ಶಬರಿಮಲೆ ವಿವಾದದಿಂದ 100 ಕೋಟಿಗೂ ಹೆಚ್ಚು ನಷ್ಟ

ಕಾಸರಗೋಡು: ಶಬರಿಮಲೆಯಲ್ಲಿ ಮಂಡಲ, ಮಕರ ಸಂಕ್ರಮಣ ಉತ್ಸವ ಅವಧಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಆದಾಯ ಕಡಿಮೆ ಬಂದಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.

ಆದಾಯದಲ್ಲಿ 98 ಕೋಟಿ ರೂ. ಹಾಗೂ ದೇವಾಲಯದ ಆಸುಪಾಸಿನ ಅಂಗಡಿಗಳ ಹರಾಜು ಪ್ರಕ್ರಿಯೆ ಮೂಲಕ 100 ಕೋಟಿಗೂ ಹೆಚ್ಚಿನ ಕೊರತೆ ಆಗಿದೆ. ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಾಲಯಗಳ ದೈನಂದಿನ ಪ್ರಕ್ರಿಯೆಗೆ ಶಬರಿಮಲೆ ಆದಾಯ ಕಡಿಮೆಯಾಗಿರುವುದು ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ದೇವಸ್ವಂ ಮಂಡಳಿ ನೌಕರರ ವೇತನ, ಪಿಂಚಣಿ ವಿತರಣೆಗೂ ಇದು ಸಮಸ್ಯೆ ತರಲಿದೆ.

ಶಬರಿಮಲೆಗೆ ಯುವತಿಯರ ಪ್ರವೇಶ ವಿಷಯದಲ್ಲಿ ತಲೆದೋರಿದ್ದ ಸಮಸ್ಯೆ ದೇವಸ್ಥಾನದ ಆದಾಯದ ಮೇಲೆ ಪ್ರಹಾರ ನೀಡಿದೆ. ಶಬರಿಮಲೆಯಲ್ಲಿ ಆದಾಯದ ಕೊರತೆಯಿಂದ ಮಂಡಳಿ ಸರ್ಕಾರವನ್ನು ಇದಿರುನೋಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ದೇವಸ್ವಂ ಮಂಡಳಿಯ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.