ಸಮಸ್ಯೆಗಳ ಕೂಪವಾದ ಗೌರಿಬಿದನೂರಿನ 10ನೇ ವಾರ್ಡ್ | ಅವೈಜ್ಞಾನಿಕ ರಸ್ತೆ, ಚರಂಡಿ ಕಾಮಗಾರಿಯಿಂದ ಕಿರಿಕಿರಿ
ಗೌರಿಬಿದನೂರು: ನೀರಿಗೆ ಪರದಾಟ, ಸಂಜೆಯಾದರೆ ಸೊಳ್ಳೆ, ಹೆಗ್ಗಣಗಳ ಕಾಟ, ಬೀದಿನಾಯಿಗಳ ಹುಚ್ಚಾಟ…! ಇವು ನಗರಸಭೆ ವಾರ್ಡ್ 10ರ ನಿವಾಸಿಗಳನ್ನು ಕಾಡುತ್ತಿರುವ ಸಮಸ್ಯೆಗಳು.
ವಾರ್ಡ್‌ನ ಬಹುತೇಕ ಪ್ರದೇಶ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ್ದು, ಬಡಾವಣೆಗಳಲ್ಲಿ ಚಿಕ್ಕ ಮನೆಗಳು ಮತ್ತು ಗಲ್ಲಿ ರಸ್ತೆಗಳದ್ದೇ ಕಾರುಬಾರು. ಮನೆಗಳು ಸಣ್ಣದಾಗಿದ್ದು, ನೀರಿನ ಸಂಪುಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ವಾರ್ಡ್‌ನಲ್ಲಿ ಓವರ್‌ಹೆಡ್ ಟ್ಯಾಂಕ್ ಕೂಡ ಇಲ್ಲ. ಐದು ದಿನಗಳಿಗೊಮ್ಮೆ ನೀರು ಪೂರೈಕೆಯಾದಾಗ ಹಿಡಿದಿಟ್ಟುಕೊಳ್ಳಬೇಕು. ಎರಡು ಕೊಳವೆ ಬಾವಿಗಳನ್ನು ಕೊರೆಸುವಂತೆ ವಾರ್ಡ್‌ನ ನಗರಸಭೆ ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಅವೈಜ್ಞಾನಿಕ ಕಾಮಗಾರಿ
ವಾರ್ಡ್‌ನ ಅರ್ಧ ಭಾಗದಲ್ಲಿ ಪೈಪ್‌ಲೈನ್ ಚರಂಡಿ ಕಾಮಗಾರಿ ಮಾಡಿದ್ದರೂ, ಅವೈಜ್ಞಾನಿಕವಾಗಿದೆ. ಚೇಂಬರ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ದುರ್ನಾತದ ಜತೆಗೆ ಸೊಳ್ಳೆ ಮತ್ತು ಹೆಗ್ಗಣಗಳ ಕಾಟ ಹೆಚ್ಚಿದೆ.
ನಗರಸಭೆ ಸದಸ್ಯರು ಅಧಿಕಾರಕ್ಕೆ ಬಂದ ಬಳಿಕ ನಗರೋತ್ಥಾನ ಯೋಜನೆಯಡಿ 35 ಲಕ್ಷ ರೂ. ಅನುದಾನ ಬಂದಿದೆ. ಗೌರಯ್ಯ ಗಲ್ಲಿಯಲ್ಲಿರುವ ಬಹುತೇಕ ಕಿರಿದಾದ ರಸ್ತೆಗಳಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಮನೆಗಳ ಮುಂಬಾಗಿಲಿಗಿಂತ ಎತ್ತರದಲ್ಲಿ ರಸ್ತೆ ಇರುವುದು ಸಮಸ್ಯೆ ತಂದೊಡ್ಡಿದೆ. ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ. ಆದ್ದರಿಂದ ಮನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ನಾಯಿಗಳ ಉಪಟಳ:
ವಾರ್ಡ್‌ನಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ಚಿಕ್ಕ ಮಕ್ಕಳು ಹಾಗೂ ವೃದ್ಧರು ರಸ್ತೆಗಳಲ್ಲಿ ಓಡಾಡುವಂತಿಲ್ಲ. ದ್ವಿಚಕ್ರ ವಾಹನಗಳಲ್ಲಿ ಹೋಗುವವರ ಹಿಂದೆ ಬಿದ್ದು ಕಚ್ಚಿರುವ ಸಾಕಷ್ಟು ಉದಾಹರಣೆಗಳಿವೆ. ರಾತ್ರಿ ವೇಳೆ ನಾಯಿಗಳು ನಿರಂತರವಾಗಿ ಬೊಗಳುವುದರಿಂದ ನಿವಾಸಿಗಳ ನಿದ್ದೆಗೆ ಭಂಗ ಉಂಟಾಗಿದೆ. ಕೂಡಲೇ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಸ್ವಚ್ಛತೆಗೆ ತಿಲಾಂಜಲಿ
ಹೂವಾಡಿಗರ ಗಲ್ಲಿಯ ನಿವೇಶನಗಳಲ್ಲಿ ದಶಕಗಳಿಂದ ತ್ಯಾಜ್ಯ ಸುರಿಯುತ್ತಿರುವುದರಿಂದ ವಿಷಜಂತುಗಳ ಕಾಟ ಹೆಚ್ಚಾಗಿದೆ. ಗಲ್ಲಿಯಲ್ಲಿ ಟ್ರ್ಯಾಕ್ಟರ್ ಮತ್ತು ಜೆಸಿಬಿ ಯಂತ್ರಗಳು ಹೋಗದ ಹಿನ್ನೆಲೆಯಲ್ಲಿ ನಗರಸಭೆ ಸ್ವಚ್ಛತೆ ಕಾರ್ಯ ನಡೆಸಲು ಮೀನಮೇಷ ಎಣಿಸುತ್ತಿದೆ.
ಸಂಚಾರಕ್ಕೆ ಸಂಚಕಾರ
ವಾರ್ಡ್‌ನ ಕೃಷ್ಣ ಗ್ರಾೃಂಡ್ ಎದುರಿನ ರಸ್ತೆಯಲ್ಲಿ ಜನ ಸುತ್ತಿ ಬಳಸಿ ಬ್ಯಾಂಕ್ ಮತ್ತು ಶಾಲೆ ಕಾಲೇಜುಗಳಿಗೆ ತೆರಳಬೇಕಾಗಿದೆ. ಆದ್ದರಿಂದ ರಸ್ತೆ ಮಧ್ಯೆ ಇರುವ ವಿಭಜಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಎರಡು ಬಾರಿ ಅನುಮೋದನೆಯಾದರೂ ಬೇಡಿಕೆ ಈಡೇರಿಲ್ಲ. ನಗರಸಭೆ ವ್ಯಾಪ್ತಿಗೆ ರಸ್ತೆ ಒಳಪಡದ ಕಾರಣ ವಿಭಜಕ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ.
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೊಳವೆ ಬಾವಿ ಕೊರೆಸುವಂತೆ ಮನವಿ ಮಾಡಲಾಗಿದೆ. 180ಕ್ಕೂ ಹೆಚ್ಚು ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಸರ್ಕಾರ ಸ್ಪಂದಿಸಬೇಕು. | ಸರ್ದಾರ್ ಅಕ್ತರ್, ನಗರಸಭೆ ಸದಸ್ಯ
ವಾರ್ಡ್‌ನಲ್ಲಿ ನಾಯಿಗಳ ಕಾಟ ಹೆಚ್ಚಿದ್ದು, ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮ ಜರುಗಿಸಬೇಕು. ವೈಜ್ಞಾನಿಕ ಪೈಪ್‌ಲೈನ್ ಹಾಗೂ ರಸ್ತೆ ಕಾಮಗಾರಿ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. | ಜಿ.ಡಿ.ಶಿವಕುಮಾರ್, ವಾರ್ಡ್ ನಿವಾಸಿ
ವಾರ್ಡ್ ನಂ : 10
ನಗರಸಭೆ ಸದಸ್ಯ: ಸರ್ದಾರ್ ಅಕ್ತರ್
ಮೊಬೈಲ್ ಸಂಖ್ಯೆ: 9448713385
ವಾರ್ಡ್ ವ್ಯಾಪ್ತಿ
ಗೌರಯ್ಯಗಲ್ಲಿ, ತಿಮ್ಮಯ್ಯ ಗಲ್ಲಿ, ಕೊಲಿಮಿ ಗಲ್ಲಿ, ರಾಮಾಯಣದ ಗಲ್ಲಿ, ಈಡಿಗರ ಗಲ್ಲಿ, ಮಸೀದಿ ಗಲ್ಲಿ
ಜನಸಂಖ್ಯೆ : 2400
ಮತದಾರರು : 1,200