ಆಲ್ದೂರು (ಚಿಕ್ಕಮಗಳೂರು ತಾ.): ಮಲೆನಾಡಿನಲ್ಲಿ ಮೈ ಕೊರೆಯುವ ಚಳಿಗೆ ಜನ ತತ್ತರಿಸಿದ್ದಾರೆ. ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಿಗೆ ಬಸವಳಿದರೆ ರಾತ್ರಿ ಚಳಿಯು ಮೈ ನಡುಗಿಸುತ್ತಿದೆ.
ನವೆಂಬರ್, ಡಿಸೆಂಬರ್ನಲ್ಲಿ ಹೆಚ್ಚು ಚಳಿ ಇರಲಿಲ್ಲ. ಸದ್ಯ ದಿನೇದಿನೆ ಚಳಿ ಹೆಚ್ಚುತ್ತಿದೆ. ಬೆಳಗ್ಗೆ ಜನರು ಮನೆಯಿಂದ ಹೊರಬರುವುದು ವಿರಳವಾಗಿದ್ದು ವಾಯು ವಿಹಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ದಟ್ಟವಾಗಿ ಕವಿಯುವ ಮಂಜು ಬೆಳಗ್ಗೆ 9 ಗಂಟೆ ನಂತರ ಕರುಗುತ್ತಿದ್ದು ಸೂರ್ಯನ ಕಿರಣಗಳು ಬಿದ್ದಾಗ ಸ್ವಲ್ಪ ಪ್ರಮಾಣದಲ್ಲಿ ಚಳಿ ಕಡಿಮೆಯಾಗುತ್ತದೆ.
ಕಳೆದ ವರ್ಷ ಸಂಕ್ರಾಂತಿ ಹಬ್ಬ ಕಳೆದ ನಂತರ ಚಳಿಯ ತೀವ್ರತೆ ಕಡಿಮೆಯಾಗಿತ್ತು. ಕಳೆದ ವರ್ಷ ಇದೇ ಸಂದರ್ಭ 14 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಈ ಬಾರಿ 20 ಡಿಗ್ರಿ ಸೆಲ್ಸಿಯಸ್ ಇದೆ. ಆದರೆ ಈ ಬಾರಿ ವಾರದಿಂದೀಚೆಗೆ ಚಳಿ ಹೆಚ್ಚಾಗುತ್ತಿದೆ.
ಹೊರ ಊರುಗಳಿಂದ ಕೂಲಿ ಅರಸಿ ಕಾಫಿ ತೋಟಕ್ಕೆ ಬಂದಿರುವ ಕಾರ್ವಿುಕರು ಮಲೆನಾಡಿನ ಚಳಿಗೆ ತತ್ತರಿಸಿ ಹೋಗುತ್ತಿದ್ದಾರೆ. ಗುಂಪು ಗುಂಪಾಗಿ ಬರುವ ಕಾರ್ವಿುಕರ ಜತೆಯಲ್ಲಿರುವ ಸಣ್ಣ ಮಕ್ಕಳು ಚಳಿಗೆ ಪರದಾಡುತ್ತಿದ್ದಾರೆ. ಕೂಲಿ ಅರಸಿ ಬರುವ ಕಾರ್ವಿುಕರು ಮೊದಲು ಆಶ್ರಯ ಪಡೆಯುವುದೇ ಬಸ್ ನಿಲ್ದಾಣಗಳಲ್ಲಿ. ಪಟ್ಟಣದ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯವವರ ಸಂಖ್ಯೆ ಹೆಚ್ಚಿದ್ದು ಬೆಳಗ್ಗೆ ಹೊತ್ತು ನಿಲ್ದಾಣದ ಬಳಿ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುತ್ತಿರುತ್ತಾರೆ.
ನಾವು ಕೂಲಿ ಕೆಲಸ ಅರಸಿ ಗದಗ ಜಿಲ್ಲೆಯಿಂದ ಬಂದಿದ್ದೇವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಚಳಿ ಕಡಿಮೆಯಾಗಿತ್ತು. ಈ ಬಾರಿ ಜನವರಿ, ಫೆಬ್ರವರಿಯಲ್ಲೂ ಚಳಿ ಕಡಿಮೆಯಾಗಿಲ್ಲ. ಮಧ್ಯಾಹ್ನ ಬಿಸಿಲು ಮಾತ್ರ ನಮ್ಮ ಊರಿನಂಗೆ ಸುಡುತ್ತದೆ. ಬೆಳಗ್ಗೆ ಚಳಿಯಲ್ಲಿ ತೋಟದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ರಾಮಪ್ಪ.