ಸಂಕ್ರಾಂತಿಗೆ ಸ್ಟಾರ್ ಕಳೆ

ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಸಿಕ್ಕಿದೆ. ತುಂಬ ದಿನಗಳಿಂದ ಬೆಳ್ಳಿತೆರೆಯಿಂದ ಕಾಣೆಯಾಗಿದ್ದ ಸ್ಟಾರ್​ಗಳು ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಹಬ್ಬದ ಪ್ರಯುಕ್ತ ‘ಯಜಮಾನ’ ಮತ್ತು ‘ಸೀತಾರಾಮ ಕಲ್ಯಾಣ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾದರೆ, ಟೀಸರ್ ಮೂಲಕ ‘ಪೈಲ್ವಾನ್’ ಕುತೂಹಲ ಮೂಡಿಸಿದ್ದಾನೆ. ‘ನಟಸಾರ್ವಭೌಮ’ ಟ್ರೇಲರ್​ಗೆ ದಿನಾಂಕವೂ ನಿಗದಿಯಾಗಿದೆ.

ಶಿವನಂದಿ ಜತೆ ಯಜಮಾನ ಬಂದ

ಪಿ. ಕುಮಾರ್ ಜತೆ ಸೇರಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ‘ಯಜಮಾನ’ ಚಿತ್ರದ ಲಿರಿಕಲ್ ಹಾಡು ಮಂಗಳವಾರ (ಜ.15) ಬಿಡುಗಡೆಯಾಗಿದೆ. ‘ಹರಿ ಹರಿ ಹರಿ.. ಮುಗಿಲೆತ್ತರ ಹರಿ.. ಶಿವನತ್ತಿರ ಮೆರೆಯುವ ಶಿವನಂದಿ..’ ಹಾಡು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ರೂಪದಲ್ಲಿ ಸಿಕ್ಕಿದೆ. ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿರುವ ಈ ಹಾಡು ಈಗಾಗಲೇ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 2017ರಲ್ಲಿ ದರ್ಶನ್ ಅಭಿನಯದ ‘ತಾರಕ್’ ಚಿತ್ರ ತೆರೆಕಂಡಿತ್ತು. ಅದಾದ ಬಳಿಕ ಅವರ ಬೇರಾವ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ‘ಯಜಮಾನ’ ಚಿತ್ರದ ಮೂಲಕ ಆಗಮಿಸಲು ದರ್ಶನ್ ಸಜ್ಜಾಗಿದ್ದು, ‘ಶಿವನಂದಿ…’ ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ನಿರ್ವಪಕರಾದ ಬಿ ಸುರೇಶ ಮತ್ತು ಶೈಲಜಾ ನಾಗ್.

ಸೀತಾರಾಮರ ಮಾಂಗಲ್ಯಂ ತಂತುನಾನೇನಾ

‘ಸೀತಾರಾಮ ಕಲ್ಯಾಣ’ ಚಿತ್ರತಂಡ, ಸಂಕ್ರಾಂತಿ ಪ್ರಯುಕ್ತ ‘ಮಾಂಗಲ್ಯಂ ತಂತುನಾನೇನ..’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿಕೊಂಡಿದೆ. ಜತೆಗೆ ಮೇಕಿಂಗ್ ಫೋಟೋಗಳನ್ನೂ ಲಿರಿಕಲ್ ಹಾಡಿನಲ್ಲಿ ಅಳವಡಿಸಲಾಗಿದೆ. ಎ. ಹರ್ಷ ನಿರ್ದೇಶನದ ಚಿತ್ರಕ್ಕೆ ಅನುಪ್ ರುಬಿನ್ಸ್ ಸಂಗೀತ ನೀಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಬಿರುಸಿನ ಪ್ರಚಾರದಲ್ಲಿ ಮುಳುಗಿರುವ ಚಿತ್ರತಂಡ, ಜ.25ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಪ್ಲಾ್ಯನ್ ಮಾಡಿಕೊಂಡಿದೆ. ಅದಕ್ಕೂ ಮುನ್ನ ಅದ್ದೂರಿಯಾಗಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಜ.19ರ ಶನಿವಾರ ಮೈಸೂರಿನಲ್ಲಿ ಬಿಡುಗಡೆ ಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಿಚ್ಚೆಬ್ಬಿಸಿದ ಪೈಲ್ವಾನ್ ಟೀಸರ್

ಕನ್ನಡದ ಮಟ್ಟಿಗೆ ‘ಪೈಲ್ವಾನ್’ ತುಂಬ ಭಿನ್ನ ಸಿನಿಮಾ ಎಂಬ ಲಕ್ಷಣ ಗೋಚರಿಸುತ್ತದೆ. ಮೊದಲ ಬಾರಿಗೆ ದೇಹವನ್ನು ಹುರಿಯಾಗಿಸಿಕೊಂಡು, ಕುಸ್ತಿ ಪಟು ಲುಕ್​ನಲ್ಲಿ ‘ಕಿಚ್ಚ’ ಸುದೀಪ್ ಕಾಣಿಸಿಕೊಂಡಿರುವುದು ಚಿತ್ರದ ಪ್ರಮುಖ ಹೈಲೈಟ್. ಪೋಸ್ಟರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಟೀಸರ್ ಬಿಡುಗಡೆ ಮಾಡಿಕೊಂಡು ಅಭಿಮಾನಿಗಳ ಕಾಯುವಿಕೆಗೆ ಫುಲ್​ಸ್ಟಾಪ್ ಇಟ್ಟಿದೆ. ಕಳೆದ ವರ್ಷ ಚಿತ್ರದ ಸಣ್ಣ ಝುಲಕ್ ತೋರಿಸಿದ್ದ ನಿರ್ದೇಶಕ ಕೃಷ್ಣ, ಹೊಸ ಟೀಸರ್​ನಲ್ಲಿ ಪೈಲ್ವಾನನ ಹಲವು ಶೇಡ್​ಗಳನ್ನು ತೋರಿಸಿದ್ದಾರೆ. ಟೀಸರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಾಲಿವುಡ್ ಮಟ್ಟದಲ್ಲೂ ಸೌಂಡು ಮಾಡಿತ್ತಿದೆ. ‘ನಾವು ಶುರು ಮಾಡಿದ್ದನ್ನು ನೀವು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೀರಿ. ಸುದೀಪ್ ಮತ್ತು ಇಡೀ ತಂಡಕ್ಕೆ ಶುಭವಾಗಲಿ’ ಎಂದು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ‘ಪೈಲ್ವಾನ್’ ಬಳಗಕ್ಕೆ ಶಹಬ್ಬಾಷ್ ಎಂದಿದ್ದಾರೆ.

ನಟಸಾರ್ವಭೌಮ ಟ್ರೇಲರ್​ಗೆ ಡೇಟ್ ಫಿಕ್ಸ್

‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸಂಕ್ರಾಂತಿ ಹಬ್ಬದ ದಿನದಂದು ಟ್ರೇಲರ್ ಬಿಡುಗಡೆ ದಿನಾಂಕ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ, ಜ. 25ರ ಶುಕ್ರವಾರ ಬೆಳಗ್ಗೆ 10ಕ್ಕೆ ಟ್ರೇಲರ್ ರಿಲೀಸ್ ಆಗಲಿದ್ದು, ಫೆಬ್ರವರಿ 7ಕ್ಕೆ ಸಿನಿಮಾ ತೆರೆಗೆ ಬರಲಿದೆ. ‘ರಣವಿಕ್ರಮ’ ಬಳಿಕ ಪುನೀತ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ ಒಂದಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್​ಗೆ ನಾಯಕಿಯರಾಗಿ ರಚಿತಾ ರಾಮ್ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.

ಚಂಬಲ್​ನ ಸಂಚಾರಿ ಹೃದಯ

ಜೇಕಬ್ ವರ್ಗಿಸ್ ನಿರ್ದೇಶನದ ‘ಚಂಬಲ್’ ಚಿತ್ರದ ‘ಸಂಚಾರಿ ಹೃದಯ, ತಂಪು ಗಾಳಿ ಜತೆಗೂಡಿತಂತೆ..’ ವಿಡಿಯೋ ಹಾಡು ಬಿಡುಗಡೆಯಾಗಿದೆ. ಗ್ರಾಮೀಣ ಭಾಗದಲ್ಲಿಯೇ ಹಾಡಿನ ಅರ್ಧ ಭಾಗದ ಚಿತ್ರೀಕರಣವಾಗಿದ್ದು, ನೀನಾಸಂ ಸತೀಶ್ ಮತ್ತು ಸೋನು ಗೌಡ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಇನ್ನುಳಿದಂತೆ ಕೆಲ ದಿನಗಳ ಹಿಂದಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಂಡಿದ್ದ ‘ಚಂಬಲ್’ ತಂಡ, ಫೆ. 14ಕ್ಕೆ ಸಿನಿಮಾ ತೋರಿಸಲು ಯೋಜನೆ ಹಾಕಿದೆ.