ಬ್ಯಾಡಗಿ: ತಾಲೂಕಿನಾದ್ಯಂತ ಸತತ ಮಳೆಗೆ 150ಕ್ಕೂ ಅಧಿಕ ಮನೆಗಳು ಹಾಗೂ ಐದು ಜಾನುವಾರು ದೊಡ್ಡಿಗಳು ಹಾನಿಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿರುವುದಾಗಿ ತಾಲೂಕು ಆಡಳಿತ ಅಂದಾಜಿಸಿದೆ.
ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ತಂಡ ಜಂಟಿಯಾಗಿ ತೆರಳಿ ಪರಿಶೀಲನೆ ನಡೆಸಿದ್ದು, ಪರಿಹಾರಕ್ಕೆ ಅರ್ಜಿ ಪಡೆಯಲಾಗುತ್ತಿದೆ. ಸಂಪೂರ್ಣ ಮನೆಬಿದ್ದ ಪ್ರಕರಣಗಳಿಗೆ 1.20 ಲಕ್ಷ ರೂ. ಘೊಷಣೆಯಾದ ಹಿನ್ನೆಲೆಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದು, ಸರ್ಕಾರ ಪರಿಹಾರದ ಮೊತ್ತವನ್ನು ಏರಿಕೆ ಮಾಡುವುದನ್ನು ಕಾಯುತ್ತಿರುವುದಾಗಿ ತಿಳಿದುಬಂದಿದೆ.
ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚು ಮಳೆ ಸುರಿದ ಪರಿಣಾಮ ತಾಲೂಕಿನ ಬಿಸಲಹಳ್ಳಿ 9, ಆನೂರು 8, ಚಿನ್ನಿಕಟ್ಟಿ 11, ಕದರಮಂಡಲಗಿ 17, ಶಿಡೇನೂರು 12, ಅಂಗರಕಟ್ಟಿ 7, ಚಿಕ್ಕಣಜಿ 4 ಮನೆಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಆದರೆ, ಮಳೆ ಇನ್ನೂ ನಿರಂತರವಾಗಿದ್ದು, ಮನೆ ಹಾನಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳಿಗೆ ಗೊಂದಲ ಶುರುವಾಗಿದೆ.
ಕೆರೆಯ ಪಕ್ಕದ ಜಮೀನುಗಳ ಹಾನಿ:
ಅರೆ ಮಲೆನಾಡು ಪ್ರದೇಶವಾದ ಕಾಗಿನೆಲೆ ಹಾಗೂ ಕೆಲ ಗ್ರಾಮಗಳಲ್ಲಿ ಮಳೆ ತೀವ್ರತೆಗೆ ಕೆರೆ ಪಕ್ಕದ ಹಾಗೂ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತು ತೇವಾಂಶ ಹೆಚ್ಚಳದಿಂದ ಬೆಳೆ ಹಾನಿಯಾಗಿದೆ. ಗೋವಿನಜೋಳ, ಶೇಂಗಾ, ಹತ್ತಿ, ಜೋಳ, ಸೋಯಾಬಿನ್ ಬೆಳೆ ನೀರಿನಲ್ಲಿ ನಿಂತಿವೆ. ಅನಿವಾರ್ಯವಾಗಿ ರೈತರು ಇದರಿಂದ ನಷ್ಟ ಅನುಭವಿಸಬೇಕಿದ್ದು, ಕೂಡಲೇ ಸರ್ಕಾರ ಪರಿಹಾರ ವಿತರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಪರಿಹಾರ ಕಾರ್ಯ ಆರಂಭ:
ಬೆಳೆ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ನೂರಾರು ಅರ್ಜಿಗಳು ದಾಖಲಾಗಿದ್ದು, ಅಧಿಕಾರಿಗಳ ತಂಡ ಒಂದು ಹಂತದಲ್ಲಿ ಪರಿಶೀಲನೆ ಮಾಡುತ್ತಿದೆ. ಬಳಿಕ ಕಚೇರಿಯಲ್ಲಿ ಕುಳಿತು ವರದಿಯ ಆಧಾರದ ಮೇರೆಗೆ ಅರ್ಜಿದಾರರ ಎಲ್ಲ ದಾಖಲಾತಿಗಳನ್ನು ಪುನರ್ ಪರಿಶೀಲಿಸಿ ಪರಿಹಾರ ನೀಡಲು ಸಜ್ಜಾಗುತ್ತಿದೆ. ಪ್ರತಿದಿನ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯ ಬೆಳೆ ಹಾನಿ ಹಾಗೂ ಮನೆ ಹಾನಿ ಪಟ್ಟಿ ಹಿಡಿದು ತಹಸೀಲ್ದಾರ್ ಕಚೇರಿಯತ್ತ ಧಾವಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಆಪ್ಡೇಟ್ ಮಾಡಬೇಕಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಕಾರ್ಯ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದು, ಶಿಡೇನೂರು ಗ್ರಾಮದಲ್ಲಿ ಗೋಡೆ ಬಿದ್ದು ಮೃತಪಟ್ಟ ಎಮ್ಮೆಯ ಮಾಲೀಕರಿಗೆ 20 ಸಾ.ರೂ. ಪರಿಹಾರ ತಲುಪಿಸಲಾಗಿದೆ.
ಶಾಸಕರ ಖಡಕ್ ವಾರ್ನಿಂಗ್
ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ತಾಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಮನೆ ಬಿದ್ದ ಫಲಾನುಭವಿಗಳಿಗೆ ಸಾಂತ್ವನ ಹೇಳಿದ್ದೇನೆ. ರೈತರ ಹೊಲಗಳಿಗೆ ಖುದ್ದಾಗಿ ತೆರಳಿ ಬೆಳೆ ಪರಿಶೀಲಿಸಿ ಸಂಬಂಧಿಸಿದ ಕಂದಾಯ ಸೇರಿದಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯತೋರದೆ ನೈಜ ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಸುಳ್ಳು ದಾಖಲೆ ಅಥವಾ ಜೆಸಿಬಿಯಿಂದ ಮನೆ ಕೆಡವಿರುವುದು ಗಮನಕ್ಕೆ ಬಂದಲ್ಲಿ ಅಥವಾ ಅಂತಹ ಫಲಾನುಭವಿಗಳ ಸೇರ್ಪಡೆಗೆ ಇಚ್ಚಿಸುವ ಗ್ರಾಮ ಪಂಚಾಯಿತಿ ಪಿಡಿಒ, ಇಂಜಿನಿಯರ್ಗಳನ್ನು ಅಮಾನತು ಮಾಡಲಾಗುವುದು. ಪಕ್ಷಪಾತವಿಲ್ಲದೆ ಅರ್ಹರಿಗೆ ಪರಿಹಾರ ವಿತರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.
ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಕುರಿತು ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮೂಲಕ ಅರ್ಜಿ ಪಡೆದಿದೆ. ಅರ್ಹರನ್ನು ಗುರುತಿಸಿ ಸರ್ಕಾರದ ನಿಯಮದಂತೆ ಸಂಪೂರ್ಣ ಮನೆ ಬಿದ್ದ ಫಲಾನುಭವಿಗಳಿಗೆ 1.20 ಲಕ್ಷ ರೂ., ಪಕ್ಕಾ ಮನೆ ಭಾಗಶಃ 6500 ರೂ. ಹಾಗೂ ಕಚ್ಚಾ ಮನೆ ಭಾಗಶ 4800 ರೂ. ನೀಡಲಾಗುವುದು. ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕ್ರಮಬದ್ದವಾಗಿ ಪರಿಶೀಲಿಸಲು ಸೂಚಿಸಲಾಗಿದೆ. ನಿರ್ಲಕ್ಷ್ಯತೋರಿದ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗುವುದು.
| ಫೀರೋಜ್ಷಾ ಸೋಮನಕಟ್ಟಿ, ತಹಸೀಲ್ದಾರ್
ತರಕಾರಿ ಬೆಳೆಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಕ್ಯಾಬೀಜ್ ಸೇರಿದಂತೆ ವಿವಿಧ ಬೆಳೆಗಳ 13.8 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಎನ್ಡಿಆರ್ಎಫ್ ಗೈಡ್ಲೈನ್ ಪ್ರಕಾರ ಒಟ್ಟು 2.34 ಲಕ್ಷ ರೂ. ಹಾನಿಯ ಪರಿಹಾರ ನೀಡಬಹುದಾಗಿದೆ.
| ಅಶೋಕ ಕುರುಬರ, ತೋಟಗಾರಿಕೆ ಸಹಾಯಕ ನಿರ್ದೇಶಕ