ಘಾಜಿಯಾಬಾದ್: ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಎಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ. ಇನ್ನು ಕೆಲವು ಕಡೆಗಳಲ್ಲಿ ಲಾಕ್ಡೌನ್ಗಿಂತ ಮೊದಲು ಮದುವೆಯಾದ ವಧು ತವರಿಗೆ ಹೋಗಿದ್ದು, ವಾಪಸ್ ಗಂಡನ ಬಳಿ ಬರಲಾರದೇ ಪೇಚಿಗೆ ಸಿಲುಕಿರುವ ಘಟ ನೆಗಳೂ ನಡೆದಿವೆ.
ಘಾಜಿಯಾಬಾದ್ನ ಸಾಹಿದಾಬಾದ್ನ 26 ವರ್ಷದ ಗುಡ್ಡುವಿನ ಕಥೆ ಮಾತ್ರ ಸ್ಪಲ್ಪ ಡಿಫರೆಂಟ್ ಆಗಿದೆ. ಸಾಹಿದಾಬಾದ್ನಲ್ಲಿ ಲಾಕ್ಡೌನ್ ನಿಯಮ ಸ್ವಲ್ಪ ಸಡಿಲಿಕೆ ಆದ ಹಿನ್ನೆಲೆಯಲ್ಲಿ, ಈತನ ತಾಯಿ ದಿನಸಿ ತರಲು ಮಾರುಕಟ್ಟೆಗೆ ಕಳಿಸಿದ್ದರು. ಮಗ ಹೋದದ್ದು ದಿನಸಿ ತರುವುದಕ್ಕಾಗಿಯೇ. ದಿನಸಿಯನ್ನು ತಂದ ಕೂಡ. ಮಗ ದಿನಸಿ ತರುತ್ತಾನೆ ಎಂದು ಕಾಯುತ್ತಿದ್ದ ಅಮ್ಮ ಮಗನನ್ನು ನೋಡಿ ಫುಲ್ ಶಾಕ್ ಆದರು. ಏಕೆಂದರೆ ದಿನಸಿಯ ಜತೆ, ಒಬ್ಬಳು ಹುಡುಗಿಯೂ ಇದ್ದಳು! ಮದುಮಗಳಂತೆ ಮುಖಕ್ಕೆ ಪರದೆ ಹಾಕಿಕೊಂಡು ಬಂದಿದ್ದಳಾಕೆ.
ಕಕ್ಕಾಬಿಕ್ಕಿಯಾದ ಅಮ್ಮ, ಇವಳ್ಯಾರು? ಎಲ್ಲಿಂದ ಕರೆದುಕೊಂಡು ಬಂದೆ? ದಿನಸಿಗೆ ಹೋದವ ವಾಪಸ್ ಬರಲು ಇಷ್ಟು ಹೊತ್ತು ಆದದ್ದೇಕೆ? ಹೀಗೆ ಒಂದೇ ಸಮನೆ ಪ್ರಶ್ನೆ ಕೇಳಿದರು. ಅದಕ್ಕೆ ಗಾಬರಿಯಿಂದ ಗುಡ್ಡು, ಅಮ್ಮನನ್ನು ಸಮಾಧಾನ ಪಡಿಸಿ ನಡೆದ ಘಟನೆಯನ್ನು ವಿವರಿಸಿದ. ಅದೇನೆಂದರೆ, ಗುಡ್ಡು ಲಾಕ್ಡೌನ್ಗಿಂತ ಮುಂಚೆ ಮದುವೆಯೇನೋ ಆಗಿದ್ದ. ಆದರೆ ಹೆಂಡತಿಯನ್ನು ಮನೆಗೆ ಕರೆತಂದಿರಲಿಲ್ಲ. ಅದಕ್ಕೆ ಕಾರಣ, ಲಾಕ್ಡೌನ್ಗಿಂತಲೂ ಹೆಚ್ಚಾಗಿ ಕದ್ದುಮುಚ್ಚಿಯಾದ ಮದುವೆ. ಅದಕ್ಕಾಗಿಯೇ ಹೆಂಡತಿಯನ್ನು ಬಾಡಿಗೆ ಮನೆ ಮಾಡಿ ಇಟ್ಟಿದ್ದ. ಅದೂ ಸುಮಾರು 45 ಕಿ.ಮೀ ದೂರ ಇರುವ ದೆಹಲಿಯಲ್ಲಿ.
ಅಮ್ಮನಿಗೆ ವಿಷಯ ತಿಳಿಸಲು ಅನೇಕ ಬಾರಿ ಟ್ರೈ ಮಾಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ಮೇಲಾಗಿ ಲಾಕ್ಡೌನ್ನಿಂದಾಗಿ ಹೆಂಡತಿಯನ್ನು ಕರೆದುಕೊಂಡು ಬರುವುದೂ ಕಷ್ಟವಾಗಿತ್ತು. ಇದೀಗ ಅಮ್ಮ ದಿನಸಿ ತರಲು ಕಳಿಸಿದ್ದೇ ತಡ, ಲಾಕ್ಡೌನ್ ನಿಯಮ ಸಡಿಲಿಕೆ ಆಗಿರುವ ಕಾರಣ ಧೈರ್ಯ ಮಾಡಿ ಹೆಂಡತಿಯನ್ನೂ ಕರೆದುಕೊಂಡು ಬಂದಿದ್ದಾನೆ.
ಮಗನ ಮದುವೆ ಬಗ್ಗೆ ನೂರಾರು ಕನಸು ಹೊತ್ತುಕೊಂಡಿದ್ದ ಈ ಅಮ್ಮ ಸುಮ್ಮನೆ ಇರುತ್ತಾರೆಯೇ? ಮದುವೆಯನ್ನು ಸುತರಾಂ ಒಪ್ಪುವುದಿಲ್ಲ ಎಂದರು. ಮಗ-ಅಮ್ಮನ ನಡುವೆ ವಾಗ್ವಾದ ನಡೆದು, ಕೊನೆಯ ಅಮ್ಮ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿಬಿಟ್ಟರು.
ಪೊಲೀಸರು ವಿಚಾರಿಸಿದಾಗ ಗುಡ್ಡು, ಎರಡು ತಿಂಗಳ ಹಿಂದೆ ನಾನು ಸವಿತಾಳನ್ನು ಮದುವೆಯಾಗಿದ್ದೇನೆ. ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ಆಗಿದೆ. ಮನೆಯವರಿಗೆ ಹೆದರಿ ಹಾಗೂ ಲಾಕ್ಡೌನ್ ಇದ್ದುದರಿಂದ ಮನೆಗೆ ಕರೆತರಲಿಲ್ಲ. ಅಷ್ಟೇ ಅಲ್ಲದೇ, ನಮ್ಮ ಮದುವೆಯ ಪ್ರಮಾಣಪತ್ರ ಲಾಕ್ಡೌನ್ನಿಂದಾಗಿ ಸಿಕ್ಕಿರಲಿಲ್ಲ. ಮದುವೆಗೆ ಸಾಕ್ಷಿಗಳ ಕೊರತೆಯಿತ್ತು. ಈ ಕಾರಣದಿಂದ ಸವಿತಾಳನ್ನು ದೆಹಲಿಯ ಬಾಡಿಗೆ ಮನೆಯಲ್ಲಿ ಇಟ್ಟಿದ್ದೆ ಎಂದಿದ್ದಾನೆ.
ಇಬ್ಬರೂ ಪ್ರಾಪ್ತರಾಗಿರುವ ಕಾರಣ ಹಾಗೂ ಮದುವೆಯಾಗಿರುವ ಬಗ್ಗೆ ದಾಖಲೆ ಸಿಕ್ಕ ಕಾರಣ, ಪೊಲೀಸರು ನವ ಜೋಡಿಯ ಪರ ವಹಿಸಿದರು. ಆದರೆ ಸೊಸೆಯನ್ನು ಮನೆಯೊಳಗೆ ಸೇರಿಸಲು ಗುಡ್ಡು ತಾಯಿ ಒಪ್ಪದ ಕಾರಣ ಸವಿತಾ ಬಾಡಿಗೆಗೆ ಇದ್ದ ದೆಹಲಿಯ ಮನೆಯಲ್ಲಿಯೇ ಇರುವಂತೆ ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್)
ದಿನಸಿ ತರಲು ಕಳುಹಿಸಿದರೆ ಹೊಸ ಹೆಂಡತಿಯನ್ನೂ ಕರೆತರುವುದೆ? ಮಗ ರಾಕ್, ಅಮ್ಮ ಶಾಕ್!

You Might Also Like
ದೇಹದ ಈ ಭಾಗಗಳಲ್ಲಿ ಮಾತ್ರ ಬೆವರುವುದಿಲ್ಲ ಯಾಕೆ ಗೊತ್ತಾ? Sweat
Sweat: ಬೆವರುವುದು ಒಂದು ನೈಸರ್ಗಿಕ ಪ್ರಕ್ರಿಯೆ. ದೇಹದ ಉಷ್ಣತೆ ಹೆಚ್ಚಾದಾಗ, ಚರ್ಮದಲ್ಲಿರುವ ಬೆವರು ಗ್ರಂಥಿಗಳು ನೀರು…
ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style
life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…