ಬಾಳೆಹೊಳೆ ಮುಳುಗು ತಜ್ಞಗೆ ಸಿಗದ ಮುನ್ನಣೆ

ಬಾಳೆಹೊನ್ನೂರು: ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತನ್ನು ಸತ್ಯ ಮಾಡಿದವರು ಮೂಡಿಗೆರೆ ತಾಲೂಕಿನ ಬಾಳೆಹೊಳೆ ತಲಗೋಡಿನ ಭಾಸ್ಕರ್. ತಾಯಿಯಿಂದ ಎಂಟನೇ ವಯಸ್ಸಿನಲ್ಲಿ ಕಲಿತ ಈಜು ಮುಂದೊಂದು ದಿನ ಸಮಾಜ ಸೇವೆಗೆ ಅರ್ಪಣೆಯಾಗುತ್ತದೆ ಎಂದು ಇವರು ಭಾವಿಸಿರಲಿಲ್ಲ. ಅಂದು ತಾಯಿಯಿಂದ ಕಲಿತ ಈಜು ಇಂದು ಇವರನ್ನು ಜಲಸಾಹಸಿಯಾಗಿ ಮಾಡಿದೆ.

ಬಡ ಕುಟುಂಬದಲ್ಲಿ ಜನಿಸಿದ ಭಾಸ್ಕರ್ ಐದನೇ ತರಗತಿ ವ್ಯಾಸಂಗ ಮಾಡಿದ್ದಾರೆ. ತನ್ನ ತಾಯಿ ಶ್ರೀಯಾಲಿ (ಸುಶೀಲಾ) ಅವರಿಂದ ಹವ್ಯಾಸಕ್ಕಾಗಿ ಕಲಿತ ಈಜಿನಿಂದ ಇಂದು ನೂರಾರು ಜನರಿಗೆ ಉಪಯೋಗವಾಗುತ್ತಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಇವರು ಬಾಲ್ಯದಲ್ಲಿ ತಾಯಿ ಸಲಹೆಯಂತೆ ಈಜು ಕಲಿತರು. 16-17 ವರ್ಷದವರಿದ್ದಾಗಲೇ ನೀರಿನೊಳಗೆ ಮುಳುಗಿ ನದಿಯ ಆಳ ಅಳೆಯುತ್ತಿದ್ದರು.

ನದಿಗೆ ಇಳಿಯುವ ಮುನ್ನ ಒಮ್ಮೆ ಗಂಗಾ ತಾಯಿಗೆ ನಮಿಸುತ್ತಾರೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ಇವರನ್ನು ಗುರುತಿಸುವವರ ಸಂಖ್ಯೆ ಕಡಿಮೆ. ಈವರೆಗೆ ವಿವಿಧೆಡೆ ನದಿಯಲ್ಲಿ ಮುಳುಗಿ ಮೃತಪಟ್ಟ 66 ಶವಗಳನ್ನು ಮೇಲೆತ್ತಿ ಮಾನವೀಯತೆ ಮೆರೆದಿದ್ದಾರೆ. ಒಮ್ಮೆ ಬಂಟ್ವಾಳ ಸಮೀಪದ ಗುರುಪುರ ಗ್ರಾಮಕ್ಕೆ ತೆರಳಿದಾಗ ಅಲ್ಲಿ ಯುವಕನೊಬ್ಬ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ. ಯುವಕನ ಶವ ಮೇಲೆತ್ತಲು ಕುಂದಾಪುರದ ಭಾಸ್ಕರ್ ಮುಂದಾಗಿದ್ದರು. ಮೊದಲೇ ಈಜು ಗೊತ್ತಿದ್ದ ಬಾಳೆಹೊಳೆ ಭಾಸ್ಕರ್ ನದಿಯಲ್ಲಿ ಮುಳುಗಿ ಶವ ಶೋಧಿಸಿ ಮೇಲೆತ್ತಲು ಕೈಜೋಡಿಸಿದರು.

ಜಿಲ್ಲೆಯಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಮೃತಪಟ್ಟರೆ ಶವ ಮೇಲೆತ್ತಲು ನೆನಪಿಗೆ ಬರುವುದೇ ಈ ಭಾಸ್ಕರ್. ಭೋರ್ಗರೆಯುವ ನದಿ, ಹಳ್ಳಗಳಿದ್ದರೂ ಶವಗಳನ್ನು ಮೇಲೆತ್ತುವ ಇವರು, ಜಿಲ್ಲೆ ಮಾತ್ರವಲ್ಲದೇ ಹಾಸನ, ಬೇಲೂರು, ಸಕಲೇಶಪುರ, ಮಂಗಳೂರು ಮುಂತಾದೆಡೆಯೂ ಶವಗಳನ್ನು ಮೇಲೆತ್ತಿದ್ದಾರೆ.

ಭಾಸ್ಕರ್​ಗೆ ಬಾಳೆಹೊಳೆಯ ತಲಗೋಡಿನ ಅರುಣ್ ಮತ್ತು ಶ್ರೀಕಾಂತ್ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶವ ಎತ್ತಲು ಹೋದಾಗ ಯಾರಾದರು ಹಣ ನೀಡಿದರೆ ಕೂಲಿ ಎಂದಷ್ಟೇ ಪಡೆಯುತ್ತೇನೆ ಹೊರತು ಇಂತಿಷ್ಟೇ ಹಣ ನೀಡಿ ಎಂಬ ಬೇಡಿಕೆ ಇಡುವುದಿಲ್ಲ. ಅಗತ್ಯ ಸಂದರ್ಭಗಳಲ್ಲಿ ನನ್ನ ದೂರವಾಣಿ ಸಂಖ್ಯೆ 9480654757ಗೆ ಸಂಪರ್ಕಿಸಬಹುದು ಎನ್ನುತ್ತಾರೆ ಭಾಸ್ಕರ್.

ದೊರೆಯದ ಪ್ರೋತ್ಸಾಹ: ಭಾಸ್ಕರ್ ಇದೂವರೆಗೆ 66 ಶವಗಳನ್ನು ನೀರಿನಿಂದ ಮೇಲೆತ್ತಿದರೂ ಇವರ ಬಳಿ ಯಾವುದೇ ಅಗತ್ಯ ರಕ್ಷಣಾ ಸಾಮಗ್ರಿಗಳಿಲ್ಲ. ಕೇವಲ ಸಹಾಯಕರಿಂದ ಹಗ್ಗಕಟ್ಟಿಸಿಕೊಂಡು ನದಿಗಿಳಿಯುವ ಇವರು ತಮ್ಮ ಜೀವದ ಹಂಗು ತೊರೆದು ಬೇರೆಯವರ ಶವ ಹುಡುಕುವ ಕಾರ್ಯ ಮಾಡುತ್ತಿದ್ದಾರೆ. ಆದರೂ ಈ ಕಾರ್ಯಕ್ಕೆ ಯಾರೂ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ.

ಜಲ ರಕ್ಷಣಾ ಸಾಮಗ್ರಿಗೆ ಮನವಿ: ನಾನು ಹಿಂದಿನಂತೆ ಬಹಳ ಹೊತ್ತು ನೀರಿನಲ್ಲಿ ಮುಳುಗಿರುವುದು ಈಗ ಅಸಾಧ್ಯ. ಆಕಸ್ಮಿಕವಾಗಿ ಯಾವುದಾದರೂ ಅವಘಡಗಳು ಸಂಭವಿಸಿದರೆ ಹೋಗುವುದು ಅನಿವಾರ್ಯ. ನೀರಿನಲ್ಲಿ ಮುಳುಗಿದಾಗ ದೊಡ್ಡ ಬಂಡೆಗಳು, ಹಾವು, ಮೊಸಳೆಗಳು ಎದುರಾಗುತ್ತವೆ. ಉಸಿರಾಟದ ಸಮಸ್ಯೆ ಉದ್ಭವಿಸುತ್ತದೆ. ಜಿಲ್ಲಾಡಳಿತ ನನಗೆ ಲೈಫ್ ಜಾಕೆಟ್, ಆಕ್ಸಿಜನ್ ಸಿಲಿಂಡರ್, ಬೋಟ್ ಮತ್ತಿತರ ವಸ್ತುಗಳನ್ನು ನೀಡಿದರೆ ನೀರಿನಲ್ಲಿ ಶವಗಳನ್ನು ಮೇಲೆತ್ತಲು ಅನುಕೂಲವಾಗಲಿದೆ ಎನ್ನುತ್ತಾರೆ ಭಾಸ್ಕರ್.