ಸೈಕ್ಲೋತ್ಸವಕ್ಕೆ ನಿರೀಕ್ಷೆ ಮೀರಿ ನೋಂದಣಿ

ಹುಬ್ಬಳ್ಳಿ: ವಿಆರ್​ಎಲ್ ಸಹಯೋಗದಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಜ. 26ರ ಗಣರಾಜ್ಯೋತ್ಸವ ದಿನದಂದು ವಿಶ್ವದಾಖಲೆಗಾಗಿ ಹಮ್ಮಿಕೊಂಡಿರುವ ಸೈಕ್ಲೋತ್ಸವಕ್ಕೆ ನಿರೀಕ್ಷೆ ಮೀರಿ ಸೈಕ್ಲಿಸ್ಟ್​ಗಳು ನೋಂದಣಿ ಮಾಡಿಕೊಂಡಿದ್ದಾರೆ. ಸಂಘಟಕರು 1,500 ನೋಂದಣಿ ನಿರೀಕ್ಷಿಸಿದ್ದರು. ಆದರೆ, 1,655 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಅತಿ ಉದ್ದದ ಸಾಲಿನಲ್ಲಿ ಸೈಕಲ್ ಸವಾರಿ ಮಾಡಿ ಗಿನ್ನೆಸ್ ವಿಶ್ವದಾಖಲೆ ಪಟ್ಟಿಯಲ್ಲಿ ಹುಬ್ಬಳ್ಳಿ ಹೆಸರು ಸೇರ್ಪಡೆ ಆಗುವಂತೆ ಮಾಡುವುದು ಸೈಕ್ಲೋತ್ಸವದ ಉದ್ದೇಶವಾಗಿದ್ದು, ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸೈಕ್ಲಿಸ್ಟ್​ಗಳು ಸ್ವಯಂ ಪ್ರೇರಣೆಯಿಂದ ಬಂದಿರುವುದು ವಿಶೇಷ.

ಸಮಗ್ರ ಮಾಹಿತಿ: ಹೆಸರು ನೋಂದಾಯಿಸಿಕೊಂಡಿರುವ ಸೈಕ್ಲಿಸ್ಟ್​ಗಳಿಗೆ ಸೈಕ್ಲೋತ್ಸವದ ಉದ್ದೇಶ, ನಿಯಮ, ಶಿಸ್ತಿನ ಕುರಿತು ಸಂಘಟಕರು ಎಲ್ಲ ಮಾಹಿತಿಯನ್ನೂ ಈಗಾಗಲೇ ನೀಡಿದ್ದಾರೆ. ಮೇಲಾಗಿ, ಯಾವುದೇ ಪ್ರಶ್ನೆಗಳಿದ್ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರ ನೀಡುವ ಮೂಲಕ ಎಲ್ಲಿಯೂ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಸ್ಥಳೀಯರು ಮಾತ್ರವಲ್ಲದೆ ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ರಾಣೆಬೆನ್ನೊರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ ಮತ್ತಿತರ ಕಡೆಯ ಸೈಕ್ಲಿಸ್ಟ್​ಗಳ ಜತೆಗೆ ಕೊಯಮತ್ತೂರು, ಸೇಲಂ, ಚೆನ್ನೈ, ಹೈದರಾಬಾದ್, ಪುಣೆ, ಸಾಂಗ್ಲಿ, ಕೊಲ್ಲಾಪುರ, ಸತಾರಾ ಸೇರಿ ಹೊರ ರಾಜ್ಯದ ಸೈಕ್ಲಿಸ್ಟ್​ಗಳೂ ನೋಂದಣಿ ಮಾಡಿಕೊಂಡಿದ್ದಾರೆ.

ಸೈಕ್ಲಿಸ್ಟ್​ಗಳು 4 ಕಿ.ಮೀ. ಸೈಕಲ್ ತುಳಿಯಲು ಅರ್ಹರಾಗಿರುವುದನ್ನು ಖಚಿತಪಡಿಸಿಕೊಳ್ಳುವ ವ್ಯಾಲಿಡೇಷನ್ ಪ್ರಕ್ರಿಯೆ ಬುಧವಾರ ಇಲ್ಲಿಯ ಕುಸುಗಲ್ ರಸ್ತೆಯಲ್ಲಿ ಪೂರ್ಣಗೊಂಡಿತು. ಇದುವರೆಗೆ ಬೇರೆ ಬೇರೆ ನಗರದಲ್ಲಿ ಸಹ ಸಂಘಟಕರು ವ್ಯಾಲಿಡೇಷನ್ ನಡೆಸಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಸೈಕ್ಲಿಸ್ಟ್​ಗಳು ಜ. 25ರಂದು ಜೆರ್ಸಿ, ಬಿಬ್, ಗ್ರೀನ್​ಕಾರ್ಡ್ ಪಡೆಯಬೇಕು. ಹೊರಗಿನಿಂದ ಬರುವ ಸೈಕ್ಲಿಸ್ಟ್​ಗಳು ಜ. 26ರ ಬೆಳಗ್ಗೆ 6.30ರಿಂದ 10.30ರವರೆಗೆ ಕುಸುಗಲ್ ರಸ್ತೆ ಆಕ್ಸ್​ಫರ್ಡ್ ಕಾಲೇಜ್ ಬಳಿ ಗೊತ್ತುಮಾಡಿದ ಸ್ಥಳದಲ್ಲಿ ಪಡೆಯಬಹುದು ಎಂದು ಸಂಘಟಕರ ಪರವಾಗಿ ಆನಂದ ಬೇದ್ ತಿಳಿಸಿದ್ದಾರೆ.