More

    ಪ್ರಕೃತಿಯಿಂದ ದೂರವಾದಷ್ಟು ದುರಂತ ಹೆಚ್ಚು…

    ಪ್ರಕೃತಿಯಿಂದ ದೂರವಾದಷ್ಟು ದುರಂತ ಹೆಚ್ಚು...ಕರ್ನಾಟಕದಲ್ಲಿ ದೇವರಕಾಡುಗಳಿದ್ದಂತೆ ಮೇಘಾಲಯದ ರಾಜಧಾನಿ ಶಿಲ್ಲಾಂಗ್​ನಿಂದ 90 ಕಿ.ಮೀ. ದೂರದಲ್ಲಿ Mawphlang Sacred Forest ಇದೆ. 192 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಕಾಡಿನ ವೈಶಿಷ್ಟ್ಯವೆಂದರೆ- ಇಲ್ಲಿನ ಒಂದೇ ಒಂದು ವಸ್ತುವನ್ನು ಕೂಡ ಅದು ಕಟ್ಟಿಗೆ, ಹಣ್ಣುಹಂಪಲು, ಬಿದ್ದುಹೋಗಿರುವ ಎಲೆಯಾಗಿದ್ದರೂ ಹೊರಗಡೆ ಕೊಂಡೊಯ್ಯುವಂತಿಲ್ಲ. ಇಲ್ಲಿನ ಖಾಸಿ ಬುಡಕಟ್ಟು ಸಮುದಾಯದವರು ಈ ಕಾಡನ್ನು ಪೂಜನೀಯ ಭಾವದಿಂದ ಕಾಣುತ್ತಾರಲ್ಲದೆ, ನೂರಾರು ವರ್ಷಗಳಿಂದ ಈ ಸಂಸ್ಕೃತಿ-ಪರಂಪರೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿ ಲಾಬ್ಸಾ ಎಂಬ ಬುಡಕಟ್ಟು ದೇವರಿದ್ದು, ಆತನೇ ಖಾಸಿ ಸಮುದಾಯವನ್ನು, ಕಾಡನ್ನು ಕಾಪಾಡುತ್ತಿದ್ದಾನೆ. ಅಲ್ಲದೆ, ಕಾಡಿನ ಪ್ರತೀ ಮರವೂ ದೈವಿಕ ಅಂಶ ಹೊಂದಿದೆ ಎಂಬ ದೃಢನಂಬಿಕೆ ಇವರದ್ದು. ಹಾಗಾಗಿಯೇ, ಏನಾದರೂ ಸಮಸ್ಯೆಗಳು ಬಂದಾಗ ಮರದ ಎದುರು ಕೂತು ಪ್ರಾರ್ಥಿಸುತ್ತಾರೆ. ಇಷ್ಟಾರ್ಥ ಸಿದ್ಧಿಯಾಗಲೆಂದು ಕಾಡಿನ ಹಣ್ಣನ್ನೇ ಮರದ ಎದುರಿನ ಕಲ್ಲಿನ ಮೇಲಿಟ್ಟು, ಕೈಮುಗಿಯುತ್ತಾರೆ. ಅಷ್ಟೇ ಅಲ್ಲ, ಸಂತಸ-ಸಂಭ್ರಮದ ಸಂಗತಿಯಾಗಿದ್ದರೂ ಖಾಸಿಗಳು ಮೊದಲು ಬಂದು ತಿಳಿಸುವುದು ಈ ಮರಗಳಿಗೇ! ಎಂಥ ಭಾವನಾತ್ಮಕ ಸಂಬಂಧ!

    ಇಲ್ಲಿ ಪ್ರವೇಶಿಸುವವರಿಗೆ ಒಂದೇ ಷರತ್ತು-ಕಾಡಿನಿಂದ ಏನನ್ನೂ ಕೊಂಡೊಯ್ಯುವಂತಿಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆ ಹೊರಗಿನವರು ಯಾರೋ ತಿಳಿಯದೆ ಕಟ್ಟಿಗೆ ಸಾಗಿಸಲು ಪ್ರಯತ್ನಿಸಿದಾಗ ಅವರು ತಂದಿದ್ದ ಟ್ರಕ್ ಏನು ಮಾಡಿದರೂ ಶುರು ಆಗಲಿಲ್ಲವಂತೆ. ಕೊನೆಗೆ, ಕಟ್ಟಿಗೆ ಇಳಿಸಿ ಅವರು ಮರಳಬೇಕಾಯಿತು. ಈ ನಂಬಿಕೆ, ಆಚರಣೆ, ಪೂಜನೀಯ ಭಾವದಿಂದಲೇ ಕಾಡು ಇಂದಿಗೂ ಕಾಡಾಗಿ ಉಳಿದುಕೊಂಡಿದೆ. ಹಾಗಾಗಿಯೇ, ವನ್ಯಜೀವಿಗಳು ಮತ್ತು ನಾಡಜನರ ಮಧ್ಯೆ ಇಲ್ಲಿ ಸಂಘರ್ಷ ನಡೆಯುವುದಿಲ್ಲ. ಪ್ರಕೃತಿಯೊಂದಿಗೆ ಸಮನ್ವಯ, ಸಾಮರಸ್ಯದ ಬೆಸುಗೆ ಇದ್ದಲ್ಲಿ ಸಂಘರ್ಷದ ಪ್ರಸಂಗ ಬರಲು ಸಾಧ್ಯವೇ ಇಲ್ಲ.

    ಈ ಕಾಡಿನ ಬಳಿಯೇ ಇರುವ ಗ್ರಾಮ ಮಾವ್​ಲ್ಯಾನ್ನಾಂಗ್. ಈ ಗ್ರಾಮವನ್ನು ಜನ ಭಗವಂತನ ಉದ್ಯಾನ ಎಂದು ಕರೆಯುತ್ತಾರೆ. ಇಲ್ಲಿನ ರಸ್ತೆ-ರಸ್ತೆಗಳೂ ಮರ-ಗಿಡಗಳಿಂದ ಆವರಿಸಿ, ಶೃಂಗರಿಸಲ್ಪಟ್ಟಿವೆ. ಹಸಿರಿನ ಸಿರಿಯನ್ನೇ ಹೊದ್ದಿರುವ ಗ್ರಾಮದಲ್ಲಿ ಹುಡುಕಿದರೂ ಕಸ, ಕೊಳಚೆ ಸಿಗುವುದಿಲ್ಲ. ಎಲ್ಲೆಲ್ಲೂ ನೈರ್ಮಲ್ಯ ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ರೂಪಿಸಿಕೊಂಡಿರುವ ಜೀವನಶೈಲಿ ದೇಶದ ಪ್ರಧಾನಿಗೂ ಖುಷಿ ನೀಡಿದೆ. ಮಾವ್​ಲ್ಯಾನ್ನಾಂಗ್ ಏಷ್ಯಾದಲ್ಲೇ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಿದಿರಿನಿಂದ ತಯಾರಿಸಲಾದ ಕಸದಬುಟ್ಟಿಗಳನ್ನು ಇರಿಸಲಾಗಿದೆ. ಗ್ರಾಮಸ್ಥರು ಮನೆ ಹಾಗೂ ಸುತ್ತಮುತ್ತಲಿನ ಕಸವನ್ನು ಈ ಕಸದಬುಟ್ಟಿಗಳಿಗೆ ಹಾಕುತ್ತಾರೆ. ಬಳಿಕ, ಇದನ್ನು ಒಂದೆಡೆ ಸಂಗ್ರಹಿಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಅದನ್ನು ಗ್ರಾಮಸ್ಥರು ತಮ್ಮ ತೋಟ ಹಾಗೂ ಗದ್ದೆಗಳಿಗೆ ಬಳಸುತ್ತಾರೆ. ಹಾಗಾಗಿ, ಇವರು ಮಾರುಕಟ್ಟೆಯಿಂದ ಗೊಬ್ಬರ ಖರೀದಿಸುವುದು ಕಡಿಮೆಯೇ. ಇನ್ನೊಂದು ವಿಶೇಷವೆಂದರೆ, ಇಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೇ ಇಲ್ಲ. ಬಿದಿರಿನಿಂದ ತಯಾರಿಸಲಾದ ಸಾಮಗ್ರಿಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಪ್ರವಾಸಿಗರಿಗೂ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧವಿದೆ. ‘ಪ್ಲಾಸ್ಟಿಕ್ ಪರಿಸರದ ಅಂದ ಕೆಡಿಸುತ್ತದೆ. ಅದು ಮಣ್ಣಿನಲ್ಲಿ ಕರಗುವುದಿಲ್ಲ ಕೂಡ. ಹಾಗಾಗಿ, ಪ್ರಕೃತಿಸ್ನೇಹಿ ವಸ್ತುಗಳನ್ನು ಬಳಸಲು ಆದ್ಯತೆ ನೀಡಿದ್ದೇವೆ. ಗ್ರಾಮದ ಅಂದ ಹೆಚ್ಚಲು ಇದೂ ಒಂದು ಪ್ರಮುಖ ಕಾರಣ’ ಎನ್ನುತ್ತಾರೆ ಗ್ರಾಮಸ್ಥರು. ಪ್ರಕೃತಿಯೊಂದಿಗೆ ಬದುಕಿದರೆ ಎಷ್ಟು ಚೆಂದ ಎಂಬುದಕ್ಕೆ ಇವು ನಿದರ್ಶನಗಳು.

    ನದಿ, ಬೆಟ್ಟ, ಗುಡ್ಡ, ಮಣ್ಣು, ಗಿಡ-ಮರ, ಇಡೀ ಭೂಮಿ- ಇವೆಲ್ಲವೂ ಭಗವಂತನ ಅಂಶವೇ ಎಂದು ತಿಳಿದ ಜೀವನಧರ್ಮ ನಮ್ಮದು. ಪ್ರಕೃತಿ ಜತೆಗೆ ಸಂವಾದಿಸಿದರೆ ಅಥವಾ ಪ್ರಾರ್ಥಿಸಿದರೆ ಆ ಸಂದೇಶ ಪರಮಶಕ್ತಿಗೆ ತಲುಪುತ್ತದೆ, ಎಲ್ಲವೂ ಒಳಿತಾಗುತ್ತದೆ ಎಂಬುದು ಬರೀ ನಂಬಿಕೆಯಲ್ಲ; ಗಾಢವಾಗಿ ಬೇರೂರಿರುವ ಸಂಸ್ಕೃತಿ. ಹಾಗಾಗಿಯೇ, ನಿಸರ್ಗಕ್ಕೆ ಹಾನಿ ಮಾಡದೆ, ಸಹಜವಾಗಿಯೇ ಬದುಕು ರೂಪಿಸಿಕೊಳ್ಳುತ್ತಿದ್ದರು. ಅಗತ್ಯಗಳು ಸೀಮಿತವಾಗಿದ್ದವು. ಪ್ರಕೃತಿಯ ಒಡಲಿನಿಂದ ಪಡೆದುದಕ್ಕಿಂತ ಹೆಚ್ಚೇ ವಾಪಸ್ ಕೊಡುವಂಥ ಜೀವನಪದ್ಧತಿ ರೂಪಿಸಿಕೊಂಡಿದ್ದರು. ಹಾಗಾಗಿ, ನಿಸರ್ಗದ ದೈವಿಕ ಗುಣಗಳನ್ನು ಬದುಕಿನಲ್ಲೂ ಅಳವಡಿಸಿಕೊಂಡಿದ್ದರು. ಎಲ್ಲವೂ ತುಂಬ ವೇಗವಾಗಿ ಬದಲಾಯಿತು. ಪ್ರಕೃತಿಯೊಡನೆ ಬಾಳುವುದು ಮರೆತೇ ಹೋಯಿತು. ‘ಬೇಕು’ಗಳು ಹೆಚ್ಚಾದವು, ‘ಸೌಲಭ್ಯ’ಗಳು ಸಾಕೆನಿಸಲೇ ಇಲ್ಲ. ವಿಕಾಸ ಯಾವುದು, ವಿನಾಶ ಯಾವುದು ಎಂಬುದನ್ನು ಗುರುತಿಸಲಾಗದಷ್ಟು ವಿವೇಕವನ್ನು ಕಳೆದುಕೊಂಡಿರುವ ಮನುಷ್ಯ ಇನ್ನೂ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆಹೊಡೆದು ‘ನಾಗರಿಕತೆ’ ವಿಸ್ತರಿಸಲು ಹೊರಟಿದ್ದಾನೆ! ಪ್ರಕೃತಿಯ ಪಿಸುಮಾತನ್ನು, ಎದೆಬಡಿತವನ್ನು ಅರಿಯಲಾಗದಷ್ಟು ‘ಮುಂದುವರಿದಿದ್ದಾನೆ’.

    ಈಗಿನ ದೊಡ್ಡ ತಲ್ಲಣ, ಗಂಡಾಂತರದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡಲಾರದಷ್ಟು ಭೋಗವಾದದಲ್ಲಿ ಮುಳುಗಿಹೋಗಿದ್ದೇವೆ. ‘ಪರಿಸರ ರಕ್ಷಣೆ’ ಎಂಬುದು ಈಗಲೂ ಕ್ಷೀಣ ದನಿಯಲ್ಲಿ ಕೇಳಿಬರುತ್ತಿದ್ದು, ಪ್ರಕೃತಿ ಕೊಡುತ್ತಿರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತ ಸಾಗಿದ್ದೇವೆ. ಹವಾಮಾನ ಬದಲಾವಣೆ, ತಾಪಮಾನ ಏರಿಕೆ ಏನೆಲ್ಲ ವೈಪರೀತ್ಯಗಳನ್ನು ತರುತ್ತಿದೆ, ದುರಂತಗಳನ್ನು ಸೃಷ್ಟಿ ಮಾಡುತ್ತಿದೆ ಎಂಬುದನ್ನು ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಮಳೆಗಾಲ, ಬೇಸಿಗೆ, ಚಳಿಗಾಲ-ಮೂರನ್ನೂ ಅನುಭವಿಸುತ್ತಿದ್ದೇವೆ. ಮಲೆನಾಡು, ಕರಾವಳಿ, ಬಯಲುಸೀಮೆ ಪ್ರದೇಶಗಳ ಸ್ಥಿತಿ ಭಿನ್ನವೇನಲ್ಲ. ಈ ಬಾರಿ ಸುರಿದಿರುವ ಅಕಾಲಿಕ ಮಳೆಯಂತೂ ಲಕ್ಷಾಂತರ ಜನರ ಬದುಕನ್ನು ಕಸಿದುಕೊಂಡಿದೆ. ಆಗಸ್ಟ್-ಸೆಪ್ಟೆಂಬರ್​ನಲ್ಲಿ ಮುಗಿಯಬೇಕಾದ ಮಳೆಗಾಲ ನವೆಂಬರ್​ನಲ್ಲೂ ಮುಂದುವರಿದಿದೆ. ಇದಕ್ಕೆ ಹವಾಮಾನ ಬದಲಾವಣೆ-ತಾಪಮಾನ ಏರಿಕೆಯೇ ಕಾರಣ ಎಂದು ತಜ್ಞರು ಬೊಟ್ಟು ಮಾಡುತ್ತಿದ್ದಾರೆ.

    ಇಷ್ಟೆಲ್ಲ ದುರಂತಗಳು ಕಣ್ಣೆದುರಿಗೆ ನಡೆಯುತ್ತಿದ್ದರೂ, ಮುಖ್ಯವಾಹಿನಿಯ ಚರ್ಚೆಯಲ್ಲಿ ಪರಿಸರ ರಕ್ಷಣೆ ಇನ್ನೂ ಆದ್ಯತೆಯೇ ಆಗಿಲ್ಲ ಎಂಬುದು ಖೇದದ ಸಂಗತಿ. ಯಾವ ರಾಜಕೀಯ ಪಕ್ಷಗಳ ಕಾರ್ಯಸೂಚಿಯಲ್ಲಿ, ಚುನಾವಣಾ ಪ್ರಣಾಳಿಕೆಯಲ್ಲಿ, ಅಭ್ಯರ್ಥಿಗಳ ಮಾತುಗಳ ಅಬ್ಬರದಲ್ಲಿ ತಪ್ಪಿಯೂ ಪರಿಸರ ಕಾಳಜಿ ಕಾಣಿಸಿಕೊಳ್ಳುವುದಿಲ್ಲ. ಘೋರ ಸಮಸ್ಯೆಯ ಬಗ್ಗೆ ಸುಮ್ಮನಿದ್ದಮಾತ್ರಕ್ಕೆ ಅದು ತನ್ನಿಂದತಾನೇ ಪರಿಹಾರವಾಗುವುದಿಲ್ಲ. ಎಷ್ಟೇ ದುಡ್ಡು, ಅಧಿಕಾರ ಇದ್ದರೂ ರಾಜಕಾರಣಿಗಳೂ ಈ ಭೂಮಿಯಲ್ಲೇ ಬದುಕಬೇಕು! ಜನರೂ ಅಷ್ಟೇ. ನಮ್ಮ ಜೀವನಶೈಲಿಯೇ ಪರಿಸರಕ್ಕೆ ಆಘಾತ ಉಂಟುಮಾಡುತ್ತಿದೆ ಎಂದು ಗೊತ್ತಿದ್ದರೂ; ಬದಲಾವಣೆಗೆ ಮುಂದಾಗುತ್ತಿಲ್ಲ. ಐಷಾರಾಮಿ ಕಾರುಗಳಲ್ಲಿ ಬಂದು ರಸ್ತೆಗಳಲ್ಲಿ ಕಸ ಸುರಿಯುವವರು, ನದಿ ಸೇರಿ ಇತರ ಜಲಮೂಲಗಳಿಗೆ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರು, ಸಣ್ಣ ಕಾರ್ಯಕ್ರಮಕ್ಕೂ ರಾಶಿ ಪ್ಲಾಸ್ಟಿಕ್ ಬಳಸುವವರು, ಹಸಿ-ಒಣಕಸವನ್ನು ವಿಂಗಡಿಸದೆ ಪೌರಕಾರ್ವಿುಕರ ಮೇಲೆ ರೇಗುವವರು, ಕಣ್ಣೆದುರು ಮರಗಳು ಬಲಿಯಾಗುತ್ತಿದ್ದರೂ ವಿರೋಧ ತೋರದವರು, ಮಕ್ಕಳ ಭವಿಷ್ಯಕ್ಕಾಗಿ ನಾಲ್ಕು ಗಿಡ ನೆಡದವರು-ಇವರೆಲ್ಲ ಭೌತಿಕ ಸಮೃದ್ಧಿಯನ್ನೇ ನಿಜವಾದ ಅಭಿವೃದ್ಧಿ ಎಂದುಕೊಂಡರೆ ಪರಿತಪಿಸುವ ದಿನಗಳು ದೂರವಿಲ್ಲ. ಇಷ್ಟು ವರ್ಷಗಳ ಕಾಲ ಮಾಡಿದ ತಪ್ಪನ್ನು ಅರಿತುಕೊಂಡು, ಜೀವನಶೈಲಿಯನ್ನು ಪರಿಸರಕ್ಕೆ ಪೂರಕವಾಗಿ ಬದಲಾಯಿಸಿಕೊಳ್ಳಲು ಇದು ಸಕಾಲ.

    ಸಮಾಜದಲ್ಲಿ ನೆಲೆಸಿರುವ ಸಿನಿಕತೆಯ ಮನೋಭಾವವೂ ಪರಿಸರ ಪ್ರಜ್ಞೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಪರಿಸರಕ್ಕಾಗಿ ಕೆಲಸ ಮಾಡುವ ವ್ಯಕ್ತಿ-ಶಕ್ತಿಗಳ ಬಗ್ಗೆಯೂ ‘ಅವರು ಏನೋ ಮಾಡ್ತಾರೆ’ ಎಂಬ ಸಿನಿಕತೆ, ಉಡಾಫೆ. ಯುವಾ ಬ್ರಿಗೇಡ್ ಕಾರ್ಯಕರ್ತರು ನದಿಗಳನ್ನು ಸ್ವಚ್ಛಗೊಳಿಸುವಾಗ, ಕೆಲವೆಡೆ ‘ನೀವು ಸ್ವಚ್ಛ ಮಾಡಿ, ನಾವು ಕೊಳೆ ಮಾಡುತ್ತೇವೆ’ ಎಂದು ಸ್ಥಳೀಯರೇ ಧಮಕಿ ಹಾಕಿದ ಘಟನೆಗಳೂ ನಡೆದಿವೆ. ನಾವು ಒಂದಿಷ್ಟು ಜನ ಸಮಾನಮನಸ್ಕರು ಬೆಂಗಳೂರಿನ ಬಸವನಗುಡಿ ವಾರ್ಡಿನಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಾಗಲೂ, ‘ನೀವು ಒಂದಿನ ಸ್ವಚ್ಛ ಮಾಡುತ್ತೀರಿ, ನಾಳೆಯಿಂದ ಇಲ್ಲೇ ಕಸ ಹಾಕುತ್ತೇವೆ’ ಎಂದ ಅನಾಗರಿಕರೂ ಇದ್ದಾರೆ. ಒಂದು ವಾಸ್ತವವನ್ನು ಅರಿಯಲೇ ಬೇಕು. ಅದೆಷ್ಟೋ ಜನ ಸಂತಸದೃಶರಂತೆ ಪರಿಸರಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪರಿಣಾಮವೇ ಅರಿವಿನ ಬೆಳಕು ನಿಧಾನವಾಗಿಯಾದರೂ ಪಸರಿಸುತ್ತಿದೆ. ಅವರ ಕಾರ್ಯಗಳನ್ನು, ಪ್ರಯತ್ನಗಳನ್ನು ಗೌರವಿಸುವ, ನಾಗರಿಕ ಸಮುದಾಯದ ಕರ್ತವ್ಯವಾಗಿ ನಾವೂ ಕೈಜೋಡಿಸುವ ಮನೋಭಾವ ಹೆಚ್ಚಬೇಕೆ ಹೊರತು ಕೆಲಸ ಮಾಡುವವರ ಉತ್ಸಾಹ, ಆತ್ಮಸ್ಥೈರ್ಯವನ್ನು ಕಸಿಯಬಾರದು.

    ‘ನೀರಿನ ಗಾಂಧಿ’ ಎಂದೇ ಖ್ಯಾತಿ ಪಡೆದಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪ್ರೊ.ರಾಜೇಂದ್ರ ಸಿಂಗ್ ರಾಜಸ್ಥಾನದಲ್ಲಿ 10 ಸಾವಿರಕ್ಕೂ ಅಧಿಕ ಜೋಹಾಡ್​ಗಳನ್ನು (ಚೆಕ್​ಡ್ಯಾಂ) ನಿರ್ವಿುಸಿ, ಜಲಕ್ಷಾಮಕ್ಕೆ ಪರಿಹಾರ ಕಲ್ಪಿಸಿದ್ದಾರೆ. ಅವರು, ‘ಭೂ ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸುವುದು ಅಗತ್ಯ. ನಮ್ಮ ಅಭಿವೃದ್ಧಿ ಧೋರಣೆಗಳು ಸಹ ಭೂ ಸಾಂಸ್ಕೃತಿಕ ವೈವಿಧ್ಯದ ಬಲದ ಮೇಲೆ ರಚಿತವಾಗಬೇಕು. ಇದಕ್ಕಾಗಿ ಜನಾಗ್ರಹ ರೂಪುಗೊಳ್ಳಬೇಕು. ಹಾಗಾಗಿ ಸದಾಚಾರದ ಆಂದೋಲನ ನಡೆಯಬೇಕು. ಪ್ರತಿಯೊಬ್ಬರೂ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ ಅರಿವು ಹೊಂದಿ ಪ್ರೀತಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ನದಿ ಸಾಕ್ಷರತೆ ಒಳಗೊಂಡ ಪರಿಸರ ಸಾಕ್ಷರತೆಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಜನರು ಜಾಗೃತರಾದರೆ, ಜನಾಗ್ರಹ ವ್ಯಾಪಕ ರೂಪ ಪಡೆದುಕೊಂಡರೆ ಬದಲಾವಣೆ ಖಂಡಿತ’ ಎನ್ನುತ್ತಾರೆ.

    ಮಣ್ಣು, ಜಲ, ವಾಯು ಎಲ್ಲವೂ ವಿಷಮಯವಾಗುತ್ತಿದೆ. ಪ್ರಕೃತಿಯೇ ಮುನಿದರೆ ಉಳಿಯುವವರಾರು? ಈಗಾಗಲೇ ತಡವಾಗಿದೆ. ಇನ್ನಾದರೂ, ನಿಸರ್ಗವನ್ನು ಶೋಷಿಸದೆ ಪೋಷಿಸುವ, ಪ್ರಕೃತಿಯೊಡನೆ ಸಹಬಾಳ್ವೆ ನಡೆಸುವ ಸಂಕಲ್ಪ ಆಗಬೇಕು. ಭೂಮಿಯ ಆರ್ತನಾದಕ್ಕೆ ಕಿವಿಯಾಗದಿದ್ದರೆ ನಾಳೆ ಮನುಷ್ಯನ ಗೋಳು ಕೇಳಲು ಯಾರೂ ಇರುವುದಿಲ್ಲ ಎಂಬ ತಜ್ಞರ ಎಚ್ಚರಿಕೆ ನಮ್ಮನ್ನೆಲ್ಲ ಆಂತರಿಕ ಪರಿವರ್ತನೆಗೆ, ಪ್ರಕೃತಿಯ ಸನಿಹಕ್ಕೆ ಕೊಂಡೊಯ್ಯಲಿ. ಪ್ರಕೃತಿಯಲ್ಲೇ ಬದುಕು ಕಾಣುವ, ಸಂತೃಪ್ತಿಯ ಜೀವನಧರ್ಮ ಮತ್ತೆ ಸ್ಥಾಪಿತವಾಗಲಿ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts