ಸದಾ ದೂಷಿಸುತ್ತ, ಜಗಳ ಮಾಡುತ್ತಿದ್ದ ಮಗಳ ಬಾಯಿ ಶಾಶ್ವತವಾಗಿ ಮುಚ್ಚಿಸಿದ ತಾಯಿ: ಹೀಗೊಂದು ದುರ್ಘಟನೆ

ಪುಣೆ: ಮನೆಯಲ್ಲಿ ಅಮ್ಮ-ಮಕ್ಕಳ ವಾದ-ವಿವಾದ, ಜಗಳ, ಕಿತ್ತಾಟವೆಲ್ಲ ತೀರ ಸಹಜ. ಹಾಗೇ ಈ ತಾಯಿ ಮಗಳು ಕೂಡ ಮಂಗಳವಾರ ಸಿಕ್ಕಾಪಟೆ ಜಗಳ ಮಾಡಿಕೊಂಡಿದ್ದಾರೆ. ಆದರೆ ಅದು ಕೊನೆಯಾಗಿದ್ದು ಮಾತ್ರ ಕ್ರೂರವಾಗಿ.

ಪುಣೆಯ ಪ್ರಗತಿನಗರದ ಸಂಜೀವನಿ ಬೊಭಾಟೆ (34) ಹಾಗೂ ಅವರ 19 ವರ್ಷದ ಮಗಳು ರುತುಜಾ ಮಧ್ಯ ಖಾಸಗಿ ವಿಚಾರವೊಂದಕ್ಕೆ ಪದೇಪದೆ ಜಗಳ ನಡೆಯುತ್ತಿತ್ತು. ಮಗಳು ತನ್ನ ತಂದೆ-ತಾಯಿಯನ್ನು ದೂಷಿಸುತ್ತಿದ್ದಳು. ಹಾಗೇ ಮಂಗಳವಾರ ಕೂಡ ಜಗಳ ಮುಂದುವರಿದಿತ್ತು.

ರುತುಜಾ ಅವಳದ್ದು ಆರ್ಥಿಕವಾಗಿ ಸ್ವಲ್ಪ ಹಿಂದುಳಿದ ಕುಟುಂಬ. ಅದರ ಮಧ್ಯೆ ಆಕೆ ತನ್ನ ಪಾಲಕರ ವಿರೋಧದ ನಡುವೆಯೂ ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯೂ ಆಗಿಬಿಟ್ಟಿದ್ದಳು. ಆದರೆ ಎರಡೇ ತಿಂಗಳಲ್ಲಿ ಗಂಡನ ಬಳಿ ಜಗಳವಾಡಿಕೊಂಡು ಮತ್ತೆ ತವರುಮನೆಗೇ ಬಂದಿದ್ದಳು.

ಆದರೆ ಪಾಲಕರು ಮತ್ತೆ ಮಗಳ ಸಂಸಾರ ಸರಿ ಮಾಡಲು ತುಂಬ ಪ್ರಯತ್ನಪಟ್ಟಿದ್ದರು. ಆದರೆ ರುತುಜಾ ಗಂಡ ಆಕೆಯನ್ನು ವಾಪಸ್ ಕರೆದುಕೊಳ್ಳಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ರುತುಜಾ ತನ್ನ ಗಂಡನ ವಿರುದ್ಧವೇ ಅತ್ಯಾಚಾರ ಆರೋಪ ಹೊರೆಸಿ ಪೊಲೀಸರಿಗೆ ದೂರು ನೀಡಿದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದರು. ಆದರೆ ಮತ್ತೆ ರುತುಜಾ, ತನಗೆ ಗಂಡ ಬೇಕು. ಹೇಗಾದರೂ ಮಧ್ಯಸ್ಥಿಕೆ ವಹಿಸಿ ನಮ್ಮನ್ನು ಸೇರಿಸಿ ಎಂದು ಅಮ್ಮನ ಬಳಿ ಕೇಳಿಕೊಂಡಳು. ಹಾಗೇ ಅವಳ ಪಾಲಕರೂ ಕೂಡ ಅಳಿಯನ ಬಳಿ ಹೋಗಿ ಗೋಗರೆದರೂ. ನೀನು ಮಗಳನ್ನು ಕರೆಸಿಕೊಳ್ಳಲು ಒಪ್ಪಿದರೆ ನಿನ್ನ ವಿರುದ್ಧದ ಕೇಸ್​ ಕೈ ಬಿಡುತ್ತೇವೆ ಎಂದು ಕೂಡ ಹೇಳಿದರು. ಆತ ಮಾತ್ರ ಒಪ್ಪಲಿಲ್ಲ.

ಈಗ ಕೆಲವು ದಿನಗಳಿಂದ ರುತುಜಾ ಸತತವಾಗಿ ತನ್ನ ತಾಯಿಯ ಜತೆ ಜಗಳ ಕಾಯುತ್ತಿದ್ದಳು. ನನ್ನ ಸಂಸಾರ ಸರಿ ಮಾಡಲು ನೀವು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ನಿರಂತರವಾಗಿ ಪಾಲಕರನ್ನು ದೂಷಿಸುತ್ತಿದ್ದಳು. ಹಾಗೇ ಮಂಗಳವಾರವೂ ತಾಯಿ-ಮಗಳ ನಡುವೆ ವಾದ-ವಿವಾದ ಶುರುವಾಗಿತ್ತು. ತುಂಬ ಬೇಸತ್ತ ತಾಯಿ, ತನ್ನ ಮಗಳ ತಲೆಗೆ ದೊಡ್ಡ ಕಲ್ಲಿನಿಂದ ಹೊಡೆದು ಕೊಂದೇ ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಸಂಜೀವನಿ ಬಾಭಟೆಯವರನ್ನು  ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.