ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ನೊಂದು ಧರ್ಮಸ್ಥಳದ ನೇತ್ರಾವತಿ ನದಿಗೆ ಮಕ್ಕಳನ್ನು ನೂಕಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಅತ್ತೆಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ನಗರ್ತಪೇಟೆ ನಿವಾಸಿ ರೇವತಿ 2012ರ ಜುಲೈ 3ರಂದು ಇಬ್ಬರು ಮಕ್ಕಳನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ನೇತ್ರಾವತಿ ನದಿಗೆ ತಳ್ಳಿ ತಾನು ಜಿಗಿದಿದ್ದಳು. ಸ್ಥಳೀಯರು ಗಂಡು ಮಗುವನ್ನು ರಕ್ಷಣೆ ಮಾಡಿದ್ದರು. ಆದರೆ, ರೇವತಿ ಮತ್ತು ಹೆಣ್ಣು ಮಗು ಮೃತರಾಗಿದ್ದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆನಂತರ ಹಲಸೂರು ಗೇಟ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು.
ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆ ನಡೆಸಿದ 71ನೇ ಅಪರ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್, ಅತ್ತೆ ಮುನಿಲಕ್ಷ್ಮಮ್ಮಗೆ ಜೈಲುಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎಚ್. ಆರ್. ಸತ್ಯಾವತಿ ವಾದ ಮಂಡಿಸಿದ್ದರು. ವಿಚಾರಣೆ ನಡೆಯುತ್ತಿದ್ದಾಗಲೇ ಮೃತಳ ಪತಿ ವೆಂಕಟೇಶ್ ಸಾವನ್ನಪ್ಪಿದ್ದರು.