ದ.ಕ. 42, ಉಡುಪಿ 21ಶಾಲೆಗಳಿಗೆ ಆಂಗ್ಲ ಮಾಧ್ಯಮ

ಅವಿನ್ ಶೆಟ್ಟಿ, ಉಡುಪಿ
ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ನಿರ್ಧರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 42, ಉಡುಪಿ ಜಿಲ್ಲೆಯ 21 ಪ್ರಾಥಮಿಕ ಶಾಲೆಗಳು ಸೇರಿ ರಾಜ್ಯದಲ್ಲಿ 947 ಶಾಲೆಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಸಲ್ಲಿಕೆಯಾಗಿದೆ.

ರಾಜ್ಯದ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜತೆಗೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ. 276 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ 6 ಮತ್ತು 7ನೇ ತರಗತಿಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲಾಗುತ್ತಿರುವ ಶಾಲೆಗಳಲ್ಲೂ ಪ್ರತ್ಯೇಕವಾಗಿ ತರಗತಿ ಆರಂಭಿಸಲಾಗುವುದು ಎಂದು ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಅದರಂತೆ ರಾಜ್ಯದ ಕೆಲವು ಶಾಲೆಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆಂಗ್ಲ ಮಾಧ್ಯಮ ಸ್ವರೂಪ ಪಡೆದುಕೊಳ್ಳಲು ತಯಾರಾಗಿವೆ.

ಆಂಗ್ಲ ಮಾಧ್ಯಮ ಶಾಲೆ ವಿಶೇಷ: ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಅಗತ್ಯವಿರುವ ಪಠ್ಯಪುಸ್ತಕ, ಸ್ಮಾರ್ಟ್ ತರಗತಿಗಳಲ್ಲಿ ಬೋಧಿಸಲು ಅನುಕೂಲವಾಗುವಂತೆ ಧ್ವನಿ ಮತ್ತು ದೃಶ್ಯವನ್ನೊಳಗೊಂಡ ಇ-ಕಂಟೆಂಟ್ ಡಿಎಸ್‌ಆರ್‌ಟಿ (ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ) ಮೂಲಕ ಸಿದ್ಧವಾಗಲಿದೆ. ಸರ್ಕಾರದಿಂದ ಆಂಗ್ಲ ಮಾಧ್ಯಮವಾಗಿ ಅನುಮೋದನೆಗೊಂಡ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಈಗಾಗಲೆ ಕನ್ನಡದಲ್ಲಿದ್ದ ಪಠ್ಯಗಳನ್ನು ಆಂಗ್ಲ ಭಾಷೆಗೆ ಭಾಷಾಂತರಗೊಳಿಸಲಾಗುತ್ತಿದೆ.

ಪರಿಣತ ಶಿಕ್ಷಕರ ನೇಮಕ: ಸದ್ಯದ ಮಟ್ಟಿಗೆ ಈಗಿರುವ ಇಂಗ್ಲಿಷ್ ಬೋಧನೆಯಲ್ಲಿ ಪರಿಣತಿ ಹೊಂದಿರುವ ಕಾರ್ಯನಿರತ ಶಿಕ್ಷಕರಿಗೆ ಆಯ್ಕೆ ಪರೀಕ್ಷೆ ನಡೆಸಿ ಆಂಗ್ಲ ಮಾಧ್ಯಮ ತರಗತಿ ಬೋಧಿಸಲು ನಿಯೋಜಿಸಲಾಗುತ್ತದೆ. ಎಲ್ಲ ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಪೂರ್ವಸಿದ್ಧತೆ ನಡೆಯುತ್ತಿದೆ. ಆಯ್ದ ಆಂಗ್ಲ ಭಾಷೆ ಶಿಕ್ಷಕರನ್ನು ಮಾನಸಿಕವಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಲ್ಲಿಸಲಾದ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಜಿಲ್ಲಾ ಡಯಟ್ ಮೂಲಕ ಪರಿಶೀಲನೆ ನಡೆಸುತ್ತದೆ. ಡಯಟ್ ಸಂಸ್ಥೆಯ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು, ಉಪನ್ಯಾಸಕರ ತಂಡ ಆಯ್ಕೆ ಮಾಡಿದ ತಂಡ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ಶಿಕ್ಷಕರ ಅರ್ಹತೆಯನ್ನು ಪರಿಶೀಲಿಸಿ, ಅರ್ಹ ಶಾಲೆಯ ಪಟ್ಟಿಯನ್ನು ಇಲಾಖೆಗೆ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಸಲ್ಲಿಸಲಿದೆ ಎಂದು ಬೆಂಗಳೂರಿನ ಡಿಎಸ್‌ಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಿಂದ ಎಷ್ಟು ಶಾಲೆ?: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯ್ದ ಶಾಲೆಗಳನ್ನು ಪಟ್ಟಿ ಮಾಡಿ ಕಳುಹಿಸಲಾಗಿದ್ದು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಪರಿಶೀಲನೆ ನಡೆಯುತ್ತಿದೆ. ಉಡುಪಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಾದ ಬೈಂದೂರಿನಲ್ಲಿ 5, ಕಾಪು 4, ಕಾರ್ಕಳ 4, ಕುಂದಾಪುರ 4, ಉಡುಪಿ 4 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ 6, ಬೆಳ್ತಂಗಡಿ 5, ಮಂಗಳೂರು 7, ಮಂಗಳೂರು ಉತ್ತರ 5, ಮಂಗಳೂರು ದಕ್ಷಿಣ 4, ಮೂಡುಬಿದಿರೆ 4, ಪುತ್ತೂರು 6, ಸುಳ್ಯ 5 ಶಾಲೆಗಳ ಪಟ್ಟಿ ಸಲ್ಲಿಕೆಯಾಗಿದೆ.

ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಬಗ್ಗೆ ಶಾಲೆಗಳ ಪಟ್ಟಿಯನ್ನು ಸಲ್ಲಿಸಿದ್ದೇವೆ. ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ (ಡಯಟ್) ಶಾಲೆಗಳ ಪರಿಶೀಲನೆ ನಡೆಸಿ, ಅರ್ಹಶಾಲೆಗಳ ಪಟ್ಟಿಯನ್ನು ಅಂತಿಮಗೊಳಿಸುತ್ತದೆ.
|ಶೇಷಶಯನ ಕಾರಿಂಜ, ಉಪ ನಿರ್ದೇಶಕ, ಶಿಕ್ಷಣ ಇಲಾಖೆ, ಉಡುಪಿ