೀಕ್ಷೆಗಳು ಅಥವಾ ಸ್ವಾರ್ಥ. ಆ ನಿರೀಕ್ಷೆ ಈಡೇರದಿದ್ದರೆ ‘ಅಯ್ಯೋ ಕಷ್ಟ’ ಎಂಬ ಭಾವನೆ. ಮೊದಲು, ಪಾಲಕರು ವಾಸ್ತವವನ್ನು ಒಪ್ಪಿಕೊಂಡು, ನಾರ್ಮಲ್ ಆಗಬೇಕು. ಎಷ್ಟು ದಿನ ಅಂತ ಅಳುತ್ತ ಕೂರಲು ಆಗುತ್ತೆ? ವಾಸ್ತವ ಒಪ್ಪಿಕೊಂಡು, ಬಂದ ಪರಿಸ್ಥಿತಿಗಳನ್ನು ಎದುರಿಸಬೇಕು. ನಾನು ಮತ್ತು ಅವಿನಾಶ್ ಒಟ್ಟಿಗೇ ಯಾವುದೇ ಮದುವೆ ಅಥವಾ ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಯಾರಾದರೂ ಒಬ್ಬರು ಸಮಾರಂಭಕ್ಕೆ ಹಾಜರಾಗಿ, ಒಬ್ಬರು ಮಗನನ್ನು ನೋಡಿಕೊಳ್ಳುತ್ತೇವೆ.
ಸಮಯ ಕೊಡಿ: ಭಿನ್ನ ಸಾಮರ್ಥ್ಯದ ಮಕ್ಕಳ ಆರೈಕೆಗೆ ಪಾಲಕರು ಹೆಚ್ಚು ಸಮಯ ನೀಡಬೇಕು. ಇದಕ್ಕಾಗಿ ಮಾನಸಿಕ ತಯಾರಿ ಮಾಡಿಕೊಳ್ಳಬೇಕು. ಯಾವುದೋ ಕಾರ್ಯಕ್ರಮ, ಔಟಿಂಗ್ ಅಥವಾ ಐಪಿಎಲ್ ಮ್ಯಾಚ್ಗೆ ಹೋಗಬೇಕು ಎಂಬಂಥ ಸ್ವಾರ್ಥಗಳನ್ನು ಬದಿಗಿರಿಸಿ ಮಗ ಅಥವಾ ಮಗಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು. ಇದನ್ನು ನಾನೇನು ತ್ಯಾಗ ಅಂತ ಕರೆಯುವುದಿಲ್ಲ. ಇದು ನಮ್ಮ ಹೊಣೆಗಾರಿಕೆ ಮತ್ತು ಇದು ನಮಗೀಗ ಅಭ್ಯಾಸವಾಗಿಬಿಟ್ಟಿದೆ. ಪಾಲನೆ-ಪೋಷಣೆಗೆ ಹೆಚ್ಚಿನ ಸಮಯ ಕೊಡಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು, ಇದನ್ನು ನಾರ್ಮಲೈಜೇಶನ್ ಮಾಡಿಕೊಳ್ಳಬೇಕು. ಕಷ್ಟ ಅಂತ ಭಾವಿಸುತ್ತ ಹೋದರೆ, ಹಾಗೇ ಕಾಣುತ್ತದೆ. ಎಲ್ಲ ಬಗೆಯ ಮಕ್ಕಳಲ್ಲಿ ಬೇರೆ ಬೇರೆ ಬಗೆಯ ಕಷ್ಟಗಳು ಇರುತ್ತವೆ. ಹಾಗಾಗಿ, ಕಷ್ಟ ಅಂತ ಭಾವಿಸಬಾರದು ಎಂಬುದು ನನ್ನ ಅನಿಸಿಕೆ. ಬೇರೆ ಆಯ್ಕೆಗಳೇ ಇಲ್ಲದಿರುವಾಗ ಸವಾಲಾಗಿ ಪರಿಗಣಿಸಿ, ಮುಂದೆ ಸಾಗಬೇಕು.
ಎಲ್ಲಕ್ಕಿಂತ ಹೆಚ್ಚು ಪ್ರೀತಿ ಕೊಡ್ತಾರೆ!
ಕಾಳಜಿಯ ಆರೈಕೆ
ಮಾಳವಿಕಾ-ಅವಿನಾಶ್ ದಂಪತಿಯ ಪುತ್ರ ಗಾಲವ್ ಬಾಲ್ಯದಲ್ಲಿ ನ್ಯುಮೋನಿಯಾದಿಂದ ಬಳಲಿ, ಶ್ವಾಸಕೋಶ ಸೋಂಕಿಗೆ ಒಳಗಾಗಿ, ಮಾತಿನ ಸಾಮರ್ಥ್ಯ ಕಳೆದುಕೊಂಡಿದ್ದಾನೆ. ಆದರೆ, ಅವನ ನಗುವಿನಲ್ಲೇ ಪಾಲಕರು ಬದುಕಿನ ನಲಿವು ಕಂಡುಕೊಂಡಿದ್ದಾರೆ. ಅಮ್ಮನ ಸುಂದರ ಪ್ರಪಂಚವೆಂದರೆ ಮಕ್ಕಳು, ಅವರ ಆರೈಕೆ ಮತ್ತು ಭವಿಷ್ಯ. ಆದರೆ, ವಿಶೇಷ ಮಕ್ಕಳನ್ನು ಬೆಳೆಸಲು ಹೆಚ್ಚಿನ ಕಾಳಜಿ ಮತ್ತು ತಾಳ್ಮೆ ಅಗತ್ಯ. ಇಂಥ ದೊಡ್ಡ ಸವಾಲಿನಲ್ಲೂ ನಮ್ಮ ತಾಯಂದಿರು ಗೆದ್ದಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಪಯಣದಲ್ಲಿ ವೈಯಕ್ತಿಕ ಕಷ್ಟಸುಖಗಳನ್ನು ಬದಿಗಿರಿಸಿದ್ದಾರೆ. ಅಂತಿಮವಾಗಿ ಮಕ್ಕಳ ಬದುಕು ರೂಪಿಸಿದ ದೊಡ್ಡ ಸಾರ್ಥಕತೆ ಮತ್ತು ಖುಷಿ ಈ ತಾಯಿಯಂದಿರದ್ದು. ಅವರ ಅನುಭವಗಳು ಇತರರಿಗೂ ಸ್ಪೂರ್ತಿ.
ಆಗೆಲ್ಲ ಕಷ್ಟಗಳು ಸಾಲು-ಸಾಲಾಗಿ ಬಂದವು. ಸೆರೆಬ್ರಲ್ ಪಾಲ್ಸಿಗೆ (ಮಿದುಳಿನ ಲಕ್ವ) ಆಗ ಈಗಿನಂತೆ ಆಧುನಿಕ ಚಿಕಿತ್ಸೆ ಇರಲಿಲ್ಲ. ಹಂತ-ಹಂತವಾಗಿ ಚಿಕಿತ್ಸೆ ನೀಡಬೇಕಾಯಿತು, ಇದಕ್ಕಾಗಿ ಊರಿಂದ ಊರಿಗೆ ಅಲೆಯಬೇಕಾಯಿತು. ಅಶ್ವಿನ್ ಕಾರ್ತಿಕ್ ಮೊದಲಿನಿಂದಲೂ ಚುರುಕು. ಆದರೆ, ಶಿಕ್ಷಣ ಕೊಡಿಸುವುದು ಸವಾಲಾಗಿತ್ತು. ಆಗ ಜನರು ಸಹಕಾರ ನೀಡುವುದು ಬಿಡಿ, ಚುಚ್ಚುಮಾತುಗಳಿಂದ ನೋಯಿಸಿದರು. ಬಾಲ್ಯದಲ್ಲಿ ಅಶ್ವಿನ್ ಕೈಗೆ ಪೆನ್ನು ನೀಡಿ ಒಂದೇಒಂದು ಗೆರೆ ಎಳೆಸಲು ಆರು ತಿಂಗಳು ಶ್ರಮಪಡಬೇಕಾಯಿತು. ಶಾಲೆಯ ತರಗತಿಯಲ್ಲಿ ಆತ ಪಾಠ ಕೇಳುತ್ತಿದ್ದರೆ ನಾನು ಹೊರಗಡೆ ಬೆಂಚಿನಲ್ಲಿ ಕೂತು ಅವನ ಬೇಕುಬೇಡಗಳಿಗೆ ಸ್ಪಂದಿಸುತ್ತಿದ್ದೆ. ಪತಿ ನಾಗರಾಜ್ ಅಕಾಲಿಕವಾಗಿ ನಿಧನರಾದಾಗ ಮತ್ತಷ್ಟು ಸಂಕಷ್ಟ. ಜೀವನದಲ್ಲಿ ಮುಂದಡಿ ಇಡಲೇ ಬೇಕಾಯಿತು.
ಅಶ್ವಿನ್ಗೆ ಉತ್ತಮ ಬದುಕು ಕಲ್ಪಿಸಬೇಕು ಎಂದು ಮನಸು ಸದಾ ಹಾತೊರೆಯುತ್ತಿತ್ತು. ಅವನ ದೇಹ ಊನವಾಗಿದ್ದರೇನು ಬುದ್ಧಿಮತ್ತೆ ಸಾಮಾನ್ಯರಿಗಿಂತಲೂ ಚೆನ್ನಾಗಿದೆ ಎಂದು ವೈದ್ಯರು ಹೇಳಿದ್ದು, ಬೆಳಕು ಕಂಡಂತಾಯಿತು. ಬೆಂಗಳೂರು, ಚೆನ್ನೈ, ದಿಲ್ಲಿ, ಚಿಕ್ಕಮಗಳೂರಿನಲ್ಲಿ ಶಿಕ್ಷಣ ಕೊಡಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಶೇಕಡ 85, ಪಿಯುಸಿಯಲ್ಲಿ ಶೇ.75 ಅಂಕ ತೆಗೆದ ಅಶ್ವಿನ್ ಓದಿನಲ್ಲಿ ಎಲ್ಲರಿಗಿಂತಲೂ ಮುಂದಿದ್ದ! ಅಶ್ವಿನ್ ಇಂಜಿನಿಯರಿಂಗ್ ಓದುವಾಗ ಗೆಳೆಯ ಭರತ್ ಶರ್ಮಾ ನೆರವಿಗೆ ಬಂದು, ಅವನ ನೆರಳಿನಂತೆ ನಿಂತ. ಇಂಜಿನಿಯರಿಂಗ್ ಮುಗಿಸಿದ ಬಳಿಕ ಕೆಲಸ ಹೇಗೆ ಮಾಡುತ್ತಾನೆ ಎಂದು ಹಲವರು ಪ್ರಶ್ನಿಸಿದರು. ಆದರೆ, ವ್ಹೀಲ್ಚೇರ್ನಲ್ಲಿ ಕುಳಿತು ಕೊಂಡೇ ಆತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾನೆ. ತೀರಾ ಅಸ್ಪಷ್ಟವಿದ್ದ ಅಶ್ವಿನ್ ಮಾತುಗಳು ಸ್ಪೀಚ್ ಥೆರೆಪಿ ಪರಿಣಾಮ ಈಗ ಬಹುತೇಕ ಸ್ಪಷ್ಟವಾಗಿವೆ. ಈ ಹಂತಕ್ಕೆ ಬರಲು ತುಂಬ ಕಷ್ಟಪಟ್ಟಿದ್ದೇವೆ. ಆಗ ನಾವು ಈ ಹೋರಾಟವನ್ನು ಅರ್ಧಕ್ಕೆ ಬಿಟ್ಟಿದ್ದರೆ ಇಂದಿನ ದಿನಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.
ತಾಯಿಯಾದವಳಿಗೆ ತಾಳ್ಮೆ, ಆತ್ಮಸ್ಥೈರ್ಯ, ಎಲ್ಲವನ್ನೂ ಎದುರಿಸುತ್ತೇನೆ ಎಂಬ ಛಲ ಮುಖ್ಯ. ಭಗವಂತ ಆ ಶಕ್ತಿಯನ್ನು ತಾಯಿಗೆ ನೀಡಿದ್ದಾನೆ. ಹಾಗಾಗಿ ಆ ಕಷ್ಟದ ದಿನಗಳನ್ನು ದಾಟಿ ಇಂದಿನ ನೆಮ್ಮದಿಯ ಕ್ಷಣಗಳನ್ನು ಕಾಣುವಂತಾಗಿದೆ. ಅಶ್ವಿನ್ ತನ್ನ ಸೃಜನಶೀಲತೆ, ಕ್ರಿಯಾಶೀಲತೆಯನ್ನು ಸಾಬೀತು ಪಡಿಸಿದ್ದಾನೆ. ಆದರೂ ಅಂಗವಿಕಲ ಎಂಬ ಒಂದೇ ಕಾರಣಕ್ಕಾಗಿ ಸಮಾಜ ಅವಕಾಶಗಳನ್ನು ನಿರಾಕರಿಸುವುದು ಸರಿಯಲ್ಲ. ಆ ದಿನಗಳು, ಹೋರಾಟದ ಪಯಣ ನೆನಪಿಸಿಕೊಂಡರೆ ಆಶ್ಚರ್ಯ ಎನಿಸುತ್ತದೆ. ಹೌದು, ತಾಯಿಯಾದವಳು ಸೋಲಬಾರದು. ಭಗವಂತ ನಾಲ್ಕು ದಾರಿಗಳನ್ನು ಮುಚ್ಚಿದರೆ, ಮತ್ತೊಂದು ದಾರಿ ತೋರಿಸುತ್ತಾನೆ ಎಂಬ ನಂಬಿಕೆ ಬೇಕು. ಮೊದಲು, ಮಕ್ಕಳಲ್ಲಿ ಇರುವ ಸಾಮರ್ಥ್ಯವನ್ನು ಗ್ರಹಿಸಿ, ಅದನ್ನು ಪ್ರೋತ್ಸಾಹಿಸಬೇಕು. ಎಷ್ಟೋ ಪಾಲಕರು ಮಕ್ಕಳ ಕೊರತೆಗಳ ಬಗ್ಗೆಯೇ ಮಾತನಾಡುವುದರಿಂದ ಮಕ್ಕಳ ಮನಸ್ಸು ಮುದುಡಿ ಹೋಗುತ್ತದೆ. ಸಾಮರ್ಥ್ಯವನ್ನು ಅರಿತು ಪ್ರೋತ್ಸಾಹಿಸೋಣ. ಅಶ್ವಿನ್ ಸಾಧನೆ ನಿಜಕ್ಕೂ ಸಾರ್ಥಕತೆ ಮೂಡಿಸಿದೆ.
ಸಾರ್ಥಕತೆ ನೆಲೆಸಿದೆ
| ಪ್ರಭಾ ನಾಗರಾಜ್, ವೆಲ್ನೆಸ್ ಕೋಚ್
ಸವಾಲು ಗೆದ್ದರು
ಸೆರೆಬ್ರಲ್ ಪಾಲ್ಸಿ ಕಾಯಿಲೆ ಹೊಂದಿಯೂ ಕಂಪ್ಯೂಟರ್ ಇಂಜಿನಿಯರಿಂಗ್ ಓದಿದ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಳೆದ 17 ವರ್ಷಗಳಿಂದ ಕೆಲಸ ಮಾಡುತ್ತಿರುವ ದೇಶದ ಏಕೈಕ ವ್ಯಕ್ತಿಯೆಂದರೆ ನಮ್ಮ ಬೆಂಗಳೂರಿನ ಪ್ರತಿಭೆ ಅಶ್ವಿನ್ ಕಾರ್ತಿಕ್. ಅಶ್ವಿನ್ ಲೇಖಕರೂ ಹೌದು. ಆದರೆ, ಇವರು ಈ ಹಂತಕ್ಕೆ ಏರಬೇಕಾದರೆ ತಾಯಿ ಪ್ರಭಾ ನಾಗರಾಜ್ ಅವರ ಪರಿಶ್ರಮ, ಸತತ ಪ್ರಯತ್ನ ಹಾಗೂ ಎಂದೂ ಸೋಲು ಒಪ್ಪಿಕೊಳ್ಳದ ಛಲ ಮುಖ್ಯ ಪಾತ್ರ ವಹಿಸಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಶ್ವಿನ್ ಅವರ ಸಾಧನೆ ಕಂಡು, ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
100 ಗಂಟೆ ಸಂಘರ್ಷದಲ್ಲಿ ಭಾರತ ವಿರುದ್ಧ ಪಾಕ್ ಕಟ್ಟಿದ 7 ದೊಡ್ಡ ಸುಳ್ಳುಗಳಿವು | Pak Lies
ಮೃಣಾಲ್ ಠಾಕೂರ್-ಸುಮಂತ್ ಮದುವೆ ವಿಚಾರ; ಕಡೆಗೂ ಮೌನ ಮುರಿದ ‘ಸೀತಾ ಮಹಾಲಕ್ಷ್ಮೀ’ ಆಪ್ತ | Mrunal Thakur