ಮುದ್ದೇಬಿಹಾಳ: ವಿದ್ಯಾರ್ಥಿ ಜೀವನದಲ್ಲಿ ಕನ್ನಡ ಭಾಷೆ ಕಲಿಕೆಗೆ ಪ್ರತಿಯೊಬ್ಬರೂ ಹೆಚ್ಚಿನ ಆಸಕ್ತಿ ತೋರಿಸಬೇಕು. ಎಸ್ಸೆಸ್ಸೆಲ್ಸಿ ಸಾಧಕರು ಭವಿಷ್ಯದಲ್ಲಿ ಕನ್ನಡದಲ್ಲೇ ಉನ್ನತ ಶಿಕ್ಷಣ ಪಡೆದು ಮಾತೃಭಾಷೆಯ ಗೌರವ ಹೆಚ್ಚಿಸಬೇಕು ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.
ತಾಲೂಕು ಆಡಳಿತ ಸೌಧದ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತಿಗಳು, ಕವಿಗಳು ಭಾಷೆಯ ಮೆರುಗು ಇನ್ನಷ್ಟು ಹೆಚ್ಚುವಂತೆ ಕೊಡುಗೆ ನೀಡಲು ಶ್ರಮಿಸಬೇಕು ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆ ಗೌರವಿಸಬೇಕು. ಕನ್ನಡ ಬಳಕೆ ಕುರಿತು ಸರ್ಕಾರ ಹೊರಡಿಸಿರುವ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಚನ್ನಪ್ಪ ಕಂಠಿ, ಮಹ್ಮದರಫೀಕ ದ್ರಾಕ್ಷಿ, ಸದಾಶಿವ ಮಾಗಿ, ಶಿವು ಶಿವಪೂರ, ತಾಪಂ ಇಒ ನಿಂಗಪ್ಪ ಮಸಳಿ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ರಾಜುಗೌಡ ತುಂಬಗಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಆರ್.ಕಟ್ಟಿಮನಿ, ಬಿ.ಎಚ್.ಮುದ್ನೂರ, ಹುಸೇನ ಮುಲ್ಲಾ, ಮಂಜುನಾಥ ಕೊಪ್ಪ, ಸಂಗಯ್ಯ ಸಾರಂಗಮಠ, ಚಂದ್ರಶೇಖರ ಕಲಾಲ ಇತರರಿದ್ದರು.
ಸಾಹಿತಿಗಳಾದ ಐ.ಬಿ.ಹಿರೇಮಠ, ಡಾ.ಪ್ರಕಾಶ ನರಗುಂದ, ಶಿವಪುತ್ರ ಅಜಮನಿ, ಎಚ್.ಆರ್.ಬಾಗವಾನ (ವಿಬಿಸಿ), ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ 34 ವಿದ್ಯಾರ್ಥಿಗಳು, ಸಾರಿಗೆ ಸಂಸ್ಥೆ ಬಸ್ ಅಲಂಕರಿಸಿ ಕನ್ನಡ ಪ್ರೇಮ ಅನಾವರಣಗೊಳಿಸಿದ ಚಾಲಕರು, ನಿರ್ವಾಹಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು.
ಸ್ತಬ್ಧ ಚಿತ್ರಗಳಲ್ಲಿ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಒನಕೆ ಓಬವ್ವ ಪ್ರಥಮ, ವಿಬಿಸಿ ಪ್ರೌಢಶಾಲೆಯ ಬೀಸುವ ಕಲ್ಲಿನ ಸೊಗಡು ದ್ವಿತೀಯ, ಬಸವ ಇಂಟರ್‌ನ್ಯಾಷನಲ್ ಶಾಲೆಯ ಪುರಂದರದಾಸ ತೃತೀಯ ಸ್ಥಾನ ಪಡೆಯಿತು. ಭಾಗವಹಿಸಿದ ಶಾಲೆಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಪಟ್ಟಣದಲ್ಲಿ ಸಂಚರಿಸಿತು.
ಸಂಗಮೇಶ ಶಿವಣಗಿ ತಂಡದವರು ನಾಡಗೀತೆ ಹಾಡಿ ಸಂಗೀತ ಸೇವೆ ನೀಡಿದರು. ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಸ್ವಾಗತಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.