‘ಹಾನಗಲ್ಲ ಮಾವು’ ಬ್ರ್ಯಾಂಡ್ ಸೃಷ್ಟಿಯಿಂದ ಲಾಭ ಸಾಧ್ಯ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ತಾಲೂಕಿನ ಮಾವು ಬೆಳೆಗಾರರರು ಮಧ್ಯವರ್ತಿಗಳಿಂದ ದೂರವುಳಿದು ಮಾರುಕಟ್ಟೆ ಸೃಷ್ಟಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಮಲ್ಲನಗೌಡ ವೀರನಗೌಡ್ರರ ಮಾವಿನ ತೋಟದಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಾವು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಾವು ಬೆಳೆ ನಷ್ಟದಲ್ಲಿಲ್ಲ, ಆದರೆ, ವೈಜ್ಞಾನಿಕತೆ ಅಳವಡಿಸಿಕೊಳ್ಳದಿರುವುದು, ಸಕಾಲಕ್ಕೆ ಗಿಡಗಳ ನಿರ್ವಹಣೆ ಮಾಡದಿರುವುದು, ಕೊಯ್ಲು ಪದ್ಧತಿ ಬದಲಾಗದಂಥ ಪ್ರಮುಖ ಕಾರಣಗಳಿಂದಾಗಿ ಮಾವು ಲಾಭದಾಯಕವಾಗಿ ಕಾಣುತ್ತಿಲ್ಲ. ಹಾನಗಲ್ಲ ಮಾವು ಎಂಬ ಹೆಸರಿನ ಮಾರುಕಟ್ಟೆ ಸೃಷ್ಟಿ ಮಾಡಿದರೆ ತಾಲೂಕಿನ ರೈತರು ತೋಟಗಾರಿಕೆಯಲ್ಲಿ ಲಾಭ ಕಾಣಲು ಸಾಧ್ಯವಿದೆ. ಮಾವು ಬೆಳೆಗೂ ವಿಮಾ ಸೌಲಭ್ಯವಿದ್ದು, ಹವಾಮಾನ ವೈಪರಿತ್ಯದ ಲಾಭ ಪಡೆಯಬಹುದು ಎಂದರು.

ತೋಟಗಾರಿಕೆ ನಿವೃತ್ತ ಅಪರ ನಿರ್ದೇಶಕ ಎಸ್.ವಿ. ಹಿತ್ತಲಮನಿ ಉಪನ್ಯಾಸ ನೀಡಿ, ಹಾನಗಲ್ಲಿನ ಮಾವು ಬೇರೆಯವರ ಬ್ರ್ಯಾಂಡ್ ನೇಮ್​ನಲ್ಲಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಅದು ಇಲ್ಲಿನ ರೈತರಿಗೆ ತಿಳಿಯುತ್ತಿಲ್ಲ. ಇಲ್ಲಿನ ರೈತರು ಬೇರೆಯವರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ನೇರವಾಗಿ ಮಾರುಕಟ್ಟೆಗಿಳಿಯುವ ಸಾಹಸ ತೋರಿದರೆ ಮಾವು ಬೆಳೆಯಲ್ಲಿ ಕೋಟಿ ರೂ. ಹಣ ಎಣಿಸಬಹುದಾಗಿದೆ. ಹಾವೇರಿ ಜಿಲ್ಲೆಯ ಹವಾಗುಣ ಮಾವಿಗೆ ಸೂಕ್ತವಾಗಿದ್ದು, ಅಲ್ಪೋನ್ಸ್ ಮಾವು ಇಲ್ಲಿನಷ್ಟು ಎಲ್ಲೂ ಸ್ವಾದಿಷ್ಟವಾಗಿರಲಾರದು ಎಂದರು.

ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಸ್.ಪಿ. ಬೋಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ವರ್ಷ 50 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತದೆ. ಪ್ರಸಕ್ತ ವರ್ಷ 2 ಸಾವಿರ ಎಕರೆ ಪ್ರದೇಶ ವಿಸ್ತರಿಸಲಾಗಿದೆ. ಇಸ್ರೇಲ್ ಮಾದರಿಯಲ್ಲಿ ಮಾವು ಬೆಳೆಗೆ ರಾಜ್ಯ-ಕೇಂದ್ರ ಸರ್ಕಾರಗಳು 3 ಕೋಟಿ ರೂ. ಅನುದಾನ ಮೀಸಲಿರಿಸಿವೆ. ರೈತ ಸಮುದಾಯ ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ವಿಜ್ಞಾನಿಗಳಾದ ಡಾ.ಟಿ.ಬಿ. ಅಳ್ಳೊಳ್ಳಿ, ಡಾ.ಪಿ. ಅಶೋಕ, ಅಬ್ದುಲ್ ಕರಿಂ, ಡಾ. ಪ್ರಭುದೇವ ಉಪನ್ಯಾಸ ನೀಡಿದರು. ವಿಚಾರ ಸಂಕಿರಣದಲ್ಲಿ ಮಾವು ಬೆಳೆಯ ಕುರಿತು ರೈತರಿಗಾಗಿ ಮಾವು ಕೈಪಿಡಿ ಬಿಡುಗಡೆಗೊಳಿಸಲಾಯಿತು.

ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಗ್ರಾಪಂ ಅಧ್ಯಕ್ಷೆ ರಮೀಜಾಬಿ ಹಂಚಿನಮನಿ, ಸಿ.ಕೆ. ಪಾಟೀಲ, ತೋಟಗಾರಿಕೆ ಜಂಟಿ ನಿದೇಶಕ ಸೋಮಶೇಖರ ಹುಲ್ಲೊಳ್ಳಿ. ಮಾವು ಅಭಿವೃದ್ಧಿ ಮಂಡಳಿ ಉಪನಿರ್ದೇಶಕ ಎಚ್. ಬಾಲಕೃಷ್ಣ, ಮಾವು ಬೆಳೆಗಾರರಾದ ಬಿ.ಎಸ್. ಅಕ್ಕಿವಳ್ಳಿ, ಮಲ್ಲನಗೌಡ ವೀರನಗೌಡ್ರ, ಕಲ್ಯಾಣಕುಮಾರ ಶೆಟ್ಟರ, ಮಲ್ಲನಗೌಡ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಮನೋಜ ದೇಸಾಯಿ ವೇದಿಕೆಯಲ್ಲಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ ಸ್ವಾಗತಿಸಿದರು.