ವಿಧವೆ ಸೊಸೆಗೆ ಮರುಮದುವೆ ಮಾಡಿಸಿದ ಅತ್ತೆ

ಬೆಳ್ಳಾರೆ:  ಅತ್ತೆ ಸೊಸೆ ಜಗಳ, ವರದಕ್ಷಿಣೆ ಕಿರುಕುಳ, ಪತಿಯಿಂದ ಪತ್ನಿಗೆ ಕಿರುಕುಳ ಮತ್ತಿತರ ನಕಾರಾತ್ಮಕ ವಿಚಾರಗಳ ನಡುವೆ ಅತ್ತೆಯೊಬ್ಬರು ವಿಧವೆ ಸೊಸೆಗೆ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾ ಅವರಿಗೆ ಅದೇ ಗ್ರಾಮದ ದಿ.ಪದ್ಮಯ್ಯರ ಪುತ್ರ ಮಾಧವ ಎಂಬುವರ ಜತೆ ವಿವಾಹವಾಗಿತ್ತು. ಆದರೆ ವರ್ಷದೊಳಗೆ ಅಪಘಾತದಿಂದ ಮಾಧವ ಇಹಲೋಕ ತ್ಯಜಿಸಿದರು.

ಅದಾಗಲೆ ಗರ್ಭಿಣಿಯಾಗಿದ್ದ ಸುಶೀಲಾ ಬದುಕು ಪತಿಯ ಅಕಾಲಿಕ ಮರಣದಿಂದ ಕಮರಿತ್ತು. ಚಿಕ್ಕ ವಯಸ್ಸಿನ ಸೊಸೆಯ ಜೀವನ ಹಾಳಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿದ ಮಾಧವ ಅವರ ಮನೆಯವರು ಮರು ಮದುವೆಗೆ ನಿಶ್ಚಯಿಸಿದರು. ಅದರಂತೆ ಮಾಧವರ ತಾಯಿ ಕುಂಞಕ್ಕರ ಮುತುವರ್ಜಿಯಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನದ ಜಯಪ್ರಕಾಶ್ ಎಂಬುವರೊಂದಿಗೆ ಸುಶೀಲಾರ ವಿವಾಹಕ್ಕೆ ನಿಶ್ಚಯಿಸಿದರು. ಸೋಮವಾರ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ನಡೆಸಿ ಕುಂಞ್ಯಕ್ಕ ಆದರ್ಶ ಅತ್ತೆಯಾಗಿದ್ದಾರೆ.

ಒತ್ತಾಯಕ್ಕೆ ಮಣಿದ ಸುಶೀಲಾ
ಮೂರು ವರ್ಷ ಹಿಂದೆ ಕಜೆಮೂಲೆ ಬಳಿ ಟ್ರಾೃಕ್ಟರ್ ಪಲ್ಟಿಯಾಗಿ ಮಾಧವ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆಗ ಗರ್ಭಿಣಿಯಾಗಿದ್ದ ಸುಶೀಲಾ ಗಂಡುಮಗುವಿಗೆ ಜನ್ಮ ನೀಡಿದ್ದು, ಪುತ್ರನ ಭವಿಷ್ಯಕ್ಕಾಗಿ ಮರು ಮದುವೆಯಾಗದಿರಲು ನಿಶ್ಚಯಿಸಿದ್ದರು. ಆದರೆ ಪತಿ ಮನೆಯವರ ಸತತ ಪ್ರಯತ್ನಗಳ ನಂತರ ಒಪ್ಪಿಗೆ ಸೂಚಿಸಿದರು. ವಿಶೇಷವೆಂದರೆ ಮೊದಲನೇ ವಿವಾಹ ಕೂಡ ಕೋಟೆ ದೇವಸ್ಥಾನದಲ್ಲಿಯೇ ನಡೆದಿತ್ತು.

ಸೊಸೆ ಸುಶೀಲಾಳನ್ನು ಮಗಳಂತೆ ಭಾವಿಸಿದ್ದೇನೆ. ಮಗಳ ಜೀವನ ರೂಪಿಸಬೇಕಾದುದು ತಾಯಿಯ ಕರ್ತವ್ಯ ಎಂಬಂತೆ ಅವಳ ಮರುಮಾಂಗಲ್ಯ ಕಾರ್ಯವನ್ನು ನೆರವೇರಿಸಿದ್ದೇವೆ. ತಾಯಿಯ ಕರ್ತವ್ಯ ಪೂರೈಸಿದ ತೃಪ್ತಿ ನನಗಾಗಿದೆ.
– ಕುಂಞ್ಯಕ್ಕ ಕಜೆಮೂಲೆ, ವಧುವಿನ ಅತ್ತೆ

Leave a Reply

Your email address will not be published. Required fields are marked *