ಮಗನ ಜೀವ ಉಳಿಸಲು ಕಿಡ್ನಿಯನ್ನೇ ನೀಡಲು ಮುಂದಾದಳು ತಾಯಿ

ಬೆಳಗಾವಿ: ಹೆತ್ತ ಮಕ್ಕಳಿಗೆ ಕೈತುತ್ತು ಕೊಟ್ಟು ಬೆಳೆಸುವ ತಾಯಂದಿರನ್ನು ನೋಡಿದ್ದೇವೆ. ಇಲ್ಲೋರ್ವ ತಾಯಿ ತನ್ನ ಕಿಡ್ನಿಯನ್ನೆ ಕೊಟ್ಟು ಮಗನನ್ನು ಬದುಕಿಸಿಕೊಳ್ಳಲು ಅಂಗಲಾಚುತ್ತಿರುವುದು ಮನಕಲುಕುವಂತಿದೆ. ಮಗ ಹುಟ್ಟಿದ ಮೂರೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ತಾಯಿ, ಕಷ್ಟಪಟ್ಟು ಕೂಲಿನಾಲಿ ಮಾಡಿ ಮಗನನ್ನು ಬೆಳೆಸಿದ್ದಾಳೆ. ಬಿಎ ಪದವಿ ಪಡೆದಿರುವ ಮಗ ಇನ್ನೇನು ಉದ್ಯೋಗ ಪಡೆದು ಕುಟುಂಬದ ಜವಾಬ್ದಾರಿ ಹೊರುತ್ತಾನೆ ಎನ್ನುವಷ್ಟರಲ್ಲಿ ವಿಧಿಯಾಟದಿಂದ ಮಗ ಇದೀಗ ಸಾವಿನ ದವಡೆಗೆ ಸಿಲುಕಿದ್ದು, ಆ ತಾಯಿ ಮಗನನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಪಡುತ್ತಿದ್ದಾಳೆ.

ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ನಿವಾಸಿ ಲಲಿತಾ ಕಾಂಬಳೆ ಎಂಬುವರೇ ಕಿಡ್ನಿ ಕೊಟ್ಟು ಮಗನಿಗೆ ಮತ್ತೊಮ್ಮೆ ಜನ್ಮ ನೀಡಲು ಮುಂದಾಗಿರುವ ಮಹಾತಾಯಿ. ಮನೆಯಲ್ಲಿನ ಕಿತ್ತುತಿನ್ನುವ ಬಡತನದ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿದ ತಾಯಿ ಲಿಲಿತಾ, ತಮ್ಮ ಜೀವವನ್ನೇ ಪಣಕ್ಕಿಟ್ಟು ಮಗನ ಭವಿಷ್ಯ ಎದುರು ನೋಡುತ್ತಿದ್ದಾರೆ.

ಲಿಲಿತಮ್ಮನವರ ಹಿರಿಯ ಮಗ 29ನೇ ವರ್ಷದ ಬಬ್ರುವಾಹನ ಕಾಂಬಳೆ ಕಿಡ್ನಿ ಕಳೆದುಕೊಂಡಿರುವ ನತದೃಷ್ಟ ಯುವಕ. ಕಿರಿಯ ಮಗ ಇದೀಗ ವ್ಯಾಸಂಗ ನಿಲ್ಲಿಸಿ ಸಹೋದರನ ವೈದ್ಯಕೀಯ ವೆಚ್ಚ ಹಾಗೂ ಕುಟುಂಬ ನಿರ್ವಹಣೆಗಾಗಿ ತಾಯಿಯೊಂದಿಗೆ ದುಡಿಯುತ್ತಿದ್ದಾನೆ.

ತನ್ನ ಕಿಡ್ನಿ ಕೊಟ್ಟರೆ ಮಗ ಬದುಕುಳಿಯುತ್ತಾನೆ ಎಂಬ ಮಹದಾಸೆಯಿಂದ ಲಲಿತಮ್ಮ ಕಿಡ್ನಿ ನೀಡಲು ಮುಂದಾಗಿದ್ದಾರೆ. ಆದರೆ, ಬೆಂಗಳೂರಿಗೆ ತೆರಳಿ ಅವರದೆ ಕಿಡ್ನಿ ಕಸಿಮಾಡಿಸಬೇಕಾದರೂ 5 ರಿಂದ 6 ಲಕ್ಷ ರೂ. ಚಿಕಿತ್ಸೆಗೆ ಖರ್ಚಾಗಲಿದೆ ಎಂಬುದು ದಿಕ್ಕು ತೋಚದಂತೆ ಮಾಡಿದೆ.

ಪ್ರತಿ ಎರಡು ದಿನಕ್ಕೊಮ್ಮೆ ನೀಡುವ ಡಯಾಲಿಸಸ್ ವೆಚ್ಚಕ್ಕಾಗಿ ಈಗಾಗಲೇ ಕುಟುಂಬ 1.50 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದು, ಏನಾದರೂ ಮಾರಾಟ ಮಾಡಿ ಮಗನನ್ನು ಉಳಿಸಿಕೊಳ್ಳೋಣ ಎಂದರೆ ಹೊಲ, ಜಾಗ, ಮನೆ ಯಾವುದೂ ಇಲ್ಲ. ಒಂದೊತ್ತಿನ ಊಟವೇ ನಮಗೆ ಹೊರೆಯಾಗಿರುವಾಗ ಮಗನ ಚಿಕಿತ್ಸೆಗಾಗಿ ಅಷ್ಟೋಂದು ಹಣ ಎಲ್ಲಿಂದ ತರಲಿ ಎಂಬುದು ತಾಯಿಯ ಚಿಂತೆಯಾಗಿದೆ. ದಿನದಿಂದ ದಿನ ನಾವು ಬದುಕು ಸಾಗಿಸುವುದು ದುಸ್ಥರವಾಗುತ್ತಿದೆ. ಕೈಲಾದವರು ಸಹಾಯ ಮಾಡಿ ಎನ್ನುತ್ತಾರೆ ತಾಯಿ ಲಲಿತಮ್ಮ.

ಕಿಡ್ನಿ ಬಲಿಪಡೆದ ಹಗಲು-ರಾತ್ರಿ ದುಡಿಮೆ

ಕಡುಬಡತನದಲ್ಲಿಯೆ ಹುಟ್ಟಿ ಬೆಳೆದ ಬಬ್ರುವಾಹನ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಾ ಬೆಳಗಾವಿಯ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದುಕೊಂಡಿದ್ದಾನೆ. ಆದರೆ, ದುರಂತವೆಂದರೆ ಹಗಲು-ರಾತ್ರಿ ಕೆಲಸ ಮಾಡುವುದರ ಜತೆಗೆ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ದೊರೆಯದ ಕಾರಣ ಬಬ್ರುವಾಹನ ತನ್ನ ಕಿಡ್ನಿಯನ್ನೆ ಕಳೆದುಕೊಂಡಿದ್ದಾನೆ. ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳನ್ನು ಕಟ್ಟಿ ಓದುತ್ತಿದ್ದಾನೆ. ಆದರೆ, ಮೂತ್ರಪಿಂಡ ಹಾನಿಗೀಡಾಗಿರುವುದರಿಂದ ಇತ್ತೀಚೆಗೆ ನಾಲ್ಕುತಿಂಗಳಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾಶ್ವತ ಪರಿಹಾರವೆಂದರೆ ಮೂತ್ರಪಿಂಡ ಕಸಿ ಮಾಡಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಬೇಕಿದೆ ನೆರವಿನ ಹಸ್ತ: ತಾಯಿ ಕಿಡ್ನಿ ನೀಡಿದರೂ ಮಗನನ್ನು ಬದುಕಿಸಿಕೊಳ್ಳಲು ಈ ಕುಟುಂಬಕ್ಕೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ. ದಾನಿಗಳು ಮುಂದೆ ಬಂದು ಧನಸಹಾಯ ಮಾಡುವ ಮೂಲಕ ಬಡ ಯುವಕನ ಜೀವ ಉಳಿಸಬೇಕಿದೆ. ಧನಸಹಾಯ ಮಾಡುವವರು ಈ ಕೆಳಗಿನ ಬ್ಯಾಂಕ್ ನಂಬರ್‌ಗೆ ಹಣ ಕಳಿಸಬಹುದು. ಬಬ್ರುವಾಹನ ಕಾಂಬಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಂಕೇಶ್ವರ ಬ್ರಾೃಂಚ್, ಖಾತೆ ಸಂಖ್ಯೆ: 343070919194. ಐಎಫ್‌ಎಸ್‌ಸಿ : ಎಸ್‌ಬಿಐಎನ್0001727. ಮೊ: 9739149326.

| ರವಿ ಗೋಸಾವಿ