ಕುಶಾಲನಗರ: ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣ ಆ ದೇಶದ ಅಭಿವೃದ್ಧಿಯ ಮಾನದಂಡವಾಗಿರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಹೇಳಿದರು.
ಇಲ್ಲಿನ ಎಪಿಸಿಎಂಎಸ್ ಹಾಲ್ನಲ್ಲಿ ಬುಧವಾರ ಗರ್ಭಿಣಿಯರಿಗಾಗಿ ಏರ್ಪಡಿಸಿದ್ದ ಪೌಷ್ಟಿಕಾಂಶ ಶಿಬಿರ ಮತ್ತು ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗರ್ಭಿಣಿ ಎನ್ನುವುದು ಅರಿವಿಗೆ ಬರುತ್ತಿದ್ದಂತೆಯೇ ವೈದ್ಯರನ್ನು ಸಂಪರ್ಕಿಸಬೇಕು. ಕನಿಷ್ಠ 3 ರಿಂದ 5 ಬಾರಿ ತಪಾಸಣೆಗೆ ಒಳಗಾಗಬೇಕು. ತಾಯಿ ಕಾರ್ಡ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.ತಾಯಿ ಮತ್ತು ಮಗುವಿನ ಸಂಪೂರ್ಣ ಆರೋಗ್ಯ ಮಾಹಿತಿ ಇದರಲ್ಲಿ ಅಡಗಿರುವುದರಿಂದ ಗರ್ಭಿಣಿ ಆದ ನಂತರದಿಂದ ಮಗುವಿಗೆ 5 ವರ್ಷ ತುಂಬುವ ತನಕ ತಾಯಿ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಬೇಕು.
ಹೊಟ್ಟೆಯೊಳಗೆ ಹೊಸದೊಂದು ಜೀವ ಇರುವುದರಿಂದ ವೈದ್ಯರ ಸಲಹೆಯನ್ನು ಪಾಲಿಸಲೇಬೇಕು. ಎಂತಹ ಸಂದರ್ಭ ಬಂದರೂ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಲು ಆದ್ಯತೆ ನೀಡಬೇಕು. ಗರ್ಭಿಣಿಯರು ಮಾನಸಿಕವಾಗಿ ಖುಷಿಯಾಗಿಯೇ ಇರಬೇಕು. ಮಗುವಿನಿಂದ ಮಗುವಿಗೆ 3 ವರ್ಷ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿಚಂದ್ರ ಮಾತನಾಡಿ, ಯಾವ ರೀತಿಯ ಆಹಾರ ತೆಗೆದುಕೊಂಡರೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದರ ಮಾಹಿತಿ ನೀಡಲು ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದಿದೆ. ಮೊದಲೆಲ್ಲಾ ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸಲಾಗುತ್ತಿತ್ತು. ಆದರೆ ಇದರಲ್ಲಿ ದುರುಪಯೋಗವಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈಗ ಅಂಗನವಾಡಿಗಳಲ್ಲಿ ನೇರವಾಗಿ ಗರ್ಭಿಣಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ. ಮೊದಲ ಸಲ ಗರ್ಭಿಣಿಯಾಗುವವರಿಗಾಗಿ ಕೇಂದ್ರ ಸರ್ಕಾರ ಮಾತೃವಂದನಾ ಕಾರ್ಯಕ್ರಮ ಜಾರಿಗೆ ತಂದಿದೆ. ಇದರಲ್ಲಿ ನೋಂದಾಯಿಸಿಕೊಂಡ ಗರ್ಭಿಣಿಯರಿಗೆ ತಿಂಗಳಿಗೆ 2 ಸಾವಿರ ರೂ.ನೀಡಲಾಗುತ್ತದೆ. ಇಂಥಹ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.