ಸಂತ ಫಿಲೋಮಿನಾ ಚರ್ಚ್‌ಗೆ ಭದ್ರತೆ

ಮೈಸೂರು: ಶ್ರೀಲಂಕಾದಲ್ಲಿ ಚರ್ಚ್‌ಗಳ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ನಗರದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಗರದ ಲಷ್ಕರ್ ಮೊಹಲ್ಲಾದಲ್ಲಿರುವ ಸಂತ ಫಿಲೋಮಿನಾ ಚರ್ಚ್‌ಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಭಾನುವಾರ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ಅಂದಾಜು 290 ಜನ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಸಿದ್ಧ ಈ ಚರ್ಚ್ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಪೊಲೀಸರು ಕಾವಲು ಕಾಯಲಿದ್ದಾರೆ. ಜತೆಗೆ ಗಂಟೆಗೊಮ್ಮೆ ಪೊಲೀಸ್ ಇಲಾಖೆಯ ಗಸ್ತುವಾಹನ ‘ಗರುಡ’ ತಂಡ ಕೂಡ ಭೇಟಿ ನೀಡಲಿದ್ದು, ಬಾಂಬ್ ನಿಷ್ಕ್ರಿಯದಳ ನಿತ್ಯ ಇಲ್ಲಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಚರ್ಚ್ ಪ್ರವೇಶ ದ್ವಾರದಲ್ಲಿ ಪ್ರವಾಸಿಗರನ್ನು ಲೋಹ ಪರಿಶೋಧಕದ ಮೂಲಕ ತಪಾಸಣೆ ನಡೆಸುವುದರೊಂದಿಗೆ ಇಡೀ ಆವರಣದಲ್ಲಿ ಬಾಂಬ್ ಮತ್ತು ಶ್ವಾನ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಇಬ್ಬರು ಎಸ್‌ಐ, ಇಬ್ಬರು ಮುಖ್ಯ ಪೇದೆ ಸೇರಿದಂತೆ 12 ಜನ ಪೊಲೀಸರನ್ನು ನಿಯೋಜಿಸಲಾಗಿದೆ.

ಇದರೊಂದಿಗೆ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

Leave a Reply

Your email address will not be published. Required fields are marked *