ಚಿನ್ನದ ಹುಡುಗಿ ಹಿಮಾ ದಾಸ್​ ಜಾತಿ ಕುರಿತು ಗೂಗಲ್​ನಲ್ಲಿ ಗರಿಷ್ಠ ಹುಡುಕಾಟ

ನವದೆಹಲಿ: 20 ವಯೋಮಿತಿ ವಿಶ್ವ ಅಥ್ಲೆಟಿಕ್ಸ್ ಚಾಪಿಂಯನ್​ಷಿಪ್​ನ ಮಹಿಳೆಯರ 400 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್​ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಆದರೆ ಅವರು ಚಿನ್ನದ ಪದಕ ಗೆದ್ದ ತಕ್ಷಣ ಭಾರತೀಯರು ಅವರ ಕುರಿತು ಹೆಚ್ಚಿನ ಮಾಹಿತಿಗಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಹೆಚ್ಚಿನವರು ಆಕೆಯ ಜಾತಿಯ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡಿರುವ ದಾಖಲೆ ಬಹಿರಂಗವಾಗಿದೆ.

ಚಿನ್ನ ಗೆದ್ದ ಬಳಿಕ, ಹಿಮಾ ದಾಸ್ ಯಾರು ಎನ್ನುವುದಕ್ಕಿಂತ ಮುಖ್ಯವಾಗಿ ಆಕೆಯ ಜಾತಿ ಯಾವುದು ಎನ್ನುವ ಬಗ್ಗೆ ವಿವರ ಪಡೆಯುವ ಸಾಹಸ ನಡೆದಿದೆ. ಹಿಮಾ ದಾಸ್ ವಿಚಾರದಲ್ಲಿ ಯಾವ ವಿಷಯ ಹೆಚ್ಚಾಗಿ ಚರ್ಚೆ ನಡೆದಿದೆ ಎನ್ನುವುದನ್ನು ಗೂಗಲ್ ಟ್ರೆಂಡ್ಸ್​ನ ಮೂಲಕ ನೋಡಬಹುದಾಗಿದೆ. ಸ್ವತಃ ಅಸ್ಸಾಂನಲ್ಲಿ ಆಕೆಯ ಜಾತಿಯ ಕುರಿತಾಗಿ ಗರಿಷ್ಠ ಹುಡುಕಾಟ ನಡೆದಿದ್ದರೆ, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶವಿದೆ. ಗೂಗಲ್ ಟ್ರೆಂಡ್ಸ್ ಪ್ರಕಾರ, ಸರ್ಚ್​ನಲ್ಲಿ ಹಿಮಾ ಹೆಸರು ದಾಖಲು ಮಾಡಿದರೆ, ಯಾವ ವಿಷಯದ ಬಗ್ಗೆ ಗರಿಷ್ಠ ಹುಡುಕಾಟ ನಡೆದಿದೆ ಎನ್ನುವ ಆಧಾರದಲ್ಲಿ ಸಲಹಾ ಪಟ್ಟಿ ಪ್ರಕಟವಾಗುತ್ತದೆ. ಅದರಲ್ಲಿ ಜಾತಿಯ ವಿಚಾರ 2ನೇ ಸ್ಥಾನದಲ್ಲಿದೆ.

ಈ ಹಿಂದೆ ಪಿವಿ ಸಿಂಧು ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ ಬಳಿಕವೂ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಿಂದ ಆಕೆಯ ಜಾತಿಯ ಬಗ್ಗೆ ಗರಿಷ್ಠ ಹುಡುಕಾಟ ದಾಖಲಾಗಿತ್ತು. (ಏಜೆನ್ಸೀಸ್​)