ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ಹೊರಗುಳಿದ 1500ಕ್ಕೂ ಹೆಚ್ಚು ಮಕ್ಕಳು

blank

ಮೈಸೂರು: ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ಬರೆಯದೆ ಹೊರಗೆ ಉಳಿದಿರುವುದು ಆಘಾತಕಾರಿ ವಿಷಯ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು.
ರಾಜೇಂದ್ರನಗರದ ಕೆಪಿಎಸ್ ಶಾಲೆಯಲ್ಲಿ ಸುಮಾರು 99.75 ಲಕ್ಷ ರೂ. ವೆಚ್ಚದಲ್ಲಿ ಐದು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮಕ್ಕಳು ಪರೀಕ್ಷೆ ಬರೆಯದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ, ಅಂತಹ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ನಮ್ಮ ಶಿಕ್ಷಣ ತಜ್ಞರ ತಂಡ ಪರೀಕ್ಷೆಯನ್ನೇ ಬರೆಯದ ಮಕ್ಕಳ ಮಾಹಿತಿ ಪಡೆದು ಅಂತಹವರ ಮನೆಗೆ ಭೇಟಿ ನೀಡಿ ಅವರನ್ನು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿನ ಸಾಲಿನಲ್ಲಿ 7 ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈ ಬಾರಿ 15ನೇ ಸ್ಥಾನಕ್ಕೆ ಹೋಗಿರುವುದು ನಿಜ. ಆದರೆ ಪಿಯುಸಿಯಲ್ಲಿ 22 ಸ್ಥಾನದಲ್ಲಿದ್ದ ಜಿಲ್ಲೆ 12ನೇ ಸ್ಥಾನಕ್ಕೆ ಬಂದಿರುವುದು ಸಂತಸ ತಂದಿದೆ ಎಂದರು.
ಸ್ಥಾನ ಮತ್ತು ಸಂಖ್ಯೆಯಲ್ಲಿ ಏರುಪೇರಾದರೂ ನಮ್ಮ ಜಿಲ್ಲೆಯ ಮಕ್ಕಳ ಸಾಧನೆ ಅದ್ಭುತವಾಗಿದೆ. ಫಲಿತಾಂಶದಲ್ಲಿ ನಮಗೆ ಯಾವುದೇ ಸ್ಥಾನ ಪಡೆಯುವುದಕ್ಕಿಂತ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯವಾಗಿತ್ತು. ಹಾಗಾಗಿ ಸ್ಥಾನಗಳಿಕೆಯಲ್ಲಿ ಸ್ವಲ್ಪ ಏರುಪೇರಾಗಿದೆ ಎಂದು ಸಮರ್ಥಿಸಿಕೊಂಡರು.
ಶಿಕ್ಷಣದ ಜತೆ ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ, ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಕಾರ್ಯೋನ್ಮುಖರಾಗಿದ್ದಾರೆ. ಶಾಲೆಗಳಿಗೆ ಮೂಲ ಸೌಲಭ್ಯಗಳ ಕೊರತೆ ಇದೆ. ಅದನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಭಾಷಾ ವಿಷಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ನಮ್ಮ ಮಕ್ಕಳು ಹೆಚ್ಚು ಅನುತ್ತೀರ್ಣರಾಗಿದ್ದಾರೆ. ಭಾಷೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಬೇಕು. ಏಕಾಏಕಿ ಒತ್ತಡ ಹೇರಬಾರದು, ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ತ್ರಿಭಾಷಾ ಸೂತ್ರವನ್ನು ಇದೀಗ ಅಳವಡಿಸಿಕೊಳ್ಳಲಾಗಿದೆ ಎಂದರು.
ಗ್ರೆಸ್ ಮಾರ್ಕ್ಸ್ ಅಥವಾ ಕಾಪಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇದನ್ನು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಬೇಕು. 35 ಅಂಕಗಳನ್ನು ಪಡೆಯಲು ಕಷ್ಟವಾಗುವುದಿಲ್ಲ, 70 ಅಂಕ ಪಡೆಯಲು ವಿದ್ಯಾರ್ಥಿಗಳ ಶ್ರಮ ಅಗತ್ಯ. ಅದಕ್ಕಿಂತಲೂ ಹೆಚ್ಚು ಅಂಕ ಪಡೆಯಲು ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಒಟ್ಟಾರೆ ಶ್ರಮ ಅಗತ್ಯವಾಗಿದೆ ಎಂದರು.
ಕೆಪಿಎಸ್ ಶಾಲೆಯ ಸಿಡಿಸಿ ಉಪಾಧ್ಯಕ್ಷ ಎಂ.ಎನ್.ಮಹದೇವ, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್, ಉಪಾಧ್ಯಕ್ಷ ಷಹೆನ್‌ಷಾ, ಪ್ರಧಾನ ಕಾರ್ಯದರ್ಶಿ ಅಫ್ರೋಜ್, ಕೆಪಿಸಿಸಿ ಸಂಯೋಜಕ ಶೌಕತ್ ಅಲೀಖಾನ್, ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಎಂ.ರಸೂಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಶಿಫ್ಟನ್, ಅಜೀಜ್ ಸೇಠ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಸೀಂ, ಮುಖಂಡರಾದ ಇಲಿಯಾಸ್ ಬಾಬು ಕೆಸರೆ, ನವಾಜ್, ವಿನೋದ್ ಕುಮಾರ್, ದೀಪಕ್ ಶಿವಣ್ಣ, ಪ್ರಾಂಶುಪಾಲ ಎನ್.ಎಂ.ವಿಜಯೇಂದ್ರ ಕುಮಾರ್, ಶಿಕ್ಷಣ ತಜ್ಞರಾದ ನಬೀಜಾನ್ ಇತರರಿದ್ದರು.

blank
Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank