ಅಬ್ಬಾ, ಎಂಥ ಅಮ್ಮ!

| ಡಾ.ಬಿ.ಎಸ್. ಜಯಶ್ರೀ, ಆಂಗ್ಲ ಪ್ರಾಧ್ಯಾಪಕರು, 

ಅಡುಗೆ ಮನೆಯಲ್ಲಿ ಸೆರಗು ಕಟ್ಟಿ, ಈಳಿಗೆಮಣೆ ಮುಂದೆ ಮಗ, ಮಗ್ಳ ಕನಸು ಕಾಣುತ್ತಾ ಬೆರಳ ಪೆಟ್ಗೆ ಬಡ್ಕೊಳ್ಳೋಳೇ, ಇಲ್ಲವೇ ಕನಸಿನ ಮಧ್ಯೆ ತರಕಾರಿಯ ಹೋಳಾಗ್ಸಿ, ಬೆರಳ ಒಡ್ಡಿ, ಬೆರಳ ಕುಡಿ ಸರಕ್ಕೆಂದಾಗ ‘ಏನಾಯ್ತಮ್ಮ, ಏನ್ ಕನಸು ಕಾಣ್ತಿದ್ದೀ, ತರಕಾರಿ ಹೆಚ್ಚಾಯ್ತಲ್ಲ’ ಎಂಬ ಮುದ್ದು ಮಗಳ ದನಿ ಕೇಳಿ, ‘ಏನಿಲ್ಲ, ಏನೋ ಯೋಚಿಸ್ತಿದ್ದೆ. ಏನಿಲ್ಲ, ಹೇಳು, ಏನ್ಬೇಕು ನಿನ್ಗೆ’ ಅನ್ನೋಳೆ ನಿಮ್ಮಮ್ಮ, ಅಬ್ಬಾ ಎಂಥ ಅಮ್ಮ! ಪ್ರತಿದಿನ ಮನೆ ತಲುಪಿದ ತಕ್ಷಣವೇ ಬಾಗಿಲು ತೆಗೆದು ‘ಏನೇ, ಸುಸ್ತಾ, ಬಾ ಕಾಫಿ ಕೊಡ್ತೀನಿ, ಊಟ ಏನ್ ಕೊಡ್ಲಿ ಹೇಳು ಅಂತಂತ್ಲೆ, ಕಾಫಿನೂ ಮಾಡಿ ಊಟಕ್ಕೂ ಸಾರು ಬಿಸಿ ಮಾಡಿ, ಯಾವುದಕ್ಕೂ ರೆಡಿಯಾಗಿ ನಿಂತು, ಮಗಳನ್ನು ಹಿತವಾಗಿಟ್ರೆ ಗೆದ್ದೆ ಅನ್ನೋ ಆ ಅಮ್ಮ, ನಿಮ್ಮಮ್ಮ, ಎಂಥ ಅಮ್ಮ! ಪರೀಕ್ಷೆ ಸಮಯದಲ್ಲಿ ‘ಅಮ್ಮ, ರಾತ್ರಿ 3ಕ್ಕೆ ಏಳ್ಸು’ ಅಂತದ್ರೆ ಒಂದ್ಗಂಟೆ ರಾತ್ರೀಲಿ ಮಲಗಿದ ನಿಮ್ಜೊತೆಗೂ ಎದ್ದು, ಮತ್ತು 3 ಗಂಟೆಗೆ ಏಳಕ್ಕೆ ಸನ್ನದ್ಧಳಾಗಿ ಅಲಾಂ ಇಟ್ಕೊಂಡು, 1.30ಕ್ಕೆ ಅಲಾರಂಗೆ ಅಲಾರಂ ಕೊಡೋಳೇ ನಿಮ್ಮಮ್ಮ, ಎಂಥ ಅಮ್ಮ. ಮಲ್ಲಿಗೆ ಹೂವಿನ ಕಾಲ ಬರುವುದಕ್ಕೆ ಮುಂಚೆನೇ ಮಗಳಿಗೆ ಮಲ್ಲಿಗೆ ಜಡೆ ಕನಸ್ಕಂಡು ಬೆಳ್ಗಾಗೆದ್ದು ಮಗಳನ್ನು ದೃಷ್ಟಿಸಿ, ಕನಸನ್ನು ಹೆಪ್ಪುಗಟ್ಟಿಸಿ, ಮಲ್ಲಿಗೆ ಕಾಲ ಬರೋದೇ ತಡ, ಊರಿನ ಮಲ್ಲಿಗೆ ಜಡೆ ಹೆಣೆಯೋರನ್ನ ಕೂರಿಸಿ, ಹಾಲು ಬೆಳ್ಳಗಿನ ಮಲ್ಲಿಗೆ ಮೊಗ್ಗನ್ನು ತಂದು ಅವಳು ಹೆಣೀತಿದ್ರೆ, ಇವಳು ಹಸಿರು ಸೀರೆ, ಕೆಂಪು ಬಳೆ, ಮುತ್ತಿನ ಸರಾನ ಮಗಳ ಮಲ್ಲಿಗೆ ಜಡೆಗೆ ಜೋಡ್ಸಿ, ಕುಚ್ಚು ಸಮೇತ ಮಗಳನ್ನು ಮನಸಲ್ಲಿ, ಮನೇಲಿ ಸಿಂಗರಿಸಿ, ‘ಮದುವೆ ಮಾಡಿದ ದಿನ ಹೊಸಲು ಹಾದು ಗಂಡನ್ಮನೆಗೆ ಹೊರಟು ಬಿಡ್ತಾಳೆ’ ಅಂತ ಖುಷಿ ಮಧ್ಯೆ ಒಂದು ಪುಟ್ಟ ಗಟ್ಟಿ ಕಣ್ಣೀರನ್ನು ಸಂದೀಲಿ ಸುರಿಸಿ, ವಾಪಸ್ ಬಂದು ಮಲ್ಲಿಗೆ ಜಡೆ ಸಂಭ್ರಮಾನ ಅನುಭವಿಸೋಳೆ ನಮ್ಮಮ್ಮ, ನಿಮ್ಮಮ್ಮ.

ಆಷಾಢಕ್ಕೆ ಸೊಸೆ ತವರು ಮನೆಗೆ ಹೋಗ್ಬೇಕು ಅಂತ ಅತ್ತೆ ತಯಾರಿ ನಡೆಸುವಾಗ್ಲೆ, ‘ಅಳಿಯಂದ್ರೇನಾದ್ರೂ ಬೇಡ ಅಂದ್ಬಿಟ್ರೆ, ಮಗಳು ಬರೋದು ತಪ್ಪೋಗುತ್ತೆ ಅನ್ನೋದ್ರ ಮಧ್ಯೆ, ಅತ್ತೆ ಅಳಿಯನ ಮಧ್ಯೆ ಏನಾದ್ರು ನನ್ಮಗಳ ವಿಷಯಕ್ಕೆ ವಿರಸವಾಗ್ಬಿಟ್ರೆ ಅಂತ ಒಳ್ಗೊಳ್ಗೆ ಅಳಿಯಂದ್ರು ಹೂ ಅನ್ಬಿಡ್ಲಿ, ಮಗಳು ನಾಲ್ಕು ದಿನ ನಮ್ ಜತೆನೂ ಹಿತವಾಗಿರ್ಲಿ’ ಅಂತ ಪರದಾಡುತ್ತೆ ಆ ಜೀವ; ಅದೇ ನಮ್ಮಮ್ಮ, ನಿಮ್ಮಮ್ಮ.

ಸುಂದರ ವಯಸ್ಸಿನ ಹುಡ್ಗೀರ ಮಧ್ಯೆ, ತನ್ನ ಮಗಳನ್ನೊಬ್ಬಳನ್ನೇ ಕಾಣ್ತಾ, ಅವಳಿಗೆ ಸುಂದರವಾದ ಕನಸನ್ನು ಪೋಣಿಸ್ತ ಕಳೆದು ಹೋಗಿ, ‘ಅಯ್ಯೊ, ಅವಳು ಅಳಿಯನ ವಸ್ತು, ಅವರಿಗೆ, ಅವರ ಅಮ್ಮನಿಗೆ ಹೊಂದ್ಕೊಳ್ಳಲಿ. ನಾನು ಹೀಗೆ ಅವಳನ್ನ ಇನ್ನೂ ಸೂಜಿದಾರದಲ್ಲಿ ಪೋಣಿಸ್ತಿದೀನಿ’ ಅಂತ ಎಚ್ಚರಗೊಳ್ಳೋದ್ರ ಮಧ್ಯೆ, ಅಕ್ಕರೆ, ಪ್ರೀತಿಗಳನ್ನೆಲ್ಲ ಒಳ್ಗೆ ಇಟ್ಕೊಳೋಳೇ ನನ್ನ ಅಮ್ಮ, ನಿಮ್ಮಮ್ಮ, ಅಬ್ಬಾ ಎಂಥ ಅಮ್ಮ!

Leave a Reply

Your email address will not be published. Required fields are marked *