ಹರಿಯಾಣದ ಮಸೀದಿ ನಿರ್ಮಾಣಕ್ಕೆ ಪಾಕ್​ ಉಗ್ರರ ಆರ್ಥಿಕ ನೆರವು

ಗುರುಗ್ರಾಮ: ಹರಿಯಾಣದ ಪಾಲ್ವಾಲ್ ಜಿಲ್ಲೆಯ ಮಸೀದಿಯೊಂದನ್ನು ಲಷ್ಕರ್-ಇ-ತೊಯ್ಬ ಹಣದಿಂದ ನಿರ್ಮಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ತನಿಖೆ ಪತ್ತೆ ಹಚ್ಚಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದು, ಮೊಹಮ್ಮದ್​ ಸಲ್ಮಾನ್​, ಮೊಹಮ್ಮದ್​ ಸಲೀಂ ಮತ್ತು ಸಾಜಿದ್​ ಅಬ್ದುಲ್​ ಎಂಬವರು ಬಂಧಿತರು. ಎನ್​ಐಎ ತಂಡ ಮಸೀದಿಯ ಮುಖ್ಯಸ್ಥರನ್ನು ವಿಚಾರಣೆ ನಡೆಸಿದ್ದು, ಇದುವರೆಗೆ ಸಿಕ್ಕ ದೇಣಿಗೆ ವಿವರಗಳನ್ನು ಪರಿಶೀಲಿಸಿದೆ.

ಲಾಹೋರ್​ ಮೂಲದ ಉಗ್ರ ಸಂಘಟನೆಯಾದ ಫಲಾ-ಇ-ಇನ್​ಸನಿಯಾತ್​ ಫೌಂಡೇಷನ್(ಎಫ್​ಐಎಫ್​)​ನಿಂದ ಮಸೀದಿ ನಿರ್ಮಾಣಕ್ಕೆ ದೇಣಿಗೆ ಪಡೆದಿರುವ ಆರೋಪದ ಮೇಲೆ ಇವರನ್ನು ಸೆ.26ರಂದು ಬಂಧಿಸಲಾಗಿತ್ತು. ಎಫ್​ಐಎಫ್​ ಸಂಸ್ಥೆ ಲಷ್ಕರ್​ ಇ ತೊಯ್ಬ ಮತ್ತು ಹಪೀಜ್​​ ಸಯೀದ್​ನ ಜಮತ್​ ಉದ್​ ದಾವಾ ಉಗ್ರ ಸಂಘಟನೆಗಳಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಬಂಧಿತ ಸಲ್ಮಾನ್​ ಲಷ್ಕರ್​ ಇ ತೊಯ್ಬ ಸಂಪರ್ಕ ಹೊಂದಿರುವ ದುಬೈ ವ್ಯಕ್ತಿಯಿಂದ ಎಫ್​ಐಎಫ್​ನಿಂದ ಹಣ ಪಡೆದಿದ್ದಾನೆ. ಉತ್ತವಾರದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ ಈ ಮೂಲದಿಂದ 70 ಲಕ್ಷ ರೂ. ದೊರೆತಿದೆ. ಅಷ್ಟೇ ಅಲ್ಲದೆ ಈ ಉಗ್ರ ಸಂಘಟನೆಯಿಂದ ಸಲ್ಮಾನ್​ ಆತನ ಮ್ಕಕಳ ಮದುವೆಗೂ ಹಣ ಪಡೆದಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಈ ಹಣ ಎಲ್ಲಿಂದ ಬರುತ್ತಿದೆ ಮತ್ತು ಯಾವ ಕಾರಣಕ್ಕೆ ಉಪಯೋಗವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಎನ್​ಐಎ ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಸಲ್ಮಾನ್​ ಟ್ಯಾಕ್ಸಿ ಮತ್ತು ಹಾಲಿನ ಉತ್ಪನ್ನಗಳ ಮಾರಾಟ ವ್ಯವಹಾರದಲ್ಲಿ ತೊಡಗಿದ್ದ. ಆದರೆ ಈ ವ್ಯವಹಾರದಲ್ಲಿ ನಷ್ಟವಾದ ಕಾರಣ, ಸೌದಿ ಅರೇಬಿಯಾಕ್ಕೆ ತೆರಳಿದ್ದ. ಅಲ್ಲಿ ಪಾಕಿಸ್ತಾನದ ಕೆಲ ಪ್ರಜೆಗಳನ್ನು ಭೇಟಿ ಮಾಡಿ ಅವರಿಂದ ಹಣವನ್ನು ತರುವುದು ಮತ್ತು ಹವಾಲಾದಲ್ಲಿ ಭಾಗಿಯಾಗಿದ್ದ ಎಂದು ಎನ್​ಐಎ ಮೂಲಗಳು ತಿಳಿಸಿವೆ.

ಎಫ್​ಐಎಫ್​ ಲಷ್ಕರ್​ ಇ ತೊಯ್ಬ ಪ್ರಮುಖ ಸಂಸ್ಥೆಯಾಗಿದೆ. (ಏಜೆನ್ಸೀಸ್​)