ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿದ್ದು, 4000ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಟಿಬೆಟ್ ಹೊರತುಪಡಿಸಿ ಚೀನಾದ ಎಲ್ಲ ಪ್ರಾಂತ್ಯಗಳಲ್ಲಿ ವೈರಸ್ ಹರಡಿದೆ. ಈ ನಡುವೆ, ಕೊರೊನಾ ವೈರಸ್ ಸೋಂಕಿರಬಹುದೆಂಬ ಶಂಕೆಯ ಮೇಲೆ ಕೇರಳವೊಂದರಲ್ಲೇ ಸುಮಾರು 600ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇಡಲಾಗಿದೆ. ದೆಹಲಿ ಮತ್ತು ಮುಂಬೈ ಆಸ್ಪತ್ರೆಗಳ ಐಸೊಲೇಷನ್ ವಾರ್ಡ್ಗಳಲ್ಲಿ 10ಕ್ಕೂ ಹೆಚ್ಚು ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸುಮಾರು 30,000 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ಇರುವುದು ದೃಢಪಟ್ಟಿಲ್ಲ.
ಜನವರಿ ಒಂದರಿಂದೀಚೆಗೆ ಚೀನಾಕ್ಕೆ ಹೋಗಿ ಬಂದಿರುವವರಲ್ಲಿ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಕಂಡುಬಂದಲ್ಲಿ ವೈದ್ಯರನ್ನು ಸಂರ್ಪಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ವೈರಸ್ ಹಾವಳಿ ಹೆಚ್ಚಿರುವ ವುಹಾನ್ನಿಂದ ಇತ್ತೀಚೆಗೆ ಮರಳಿದ್ದ ಒಬ್ಬ ವೈದ್ಯ ವಿದ್ಯಾರ್ಥಿ ಹಾಗೂ ಆತನ ತಾಯಿಯನ್ನು ಮಧ್ಯಪ್ರದೇಶದ ಉಜ್ಜಯನಿಯ ಆಸ್ಪತ್ರೆಗೆ ದಾಖಲಿಸಿ ನಿಗಾ ಇಡಲಾಗಿದೆ.
ಬಂಗಾಳದಲ್ಲಿ ಥಾಯ್ ಪ್ರಜೆ ಸಾವು: ಕೋಲ್ಕತದ ಖಾಸಗಿ ಆಸ್ಪತ್ರೆಯೊಂದರಲ್ಲಿ ಥಾಯ್ಲೆಂಡ್ನ ಸುರಿನ್ ನಕ್ಟೊಯ್ (32) ಎಂಬ ಮಹಿಳೆ ಸೋಮವಾರ ಮೃತಪಟ್ಟಿದ್ದು ಕೊರೊನಾ ವೈರಸ್ ಸೋಂಕು ಕಾರಣವಿರಬಹುದೆಂದು ಶಂಕಿಸಲಾಗಿದೆ. ಆಕೆ ಉಸಿರಾಟದ ತೀವ್ರ ತೊಂದರೆಯಿಂದ ಬಳಲುತ್ತಿದ್ದರು. ಚೀನಾದ ಯುವತಿ ಹು ಮಾಯ್ (28) ಎಂಬುವವರನ್ನು ವೈರಸ್ ಸೋಂಕಿನ ಶಂಕೆಯಿಂದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಏರ್ ಇಂಡಿಯಾ ಸಜ್ಜು: ವುಹಾನ್ನಲ್ಲಿ ಸಿಲುಕಿರುವ ಸುಮಾರು 250 ಭಾರತೀಯರನ್ನು ಕರೆ ತರಲು ಏರ್ ಇಂಡಿಯಾದ 423 ಆಸನಗಳ ವಿಮಾನವನ್ನು ಮುಂಬೈಯಲ್ಲಿ ಸಜ್ಜಾಗಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ತೆರಳಲು ವಿದೇಶಾಂಗ ಹಾಗೂ ಆರೋಗ್ಯ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿದೆ. ಚೀನಾದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿರುವ ವಿಮಾನಗಳಲ್ಲಿ ಪ್ರಕಟಣೆಗಳನ್ನು ಮಾಡುವಂತೆ ಹಾಗೂ ಆರೋಗ್ಯ ಕಾರ್ಡ್ ವಿತರಿಸುವಂತೆ ನಾಗರಿಕ ವಿಮಾನಯಾನ ಇಲಾಖೆ ಏರ್ ಇಂಡಿಯಾಕ್ಕೆ ಸೂಚಿಸಲಿದೆ. ನೇಪಾಳದೊಂದಿಗೆ ಗಡಿ ಹೊಂದಿರುವ ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳು ಕರೊನಾ ವೈರಸ್ ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಜಪಾನ್ ವಿಮಾನ
ವುಹಾನ್ನಲ್ಲಿ ಸುಮಾರು 600 ಜಪಾನಿಯರಿದ್ದು ಅವರನ್ನು ಕರೆತರಲು ವಿಮಾನ ಕಳಿಸಲು ಜಪಾನ್ ನಿರ್ಧರಿಸಿದೆ. ಈ ವಿಮಾನದಲ್ಲಿ ಜಪಾನಿಯರು ಮಾತ್ರವಲ್ಲದೆ ಚೀನೀಯರ ಬಳಕೆಗಾಗಿ ಮಾಸ್ಕ್ಗಳು ಮತ್ತು ರಕ್ಷಣಾ ಸೂಟ್ಗಳನ್ನೂ ಕಳಿಸಲಾಗುವುದೆಂಬುದು ವಿದೇಶಾಂಗ ಸಚಿವ ತೋಷಿಮಿತ್ಸು ಮೊತೆಗಿ ಹೇಳಿದ್ದಾರೆ. ದಕ್ಷಿಣ ಕೊರಿಯಾ ಕೂಡ ವಿಮಾನ ಕಳಿಸಲಿದೆ.
ಕೆನಡಾ, ಲಂಕಾದಲ್ಲಿ ಮೊದಲ ಪ್ರಕರಣ
ಕೆನಡಾ ಮತ್ತು ಶ್ರೀಲಂಕಾದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ ಮೊದಲ ಪ್ರಕರಣ ಪತ್ತೆಯಾಗಿದೆ. ಕೆನಡಾದ ಒಬ್ಬ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತನ ಪತ್ನಿಯನ್ನು ಕೂಡ ತಪಾಸಣೆಗೆ ಒಳಪಡಿಸಲಾಗಿದೆ. ಶ್ರೀಲಂಕಾಕ್ಕೆ ಕಳೆದ ವಾರ ಬಂದಿದ್ದ ಚೀನಿ ಮಹಿಳೆಯೊಬ್ಬರಲ್ಲಿ ಸೋಂಕಿರುವುದು ಬೆಳಕಿಗೆ ಬಂದಿದೆ ಎಂದು ಲಂಕಾ ಅಧಿಕಾರಿಗಳು ದೃಢಪಡಿಸಿದ್ದಾರೆ.
ಫುಟ್ಬಾಲ್ ಪಿಚ್ಗಳಿಗೂ ನಿರ್ಬಂಧ
ಕೊರೊನಾ ವೈರಸ್ ವಿರುದ್ಧ ಸಮರದ ಭಾಗವಾಗಿ ಫುಟ್ಬಾಲ್ ಸೇರಿ ವಿವಿಧ ಕ್ರೀಡಾ ವ್ಯವಸ್ಥೆ ಮೇಲೆ ನಿರ್ಬಂಧ ವಿಧಿಸಲು ಹಾಂಕಾಂಗ್ ನಿರ್ಧರಿಸಿದೆ. ಎಲ್ಲ ಮನೋರಂಜನಾ ಕೇಂದ್ರಗಳನ್ನು ಬುಧವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗುವುದು. ಕ್ರೀಡಾ ಕೇಂದ್ರ, ಮೈದಾನ, ಈಜು ಕೊಳ, ಬೀಚ್ಗಳು, ಕ್ಯಾಂಪ್ ಶಿಬಿರಗಳು, ಮ್ಯೂಸಿಯಂ ಮುಂತಾದ ವ್ಯವಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.